ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೊಳ್ಳೆಗಳ ಕಾಟ: ಪ್ರಯಾಣಿಕರ ಪರದಾಟ ಕೇಳುವವರಾರು?
ಬೆಂಗಳೂರು: ಎಂಟು ತಿಂಗಳ ಹಿಂದೆ ಉದ್ಘಾಟನೆಗೊಂಡು ಗಮನ ಸೆಳೆದಿದ್ದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ನಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಪ್ರಯಾಣಿಕರು ಕಿರಿಕಿರಿ ಎದುರಿಸುವಂತಾಗಿದೆ.
ಸೊಳ್ಳೆಗಳ ಕಡಿತ ಪ್ರಯಾಣಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.
ಬೆಂಗಳೂರಿನಿಂದ ಭುವನೇಶ್ವರಕ್ಕೆ ಹೋಗುವ ಉದ್ಯಮಿಯೊಬ್ಬರು ಮಾತನಾಡಿ, ಜೂನ್ 18 ರಂದು ಕುಟುಂಬದ 7 ಸದಸ್ಯರೊಂದಿಗೆ ವಿಮಾನ ನಿಲ್ದಾಣಕ್ಕೆ ಹೋಗಲಾಗಿತ್ತು. ವಿಮಾನಕ್ಕಾಗಿ 3 ಗಂಟೆಗಳ ಕಾಲ ಕಾಯುತ್ತಿದ್ದೆವು. ಈ ವೇಳೆ ಸೊಳ್ಳೆಗಳು ಮೈ ಕೈಗಳ ಮೇಲೆಲ್ಲಾ ಕಚ್ಚಿದ್ದವು. ನಿಲ್ದಾಣದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಸೀಟುಗಳನ್ನು ಬದಲಾಯಿಸುತ್ತಿದ್ದೆವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಪಕ್ಕದ ಕುರ್ಚಿಯಲ್ಲಿ ಚಿಕ್ಕ ಹುಡುಗಿ ಕುಳಿತುಕೊಂಡಿದ್ದಳು. ಸೊಳ್ಳೆ ಕಡಿತದಿಂದ ಆಕೆಯ ಕೈ ಸಂಪೂರ್ಣ ಕೆಂಪಾಗಾಗಿತ್ತು. ಈ ವೇಳೆ ಆಕೆಗೆ ಬೇರೆಡೆ ಕುಳಿತುಕೊಳ್ಳುವಂತೆ ಸೂಚಿಸಿದೆ. ಈ ವೇಳೆ ವಿಮಾನ ನಿಲ್ದಾಣದ ಸಿಬ್ಬಂದಿ ಆಕೆಯ ಬಳಿ ಬಂದು ಕ್ಷಮೆ ಯಾಚಿಸಿದರು. ಸಮಸ್ಯೆ ದೂರಾಗಿಸಲು ಎಲ್ಲಾ ಪ್ರಯತ್ನಗಳನ್ನೂ ನಡೆಸಲಾಯಿತು. ಆದರೆ, ಯಾವುದೂ ಕೆಲಸಕ್ಕೆ ಬರುತ್ತಿಲ್ಲ. ಅಸಂಖ್ಯಾತ ಸಸ್ಯಗಳಿರುವ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಲಾಂಜ್‌ನಲ್ಲಿ ಆಹಾರ ನೀಡುವುದರಿಂದ ಸ್ಪ್ರೇ ಮಾಡಲು ಸಾಧ್ಯವಾಗುತ್ತಿಲ್ಲ. ಹರ್ಬಲ್ ಸ್ಪ್ರೇಗಳನ್ನು ಪ್ರಯತ್ನಿಸಿದ್ದೆವು. ಆದರೆ ಅವುಗಳಲ್ಲಿ ಹೆಚ್ಚಿನವು ಗಿಡಮೂಲಿಕೆಗಳಿಂದ ಮಾಡಲ್ಪಟ್ಟಿರುವುದಿಲ್ಲ ಎಂದು ಹೇಳಿದ್ದರು ಎಂದು ಉದ್ಯಮಿ ತಿಳಿಸಿದ್ದಾರೆ.
ಸಲಹಾ ಸಂಸ್ಥೆಯೊಂದರ ನಿರ್ದೇಶಕಿಯಾಗಿರುವ ಪ್ರಯಾಣಿಕ ಶಿಪ್ರಾ ಬರನ್ವಾಲ್ ಎಂಬುವವರು, ಸೊಳ್ಳೆಯ ಕಚ್ಚಿ ತಮ್ಮ ಕೈ ಮೇಲಾಗಿರುವ ಗಾಯದ ಚಿತ್ರವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಟರ್ಮಿನಲ್ 2 ಹಸಿರಿನಿಂದ ಸುಂದರವಾಗಿದೆ. ಆದರೆ, ಸೊಳ್ಳೆಗಳ ಸಮಸ್ಯೆಗಳಿಗೆ ಎನಾದರೂ ಮಾಡುತ್ತೀರಾ ಎಂದು ಬರೆದುಕೊಂಡಿದ್ದಾರೆ.
ಕೆಐಎ ಟರ್ಮಿನಲ್ 2 ಕಲಾತ್ಮಕವಾಗಿ. ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿದೆ. ಆದರೆ, ಸೊಳ್ಳೆಗಳಿಂದ ಮುಕ್ತವಾಗಿಲ್ಲ, ನಮ್ಮ ಪ್ರೀತಿಪಾತ್ರರಿಗಾಗಿ ಕಾಯಲು ಬಂದಾಗ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಎಲ್ಲಿಗೆ ಹೋಗಬೇಕು ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಈ ನಡುವೆ ಸಮಸ್ಯೆಯನ್ನು ಗಮನಕ್ಕೆ ತಂದವರಿಗೆ ಕೆಐಎ ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಧನ್ಯವಾದಗಳನ್ನು ಹೇಳಿದೆ. ಆದರೆ, ಸಮಸ್ಯೆಗೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಸಮಸ್ಯೆಗೆ ವಿಮಾನ ನಿಲ್ದಾಣದ ವಕ್ತಾರರು ಕೂಡ ಯಾವುದೇ ಪ್ರತಿಕ್ರಿಯೆಗಳನ್ನೂ ನೀಡಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ