ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ವಿದ್ಯಾರ್ಥಿಗಳ ಬ್ಯಾಗ್ ತೂಕ ಇಳಿಸಿದ ಶಿಕ್ಷಣ ಇಲಾಖೆ

ಶಾಲಾ ಮಕ್ಕಳ ಬ್ಯಾಗ್ ಹೊರೆ ಇಳಿಸುವ ಬಗ್ಗೆ ಶಿಕ್ಷಣ ಇಲಾಖೆ ಬುಧವಾರ ಮಹತ್ವದ ಆದೇಶ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್ ಹೊರೆ ಇಳಿಸುವ ಬಗ್ಗೆ ಶಿಕ್ಷಣ ಇಲಾಖೆ ಬುಧವಾರ ಮಹತ್ವದ ಆದೇಶ ಹೊರಡಿಸಿದೆ.

1 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ ತೂಕವನ್ನು ಶಿಕ್ಷಣ ಇಲಾಖೆ ನಿಗದಿ ಮಾಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಈ ಸಂಬಂಧ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.

ಈ ನಿಯಮ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತದೆ. ಕಡ್ಡಾಯವಾಗಿ ಎಲ್ಲಾ ಶಾಲೆಗಳು ಈ ನಿಯಮವನ್ನು ಪಾಲನೆ ಮಾಡಬೇಕೆಂದು ಶಿಕ್ಷಣ ಇಲಾಖೆ ಆದೇಶಿಸಿದೆ.

ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಂತೆ 1ರಿಂದ 2ನೇ ತರಗತಿಯ ಮಕ್ಕಳಿಗೆ 1.5ರಿಂದ 2 ಕೆ.ಜಿ, 3ರಿಂದ 5ನೇ ತರಗತಿ 2ರಿಂದ 3 ಕೆ.ಜಿ, 6ರಿಂದ 8 ತರಗತಿ 3ರಿಂದ 4 ಕೆ.ಜಿ ಹಾಗೂ 9ರಿಂದ 10ನೇ ತರಗತಿಯ ಮಕ್ಕಳಿಗೆ 4ರಿಂದ 5 ಕೆ.ಜಿ.ವರೆಗೆ ಶಾಲಾ ಬ್ಯಾಗ್ ತೂಕ ನಿಗದಿ ಮಾಡಲಾಗಿದೆ.

ಇದೇ ವೇಳೆ, 1 ಮತ್ತು 2ನೇ ತರಗತಿ ಶಿಕ್ಷಣವು ಬೋಧನೆಯ ಬುನಾದಿ ಹಂತವಾಗಿದ್ದು, ವಿದ್ಯಾರ್ಥಿಗಳು ಸಕ್ರಿಯವಾಗಿ ಶಾಲೆಗಳಲ್ಲಿಯೇ ಚಟುವಟಿಕೆ ಮೂಲಕ ಕಲಿಯಲು ಆದ್ಯತೆ ನೀಡಬೇಕು. ಈ ವಿದ್ಯಾರ್ಥಿಗಳಿಗೆ ಹೋಮ್‌ ವರ್ಕ್ ನೀಡಬಾರದು ಎಂದು ಇಲಾಖೆ ಸೂಚಿಸಿದೆ.

ಅದೇ ರೀತಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಭಾಷೆ, ಗಣಿತ, ಪರಿಸರ ವಿಜ್ಞಾನ ವಿಷಯ ಹೊರತುಪಡಿಸಿ ಮತ್ಯಾವುದೇ ಪಠ್ಯಕ್ರಮವನ್ನು ನಿಗದಿಪಡಿಸದಂತೆ ಕ್ರಮ ವಹಿಸಬೇಕು. 3ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಲಿಕಾ ಬಲವರ್ಧನೆ ಚಟುವಟಿಕೆಗಳನ್ನು ಶಾಲೆಗಳಲ್ಲಿಯೇ ನಿರ್ವಹಿಸಬೇಕು. ಅತ್ಯಂತ ಅಗತ್ಯವಿರುವ ಹಾಗೂ ಪೂರಕವಾಗಿರುವಂತಹ ಚಟುವಟಿಕೆಗಳಿಗೆ ಸೀಮಿತ ಪ್ರಮಾಣದಲ್ಲಿ ಹೋಮ್‌ ವರ್ಕ್ ನೀಡಬೇಕು.

ವಿದ್ಯಾರ್ಥಿಗಳಿಗೆ ಅತಿ ಹೆಚ್ಚಿನ ಪುಸ್ತಕಗಳನ್ನು ತರುವುದನ್ನು ತಪ್ಪಿಸಲು ವೇಳಾಪಟ್ಟಿ ರೂಪಿಸಿ ಆ ಪ್ರಕಾರವೇ ತರಗತಿಗಳನ್ನು ನಡೆಸಬೇಕು. ಸಾಧ್ಯವಾದಷ್ಟು ಅಭ್ಯಾಸ ಹಾಳೆಗಳನ್ನು ಶಾಲೆಗಳಲ್ಲಿಯೇ ಸಂಗ್ರಹಿಸಿಡಲು ಸೂಚಿಸಬೇಕು. ಶಾಲಾ ಗ್ರಂಥಾಲಯಗಳಲ್ಲಿ ಶಬ್ಧಕೋಶ, ಸಮಾನಾರ್ಥಕ ಪದಕೋಶ, ಅಟ್ಲಾಸ್‌, ಜ್ಞಾನ ವಿಜ್ಞಾನ ಕೋಶಗಳಂತಹ ಪರಾಮರ್ಶ ಸಾಮಗ್ರಿಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗುವಂತೆ ಹಾಗೂ ಮಕ್ಕಳು ಇವುಗಳನ್ನು ಅವಶ್ಯಕತೆ ಇದ್ದಾಗ ಬಳಸಿಕೊಳ್ಳುವ ವ್ಯವಸ್ಥೆ ಮಾಡಬೇಕೆಂದು ಇಲಾಖೆ ಸೂಚಿಸಿದೆ.

ಇನ್ನು 100ರಿಂದ 200 ಪುಟ ಮೀರದ ನೋಟ್‌ ಪುಸ್ತಕಗಳನ್ನು ಬಳಸುವಂತೆ ಕ್ರಮ ವಹಿಸಬೇಕು. ಕಡಿಮೆ ಖರ್ಚಿನ ಹಗುರವಾದ ಹಾಗೂ ದೀರ್ಘ ಕಾಲ ಬಾಳಿಕೆ ಬರುವಂತಹ ಶಾಲಾ ಬ್ಯಾಗ್‌ ಹಾಗೂ ಇತರೆ ಸಾಮಗ್ರಿಗಳನ್ನು ಬಳಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ಮಕ್ಕಳು ಶಾಲೆಗೆ ಕುಡಿಯುವ ನೀರು ಕೊಂಡೊಯ್ಯುವುದನ್ನು ತಪ್ಪಿಸಲು ಕುಡಿಯುವ ನೀರಿನ ವ್ಯವಸ್ಥೆಯನ್ನು ಶಾಲೆಯಲ್ಲೇ ಕಲ್ಪಿಸಬೇಕು. ಶಾಲಾ ಬ್ಯಾಗ್ ಹೊರೆಯಿಂದ ಆಗುವ ದುಷ್ಪರಿಣಾಮಗಳನ್ನು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು. ನಿಯಮ ಉಲ್ಲಂಘಿಸುವ ಶಿಕ್ಷಕರು, ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com