ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಅಧಿಕಾರಿಗಳು.
ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಅಧಿಕಾರಿಗಳು.

ಅಕ್ರಮ ಮರಳು ದಂಧೆ ಪ್ರಕರಣ: ಅಧಿಕಾರಿಗಳ ಬೆವರಿಳಿಸಿದ ಸಚಿವ ಪ್ರಿಯಾಂಕ್ ಖರ್ಗೆ

ಜಿಲ್ಲೆಯಲ್ಲಿ ನಡೆಯುತ್ತಿರುವ ಗಾಂಜಾ, ಜೂಜು, ಕ್ರಿಕೆಟ್ ಗ್ಯಾಂಬ್ಲಿಂಗ್, ಮರಳು ದಂಧೆ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಿಮಗೆ ಸಾಧ್ಯವಾಗುತ್ತಿಲ್ಲವೇಕೆ? ಎಂದು ಜಿಲ್ಲಾ ಉಸ್ತುವಾರಿ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Published on

ಕಲಬುರಗಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಗಾಂಜಾ, ಜೂಜು, ಕ್ರಿಕೆಟ್ ಗ್ಯಾಂಬ್ಲಿಂಗ್, ಮರಳು ದಂಧೆ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಿಮಗೆ ಸಾಧ್ಯವಾಗುತ್ತಿಲ್ಲವೇಕೆ? ನಿಮಗೆ ಗೊತ್ತಿಲ್ಲದೆ ಈ ಎಲ್ಲ ದಂಧೆ ನಡೆಯುತ್ತಿವೆಯಾ? ಎಂದು ಜಿಲ್ಲಾ ಉಸ್ತುವಾರಿ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಸಚಿವರು ಅಧಿಕಾರಿಗಳ ಬೆವರಿಳಿಸಿದರು.

ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ನಿಮಗೆ ತಡೆಯಲು ಸಾಧ್ಯವಾಗುತ್ತಿಲ್ಲ ಎಂದರೆ ನೀವು ಕೂಡಾ ಅವರೊಂದಿಗೆ ಶಾಮೀಲಾಗಿದ್ದೀರಿ ಎಂದು ಅರ್ಥ. ಇತ್ತೀಚಿಗೆ ಪೊಲೀಸ್ ಇಲಾಖೆಯ ಪೇದೆಯೊಬ್ಬರು ಅಕ್ರಮ ಮರಳು ಸಾಗಾಣಿಕೆ ತಡೆಯಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ನಿಮ್ಮೊಂದಿಗೆ ಕೆಲಸ ಮಾಡುವ ಸಿಬ್ಬಂದಿಯ ಸಾವಾಗಿದೆ. ನಿಮಗೆ ಏನು ಅನಿಸುವುದಿಲ್ಲವೇ ? ಎಂದು ಪ್ರಶ್ನಿಸಿದರು.

ಅಪ್ರಾಪ್ತರಿಗೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಕಿರಾಣಿ ಅಂಗಡಿಗಳಲ್ಲಿಯೂ ಮದ್ಯ ಮಾರಾಟ ನಡೆಯುತ್ತಿದೆ. ಜಿಲ್ಲೆಯಲ್ಲಿ ಥರ್ಡ್ ಕ್ವಾಲಿಟಿ ಲಿಕ್ಕರ್ ಹಾಗೂ ಕಳ್ಳಭಟ್ಟಿ ಮಾರಾಟ ಮಾಡಲಾಗುತ್ತಿರುವ ಕುರಿತು ದೂರುಗಳಿವೆ. ಅಬಕಾರಿ ಇಲಾಖೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಚಿವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, 300 ಕ್ಕೂ ಅಧಿಕ ಕೇಸುಗಳು ದಾಖಲಿಸಲಾಗಿದೆ ಎಂದರು.

ಸಿಪಿಐ, ಪಿಎಸ್ಐ ಹಾಗೂ‌ ಪಿಸಿಗಳೇ ರೌಡಿಗಳನ್ನು ಸಾಕುತ್ತಿದ್ದೀರಿ. ನಿಮ್ಮಿಂದಲೇ ಜಿಲ್ಲೆಯ ಮರ್ಯಾದೆ ಹಾಳಾಗುತ್ತಿದೆ. ರೌಡಿಗಳ ಹುಟ್ಟುಹಬ್ಬಕ್ಕೆ ಪೊಲೀಸ್ ಅಧಿಕಾರಿಗಳು ಹೋಗುತ್ತಾರೆ. ಆಚರಣೆಗೆ ಐಬಿಗಳಲ್ಲಿ ಅನುಮತಿ ನೀಡಲಾಗುತ್ತಿದೆ. ಈ ಹಿಂದಿನ‌ ಪೊಲೀಸ್ ಅಧಿಕಾರಿಯೊಬ್ಬರು ರೌಡಿಯೊಬ್ಬನ ಹುಟ್ಟುಹಬ್ಬಕ್ಕೆ ಹೋಗಿ‌ ವಿಷ್ ಮಾಡಿ ಫೋಟೋ ತೆಗೆಸಿಕೊಂಡಿದ್ದಾರೆ. ಪೊಲೀಸರು ರೌಡಿಗಳಿಗೆ ಅಣ್ಣಾ ಎಂದು ಸಂಬೋಧಿಸುತ್ತಾರೆ. ನಿಮಗೆ ನಾಚಿಕೆಯಾಗುವುದಿಲ್ಲವೇ? ನಿಮ್ಮ ಯೂನಿಫಾರ್ಮ್ ಗಾದರೂ ಮರ್ಯಾದೆ ಬೇಡವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆ, ಇಂತಹ ಚಟುವಟಿಕೆಗಳು ಕೂಡಲೇ ನಿಲ್ಲಬೇಕು. ನೀವು ರೌಡಿಗಳೊಂದಿಗೆ ಬೆರೆಯುವುದು ಕಂಡುಬಂದರೆ ಕ್ರಮಕೈಗೊಳ್ಳುತ್ತೇನೆ. ಇದು ನಿಮ್ಮ‌ಮರ್ಯಾದೆಯಲ್ಲ, ನಮ್ಮ ಸರ್ಕಾರದ ಮರ್ಯಾದೆ ಪ್ರಶ್ನೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಬಹಳ ವರ್ಷಗಳಿಂದ ಒಂದೇ ಜಾಗದಲ್ಲಿ ಠಿಕಾಣಿ ಹೂಡಿರುವ ಸಿಬ್ಬಂದಿ ಹಾಗೂ ರೈಟರ್ಸ್ ಗಳನ್ನು ವರ್ಗಾ ಮಾಡಿ ಎಂದು ನಗರ ಪೊಲೀಸ್ ಕಮೀಷನರ್ ಹಾಗೂ ಎಸ್​ಪಿ‌ಗೆ ಸೂಚಿಸಿದರು‌.

ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ದ ನಡೆಯುತ್ತಿರುವ ಇಲಾಖೆ ತನಿಖೆಗಳನ್ನು ಪೂರ್ಣಗೊಳಿಸುವಂತೆ ಕಮೀಷನರ್ ಹಾಗೂ ಎಸ್​ಪಿ‌ಗೆ ಸೂಚಿಸಿದ ಖರ್ಗೆ, ನಗರ ವ್ಯಾಪ್ತಿಯ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಹೆಚ್ಚಾಗಿ ನಡೆಯುತ್ತಿದೆ. ಈ ಕೂಡಲೇ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಯೂನಿವರ್ಸಿಟಿ ಮತ್ತು ಅಶೋಕ್ ನಗರ ಪೊಲೀಸ್ ಠಾಣೆಗಳು ವಿವಾದಿತ ಸಿವಿಲ್ ಕೇಸ್ ಗಳ ಸೆಟಲ್​ಮೆಂಟ್ ಅಡ್ಡಾಗಳಾಗಿದ್ದರೂ, ಅಧಿಕಾರಿಗಳು ಬೀಟ್​ಗೆ ಹೋಗಲ್ಲ ಎಂದು ದೂರುಗಳು ಬಂದಿವೆ ಎಂದ ಸಚಿವರು ಈ ವಿಷಯವನ್ನು ಕಮೀಷನರ್ ಗಮನಕ್ಕೆ‌ ತಂದು, ಸರಿಪಡಿಸುವಂತೆ ಸೂಚಿಸಿದರು. ಪ್ರತಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಿಂದ ನಮ್ಮಿಬ್ಬರು‌ ಸಚಿವರಿಗೆ 20,000 ಕೊಡಬೇಕು ಎಂದು ವದಂತಿಗಳು ಸೃಷ್ಟಿಯಾಗಿವೆ. ಯಾರಾದರೂ ನಮ್ಮ ಹೆಸರು ಹೇಳಿ ವಸೂಲಿಗಿಳಿದರೆ, ಅಂತವರ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದು‌ ಎಚ್ಚರಿಸಿದರು.‌

ಅಕ್ರಮ ಮರಳು ಸಾಗಾಣಿಕೆ ಮಾಡುವ ಜಾಲದಿಂದ ಪೊಲೀಸ್ ಇಲಾಖೆಯ ಅಧಿಕಾರಿಗಳ ನೀಡುವ ದರಪಟ್ಟಿಯನ್ನು ಓದಿ ಹೇಳಿದ ಸಚಿವರು, ಈ ಪಟ್ಟಿ ಪ್ರಕಾರ ಅಕ್ರಮ ಮರಳುದಾರರಿಂದ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಖಡಕ್ ಸೂಚನೆ ನೀಡಿ, ಯಾರ ವಿರುದ್ದ ಗಡಿಪಾರು ಆದೇಶಗಳು ಇವೆಯೋ ಅವುಗಳನ್ನು ಹಾಗೆ ಮುಂದುವರೆಸಿ ಎಸ್​​ಪಿಗೆ ಸೂಚಿಸಿದರು.

ಸರ್ಕಾರದ ಬಗ್ಗೆ ತಪ್ಪು ಮಾಹಿತಿ‌ ನೀಡಿ ಸೋಷಿಯಲ್ ಮೀಡಿಯಾದಲ್ಲಿ ಜಾತಿ ಜಾತಿಗಳ ನಡುವೆ ಜಗಳ ಹಚ್ಚುವವರನ್ನು ಪತ್ತೆ ಮಾಡಿ. ಪೇದೆ ಹತ್ಯೆೆಯನ್ನು ನಾನೇ ಮಾಡಿಸಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಡುತ್ತಿದೆ. ಹಾಗಾಗಿ‌ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಿ. ಗೋವು ರಕ್ಷಕರು ಎಂದು ಹೇಳಿಕೊಂಡು ಕೆಲ ಸಂಘಟನೆಗಳ ವ್ಯಕ್ತಿಗಳು ಸಮಾಜದಲ್ಲಿ ಕೋಮುಗಲಭೆ ಸೃಷ್ಟಿ ಸಲು ಯತ್ನಿಸುವವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಎಂದು ಸೂಚಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ ಮಾತನಾಡಿ ಓವರ್ ಲೋಡ್ ಮರಳು ಸಾಗಾಣಿಕೆ ಮಾಡುವ ವಾಹನಗಳನ್ನು ಸೀಜ್ ಮಾಡಿ ಕೇಸು ದಾಖಲಿಸಿ ಎಂದು ಸೂಚಿಸಿದರು. ನಗರದಲ್ಲಿ 22 ಕ್ಲಬ್ ಗಳು ನಡೆಯುತ್ತಿವೆ. ಯಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿವೆ ಎಂಬುದರ ಕುರಿತು ಪಟ್ಟಿ ನೀಡುತ್ತೇನೆ. ಅಂತಹ ಕ್ಲಬ್ ಗಳ ಮೇಲೆ ದಾಳಿ ನಡೆಸಿ. ಆ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ. ಅಕ್ರಮ ಚಟುವಟಿಕೆ ನಡೆಸುವ ಯಾವ ಕ್ಲಬ್ ಸಹ ನಗರ ವ್ಯಾಪ್ತಿಯಲ್ಲಿ ಇರಬಾರದು ಎಂದು ಡಿಸಿಪಿ ಶ್ರೀನಿವಾಸಲುಗೆ ಡಾ ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com