ಕಲಬುರಗಿ: ಅಕ್ರಮ ಮರಳು ಸಾಗಣೆ ತಡೆಯಲು ಬಂದ ಪೇದೆ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ, ಪ್ರಕರಣ ದಾಖಲು

ಅಕ್ರಮ ಮರಳು ಗಣಿಗಾರಿಕೆ ತಡೆಯಲು ಬಂದ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ದುಷ್ಕರ್ಮಿಗಳು ಟ್ರ್ಯಾಕ್ಟರ್ ಹತ್ತಿಸಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರದಲ್ಲಿ ಜೂ. 15ರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ.
ಮೃತ ಪೇದೆ ಮೈಸೂರ್ ಚೌಹಾಣ್
ಮೃತ ಪೇದೆ ಮೈಸೂರ್ ಚೌಹಾಣ್

ಕಲಬುರಗಿ: ಅಕ್ರಮ ಮರಳು ಗಣಿಗಾರಿಕೆ ತಡೆಯಲು ಬಂದ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ದುಷ್ಕರ್ಮಿಗಳು ಟ್ರ್ಯಾಕ್ಟರ್ ಹತ್ತಿಸಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರದಲ್ಲಿ ಜೂ. 15ರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನು ಮೈಸೂರ್ ಚೌಹಾಣ್ ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಕರ್ತವ್ಯದಲ್ಲಿದ್ದ ನೆಲೋಗಿ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಅಕ್ರಮ ಮರಳು ಗಣಿಗಾರಿಕೆಯಡಿ ಭೀಮಾ ನದಿಯ ದಂಡೆಯಿಂದ ಮರಳು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು. ಕೂಡಲೇ ಹೆಡ್ ಕಾನ್ಸ್ ಟೇಬಲ್ ಮೈಸೂರ್ ಚೌಹಾಣ್ ಹಾಗೂ ಕಾನ್ಸ್ ಟೇಬಲ್ ಪ್ರಮೋದ್ ದೊಡ್ಡಮನಿ ಎಂಬುವರು ಬೈಕ್ ಮೇಲೆ ಸ್ಥಳಕ್ಕೆ ದೌಡಾಯಿಸಿದ್ದರು.

ಅಷ್ಟರಲ್ಲಾಗಲೇ ಟ್ರ್ಯಾಕ್ಟರ್ ಒಂದರಲ್ಲಿ ಮರಳನ್ನು ತುಂಬಿಸಿಕೊಂಡು ದುಷ್ಕರ್ಮಿಗಳು ಹೊರಟಿದ್ದು, ಟ್ರ್ಯಾಕ್ಟರನ್ನು ಪೊಲೀಸರು ಅಡ್ಡಗಟ್ಟಿದರು. ಈ ವೇಳೆ ಆರೋಪಿಗಳು ಬೈಕಿನ ಮೇಲೆಯೇ ಟ್ರ್ಯಾಕ್ಟರ್ ಚಲಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆ ಸಂದರ್ಭದಲ್ಲಿ ಬೈಕಿನಿಂದ ಇಬ್ಬರೂ ಪೇದೆಗಳು ನೆಲಕ್ಕುರಳಿದ್ದಾರೆ. ಮೈಸೂರ್ ಚೌಹಾಣ್ ಅವರ ಮೇಲೆ ಟ್ರ್ಯಾಕ್ಟರ್ನ ಹಿಂಬದಿಯ ಚಕ್ರ ಹತ್ತಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮತ್ತೊಬ್ಬಪೇದೆ ಪ್ರಮೋದ್ ದೊಡ್ಡಮನಿಯವರು ಟ್ರ್ಯಾಕ್ಟರ್ ನಡಿ ಬೀಳುವುದರಿಂದ ತಪ್ಪಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದ ತಿಳಿದುಬಂದಿದೆ.

ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿದ್ದಪ್ಪ ಹಾಗೂ ಸಾಯಿಬಣ್ಣ ಎಂಬುವರೇ ಪೇದೆಗಳ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ್ದಾಗಿ ತನಿಖೆ ವೇಳೆ ತಿಳಿದುಬಂದಿದೆ. ಈ ಸಂಬಂಧ ನೆಲೋಗಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಸಚಿವ ಪ್ರಿಯಾಂಕ್ ಖರ್ಗೆಯಿಂದ ಪರಿಹಾರ ಭರವಸೆ

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆಯವರು, ಅಕ್ರಮ ಮರಳುಗಾರಿಕೆ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತೊಮ್ಮೆ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದೇನೆ. ಇದೊಂದು ಅಪಘಾತವೇ ಅಥವಾ ಅಕ್ರಮ ಮರಳು ಸಾಗಾಟಗಾರರು ಟ್ರಾಕ್ಟರ್ ಹರಿಸಿ ಹತ್ಯೆ ಮಾಡಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ ಎಂದು ಹೇಳಿದರು.

ಅಲ್ಲದೆ, ಮೃತ ಪೊಲೀಸ್ ಪೇದೆ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು, ಸರ್ಕಾರದ ವತಿಯಿಂದ ಶೀಘ್ರದಲ್ಲಿಯೇ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com