ವಿದ್ಯುತ್ ದರ ಏರಿಕೆಗೆ ವಿರೋಧ: ರಾಜ್ಯದ ಹಲವೆಡೆ ವ್ಯಾಪಾರಿಗಳು, ಸಣ್ಣ ಕೈಗಾರಿಕೆಗಳ ಮಾಲೀಕರಿಂದ ಪ್ರತಿಭಟನೆ

ಇತ್ತೀಚಿನ ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ವ್ಯಾಪಾರಿಗಳು ಮತ್ತು ಸಣ್ಣ ಕೈಗಾರಿಕೆಗಳ ಮಾಲೀಕರು ಗುರುವಾರ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನಾ ರ‍್ಯಾಲಿಗಳನ್ನು ನಡೆಸಿದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇತ್ತೀಚಿನ ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ವ್ಯಾಪಾರಿಗಳು ಮತ್ತು ಸಣ್ಣ ಕೈಗಾರಿಕೆಗಳ ಮಾಲೀಕರು ಗುರುವಾರ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನಾ ರ‍್ಯಾಲಿಗಳನ್ನು ನಡೆಸಿದರು.

ಹುಬ್ಬಳ್ಳಿ ಮೂಲದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ‘ಬಂದ್’ಗೆ ಕರೆ ನೀಡಿದ ನಂತರ ಕೈಗಾರಿಕೋದ್ಯಮಿಗಳು ಮತ್ತು ಸಣ್ಣ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು.

ರಾಜ್ಯದ ಪ್ರತಿಯೊಂದು ಮನೆಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ 'ಗೃಹ ಜ್ಯೋತಿ' ಯೋಜನೆಗಾಗಿ ರಾಜ್ಯ ಸರ್ಕಾರವು ಈ ವಾರದ ಆರಂಭದಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಈ ವೇಳೆ ವಿದ್ಯುತ್ ದರ ಏರಿಕೆ ಖಂಡಿಸಿ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕರ್ನಾಟಕ ಬಂದ್‌ಗೆ ಕರೆ ನೀಡಿತ್ತು.

ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಬೆಳಗಾವಿ, ಬಳ್ಳಾರಿ, ವಿಜಯನಗರ, ದಾವಣಗೆರೆ, ಕೊಪ್ಪಳ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಬ್ಯಾನರ್, ಭಿತ್ತಿಪತ್ರ, ಫಲಕಗಳನ್ನು ಹಿಡಿದುಕೊಂಡು ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು ಮೆರವಣಿಗೆ ನಡೆಸಿದರು.
ಸರ್ಕಾರವು ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿದರು.

ಬೆಳಗಾವಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಹಾಗೂ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳ ಮಾಲೀಕರು ಬ್ಯಾನರ್, ಫಲಕಗಳನ್ನು ಹಿಡಿದು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ಕೆಸಿಸಿಐ ಹಂಗಾಮಿ ಅಧ್ಯಕ್ಷ ಸಂದೀಪ್ ಬಿಡಸಾರಿಯಾ ಮಾತನಾಡಿ, ವಿದ್ಯುತ್ ದರ ಏರಿಕೆಯು ಶೇ 50 ರಿಂದ 70 ರಷ್ಟು ಹೆಚ್ಚಾಗಿದೆ. ಇದು ಸಣ್ಣ ಉದ್ಯಮಗಳ ಮೇಲೆ ಆಳವಾದ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿಯಲ್ಲಿ ಪ್ರತಿಭಟನಾಕಾರರು, ದರ ಏರಿಕೆಯಿಂದಾಗಿ ಅನೇಕ ಕೈಗಾರಿಕೆಗಳು ನೆರೆಯ ರಾಜ್ಯಕ್ಕೆ ತೆರಳಲು ಯೋಜಿಸುತ್ತಿವೆ ಎಂದು ಆರೋಪಿಸಿದರು.

ಬಂದ್ ಕರೆಗೆ ಪ್ರತಿಕ್ರಿಯೆಯಾಗಿ ರಾಜ್ಯದ ಹಲವು ಭಾಗಗಳಲ್ಲಿ ಅನೇಕ ಅಂಗಡಿಗಳನ್ನು ಮುಚ್ಚಲಾಗಿತ್ತು ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸಲಾಯಿತು. ಜಿಲ್ಲಾ ಕೇಂದ್ರವಾದ ಬೀದರ್ ಪಟ್ಟಣದಲ್ಲಿ, ಅನೇಕ ಅಂಗಡಿಗಳು ಮುಚ್ಚಲ್ಪಟ್ಟವು ಮತ್ತು ಮುಖ್ಯ ಮಾರುಕಟ್ಟೆಯು ಬಂದ್‌ನಿಂದ ನಿರ್ಜನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com