ಅನ್ನಭಾಗ್ಯ: ಕರ್ನಾಟಕಕ್ಕೆ ಅಕ್ಕಿ ಪೂರೈಸಲು ಪಂಜಾಬ್‌ ಸರ್ಕಾರ ಸಿದ್ಧ; ಸಿಎಂ ಸಿದ್ದರಾಮಯ್ಯಗೆ AAP ಪತ್ರ

ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹಗ್ಗ-ಜಗ್ಗಾಟ ಮುಂದುವರೆದಿರುವಂತೆಯೇ ಕರ್ನಾಟಕಕ್ಕೆ ಅಕ್ಕಿ ನೀಡಲು ಪಂಜಾಬ್ ಸರ್ಕಾರ ಸಿದ್ಧವಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ಸಿಎಂಗೆ ಆಪ್ ಪತ್ರ
ಕರ್ನಾಟಕ ಸಿಎಂಗೆ ಆಪ್ ಪತ್ರ

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹಗ್ಗ-ಜಗ್ಗಾಟ ಮುಂದುವರೆದಿರುವಂತೆಯೇ ಕರ್ನಾಟಕಕ್ಕೆ ಅಕ್ಕಿ ನೀಡಲು ಪಂಜಾಬ್ ಸರ್ಕಾರ ಸಿದ್ಧವಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಹೌದು.. ರಾಜ್ಯದ ಅನ್ನಭಾಗ್ಯ ಯೋಜನೆಗೆ ಅಗತ್ಯವಿರುವ ಹೆಚ್ಚುವರಿ ಅಕ್ಕಿ ಒದಗಿಸಲು ಪಂಜಾಬ್‌ನ ಎಎಪಿ ಸರ್ಕಾರ ಸಿದ್ಧವಿರುವುದಾಗಿ ಎಎಪಿ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ. ಸಿಎಂಗೆ ಬರೆದ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೃಥ್ವಿ ರೆಡ್ಡಿ ಅವರು ಹಂಚಿಕೊಂಡಿದ್ದಾರೆ.

ಪತ್ರದಲ್ಲಿ ‘ನಿಮ್ಮ ಸರ್ಕಾರ ಪ್ರಸ್ತಾಪಿಸಿರುವ ಅನ್ನಭಾಗ್ಯ ಯೋಜನೆಗೆ ಬೇಕಿರುವ ಹೆಚ್ಚುವರಿ ಅಕ್ಕಿ ನೀಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿರಾಕರಿಸಿರುವುದು ಆಶ್ಚರ್ಯ ಮತ್ತು ದುಃಖದ ಸಂಗತಿಯಾಗಿದೆ. ನಮ್ಮಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಇರಬಹುದು, ಆದರೆ ಅವುಗಳನ್ನು ಲೆಕ್ಕಿಸದೆ, ಎಲ್ಲಾ ಪಕ್ಷಗಳು ದೇಶದ ಜನರಿಗೆ ಸಹಾಯ ಮಾಡುವ ನೀತಿಗಳನ್ನು ಬೆಂಬಲಿಸಬೇಕು ಎಂದು ಆಮ್ ಆದಿ ಪಾರ್ಟಿ ಬಲವಾಗಿ ನಂಬುತ್ತದೆ. ಅಗತ್ಯವಿರುವ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿರುವುದು, ಬಿಜೆಪಿ ಸರ್ಕಾರದ ಬಡವರ ವಿರೋಧಿ ಧೋರಣೆ ಮಾತ್ರವಲ್ಲದೆ ಬಿಜೆಪಿಯೇತರ ಆಡಳಿತದ ರಾಜ್ಯಗಳ ಮೇಲಿನ ಮಲತಾಯಿ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಇಂತಹ ವರ್ತನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

‘ರಾಜ್ಯದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ನಾನು ಈ ವಿಷಯದ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಗತ್ಯ ಬಿದ್ದರೆ ಪಂಜಾಬ್‌ನಿಂದ ಅಕ್ಕಿ ಪೂರೈಸಲು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ರಾಜ್ಯದ ಜನರ ಆಹಾರ ಭದ್ರತೆಯ ಹಿತದೃಷ್ಟಿಯಿಂದ ತನ್ನ ಪಾತ್ರ ನಿಭಾಯಿಸಲು ಎಎಪಿ ಬದ್ಧವಾಗಿದೆ. ಈ ವಿಷಯವನ್ನು ಮುಂದಕ್ಕೆ ಕೊಂಡೊಯ್ಯಲು ನಾನು ವಿನಂತಿಸುತ್ತೇನೆ. ಈ ವಿಷಯವನ್ನು ಸುಗಮಗೊಳಿಸಲು ನಿಮಗೆ ಎಎಪಿ ರಾಜ್ಯ ಘಟಕದಿಂದ ಯಾವುದೇ ಸಹಾಯ ಬೇಕಾದರೂ ನನಗೆ ತಿಳಿಸಿ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com