ತುಮಕೂರು: ಅಕ್ಕಿ ನಿರಾಕರಿಸಿದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ತುಮಕೂರು: ಅನ್ನಭಾಗ್ಯ ಯೋಜನೆ ಜಾರಿಗೆ ಅಕ್ಕಿ ವಿತರಿಸದ ಕೇಂದ್ರ ಸರ್ಕಾರದ ವಿರುದ್ಧ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಭಾನುವಾರ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಮುರಳೀಧರ ಹಾಲಪ್ಪ ನೇತೃತ್ವದಲ್ಲಿ ನಗರದ ಬಿಜಿಎಸ್ ವೃತ್ತದಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಮುಖಂಡರು ಚೀಲಗಳಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಇಟ್ಟು, ಭತ್ತ, ರಾಗಿ, ಜೋಳ ರಾಶಿಗಳನ್ನು ಹಾಕಿ ಪೂಜೆ ಸಲ್ಲಿಸಿ, ಭಾರತೀಯ ಆಹಾರ ಪ್ರಾಧಿಕಾರಕ್ಕೆ ಕಳುಹಿಸುವ ವಿನೂತನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ನೆರೆದಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಅವರು, ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಆಹಾರ ಪ್ರಾಧಿಕಾರವು ಅಕ್ಕಿ ಖರೀದಿಗೆ ಅವಕಾಶ ನಿರಾಕರಿಸಿರುವುದು ಖಂಡನೀಯ. ಬಿಜೆಪಿ ದ್ವೇಷ ರಾಜಕಾರಣ ಸಾಧಿಸುತ್ತಾ, ಬಡವರ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಜುಲೈ ತಿಂಗಳಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿರಿದ್ದು, ಪಾರದರ್ಶಕ ವ್ಯವಸ್ಥೆಯಲ್ಲಿ ಖರೀದಿಗೆ ಸರ್ಕಾರವು ಎಫ್'ಸಿಐಯನ್ನು ಕೇಳಲಾಗಿತ್ತು. ಕೇಂದ್ರದ ಬಳಿ 7 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಇದೆ. ಸರ್ಕಾರವು ಕೇವಲ 2.85 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಕೇಳಲಾಗಿತ್ತು. ದಾಸ್ತಾನು ಇದ್ದರು ಅಕ್ಕಿ ನೀಡಲು ನಿರಾಕರಿಸಿದೆ ಎಂದು ವಾಗ್ದಾಳಿ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಅವರು ಮಾತನಾಡಿ, ಪ್ರತಿಭಟನೆಯ ಸಂಕೇತವಾಗಿ ಆಹಾರ ಧಾನ್ಯಗಳನ್ನು ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಕಳುಹಿಸಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರದ ಈ ನಡೆ ಪ್ರಮುಖವಾಗಿ ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆ ಅನುಷ್ಠಾನಕ್ಕೆ ಕುತ್ತು ತಂದಿದೆ ಕೇಂದ್ರದ ನಿರ್ಧಾರದಿಂದ ಸುಮಾರು 1.28 ಕೋಟಿ ಕುಟುಂಬಗಳು ಮತ್ತು 4.42 ಕೋಟಿ ಜನರು ತೊಂದರೆಗೊಳಗಾಗಲಿದ್ದಾರೆ ಎಂದು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ