ಕಲಬುರಗಿ: ಟ್ರ್ಯಾಕ್ಟರ್ ಹರಿಸಿ ಪೇದೆ ಹತ್ಯೆ; ಕರ್ತವ್ಯ ಲೋಪ ಎಸಗಿದ ಮೂವರು ಪೊಲೀಸ್ ಅಧಿಕಾರಿಗಳ ಅಮಾನತು
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಮರಳು ಮಾಫಿಯಾವೊಂದು ಪೊಲೀಸ್ ಪೇದೆ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿದ ಕೆಲವೇ ದಿನಗಳ ನಂತರ ಕರ್ತವ್ಯ ಲೋಪ ಎಸಗಿದ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಮರಳು ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, ನೆಲೋಗಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಕರ್ತವ್ಯದ ವೇಳೆ ಸಾವಿಗೀಡಾಗಿದ್ದಾರೆ ಎಂದು ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ತಿಳಿಸಿದ್ದಾರೆ.
'ಟ್ರ್ಯಾಕ್ಟರ್ ಮಾಲೀಕ ಸಾಯಿಬರ್ನಾ ಮತ್ತು ಟ್ರ್ಯಾಕ್ಟರ್ ಚಾಲಕನ ಸಹೋದರನನ್ನು ಹಿಡಿಯಲು ನಮ್ಮ ತಂಡ ಅಲ್ಮೇಲ್‌ಗೆ ಹೋಗಿತ್ತು. ಆತನನ್ನು ಹಿಡಿದು ಕರೆದುಕೊಂಡು ಬರುತ್ತಿದ್ದ ವೇಳೆ, ಆತ ಮೂತ್ರ ವಿಸರ್ಜನೆ ಮಾಡುವ ನೆಪದಲ್ಲಿ ವಾಹನ ನಿಲ್ಲಿಸಿ ಓಡಿ ಹೋಗಲು ಯತ್ನಿಸಿದ್ದಾರೆ. ನಮ್ಮ ಪಿಎಸ್‌ಐ ಅವರನ್ನು ಹಿಡಿಯಲು ಪ್ರಯತ್ನಿಸಿದರು ಮತ್ತು ಈ ಗಲಾಟೆಯಲ್ಲಿ ಅವರು ಪೊಲೀಸರ ಮೇಲೆ ಎರಡು ಬಾರಿ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಪಿಎಸ್ಐ ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ. ನಮ್ಮ ಪಿಎಸ್‌ಐ ಚಿಕಿತ್ಸೆ ಪಡೆಯುತ್ತಿದ್ದಾರೆ' ಎಂದು ಇಶಾ ಪಂತ್ ಹೇಳಿದ್ದಾರೆ.
ಆರೋಪಿ ಸಾಯಿಬರ್ನಾನನ್ನು ಇಲ್ಲಿಗೆ ಕರೆತರಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಜೂನ್ 15 ರಂದು ಕಲಬುರಗಿಯ ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅನ್ನು 51 ವರ್ಷದ ಮಯೂರ ಚೌಹಾಣ್ ಎಂದು ಗುರುತಿಸಲಾದ ಹತ್ಯೆಯಾದ ಹೆಡ್ ಕಾನ್ಸ್‌ಟೇಬಲ್ ತಡೆಯಲು ಪ್ರಯತ್ನಿಸುತ್ತಿದ್ದಾಗ, ಆರೋಪಿ ಅವರ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿದ್ದರು ಎಂದು ಎಸ್‌ಪಿ ತಿಳಿಸಿದ್ದಾರೆ.
ಪ್ರಮುಖ ಆರೋಪಿ ಟ್ರ್ಯಾಕ್ಟರ್ ಚಾಲಕನನ್ನು ಜೂನ್ 16 ರಂದು ಬಂಧಿಸಲಾಯಿತು. ಹೆಡ್ ಕಾನ್‌ಸ್ಟೇಬಲ್ ಹತ್ಯೆ ಮಾಡಿದವರ ವಿರುದ್ಧ ಐಪಿಸಿ ಸೆಕ್ಷನ್ 302, 333, 307, 379, 504, ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ಪೇದೆ ಸಾವಿನ ಬಗ್ಗೆ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. 'ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, 'ಗೂಂಡಾಗಿರಿ' ನಡೆಯುತ್ತಿದೆ. ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು' ಎಂದು ಬಿಜೆಪಿ ಶಾಸಕ ಆರ್ ಅಶೋಕ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ