ಅಕ್ಕಿ ದೊರೆತಿಲ್ಲ, ಅನ್ನಭಾಗ್ಯ ಯೋಜನೆ ಜಾರಿ ವಿಳಂಬವಾಗಬಹುದು: ಸಿಎಂ ಸಿದ್ದರಾಮಯ್ಯ

ಅನ್ನಭಾಗ್ಯ ಯೋಜನೆಗೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿಯ ಅಗತ್ಯವಿದೆ. ಅಷ್ಟು ಅಕ್ಕಿ ಇನ್ನೂ ದೊರೆತಿಲ್ಲ. ಹೀಗಾಗಿ ಯೋಜನೆ ಜಾರಿ ವಿಳಂಬವಾಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದರು.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಹಾಸನ: ಅನ್ನಭಾಗ್ಯ ಯೋಜನೆಗೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿಯ ಅಗತ್ಯವಿದೆ. ಅಷ್ಟು ಅಕ್ಕಿ ಇನ್ನೂ ದೊರೆತಿಲ್ಲ. ಹೀಗಾಗಿ ಯೋಜನೆ ಜಾರಿ ವಿಳಂಬವಾಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದರು.

ನಾಡಪ್ರಭು ಕೆಂಪೇಗೌಡರ 514ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ ಕಾರ್ಯಕ್ರಮಕ್ಕೆ 5 ಕೆಜಿ ಅಕ್ಕಿ ನೀಡುತ್ತಿದ್ದೇವೆ. ಒಟ್ಟು 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದೆವು. ಯೋಜನೆ ಜಾರಿಗೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿಯ ಅಗತ್ಯವಿದೆ. ಅಷ್ಟು ಅಕ್ಕಿ ನಮಗೆ ದೊರೆಯುತ್ತಿಲ್ಲ. ಕೇಂದ್ರ ಸರ್ಕಾರದ ಅಧೀನದ ಎಫ್.ಸಿ.ಐ ಅಕ್ಕಿ ನೀಡುವುದಾಗಿ ಒಪ್ಪಿ ನಂತರ ಕೊಡಲಾಗುವುದಿಲ್ಲ ಎಂದು ಪತ್ರ ಬರೆದು.. ಇದು ಕೇಂದ್ರ ಸರ್ಕಾರದ ಷಡ್ಯಂತ್ರ ಎಂದು ಕಿಡಿಕಾರಿದರು.

ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದ್ದು, ವಿವಿಧ ಸಂಸ್ಥೆಗಳಿಂದ ಅಕ್ಕಿ ಪಡೆಯಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಅಗತ್ಯವಿರುವ 2.29 ಲಕ್ಷ ಟನ್ ಅಕ್ಕಿ ಸಿಕ್ಕ ನನಂತರವೇ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

ಅನ್ನಭಾಗ್ಯ ಯೋಜನೆಗೆ ಅಕ್ಕಿ ಅಗತ್ಯವಿರುವ ಸಂಬಂಧ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೆ. ಆದರೆ, ಆ ಮಾತುಕತೆ ವ್ಯರ್ಥ್ವವಾಯಿತು. ಕೇಂದ್ರದ ನೀತಿಗಳು ಬಡವರು ಮತ್ತು ಜನಸಾಮಾನ್ಯರ ವಿರುದ್ಧವಾಗಿವೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರದ ನಿರ್ಧಾರದಿಂದ ರಾಜ್ಯ ಸರ್ಕಾರಕ್ಕೆ ಅಸಮಾಧಾನವಿಲ್ಲ, ವಿವಿಧ ರಾಜ್ಯಗಳಿಂದ ಅಕ್ಕಿ ಪಡೆದ ನಂತರ ಖಂಡಿತವಾಗಿಯೂ ಯೋಜನೆಯನ್ನು ಜಾರಿಗೊಳಿಸುತ್ತದೆ ಎಂದು ತಿಳಿಸಿದರು.

 2022-23 ನೇ ಸಾಲಿನಲ್ಲಿ ಯುವ ನಿಧಿ ಕಾರ್ಯಕ್ರಮದಡಿ ನಿರುದ್ಯೋಗಿ ಪದವೀಧರರು, ಡಿಪ್ಲೊಮಾ ಮಾಡಿದವರಿಗೆ 6 ತಿಂಗಳೊಳಗೆ ಕೆಲಸ ದೊರೆಯದೇ ಹೋದರೆ, ಪದವೀಧರರಿಗೆ 3 ಸಾವಿರ ಹಾಗೂ ಡಿಪ್ಲೊಮಾ ಮಾಡಿದವರಿಗೆ 1500 ರೂ.ಗಳನ್ನು 24 ತಿಂಗಳು ನೀಡಲಾಗುವುದು. 2.50 ಲಕ್ಷ ಹುದ್ದೆಗಳನ್ನು ಒಂದೇ ಸಾರಿಗೆ ಭರ್ತಿ ಮಾಡಲಾಗುವುದಿಲ್ಲ. ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಐದು ಗ್ಯಾರೆಂಟಿಗಳನ್ನು ಈಡೇರಿಸಲು ವಾರ್ಷಿಕವಾಗಿ 59,000 ಕೋಟಿ ರೂ. ಬೇಕಾಗುವುದು. ಐದು ಗ್ಯಾರೆಂಟಿಗಳನ್ನು ಜಾರಿ ಮಾಡುವುದು ನಿಶ್ಚಿತ ಎಂದು ಪುನರುಚ್ಛರಿಸಿದರು.

ಇದೇ ವೇಳೆ ಕೇಂದ್ರ ನೀಡುತ್ತಿರುವ 5 ಕೆಜಿ ಉಚಿತ ಅಕ್ಕಿ ಹಾಗೂ ಘೋಷಣೆ ಮಾಡಲಾಗಿರುವ 10 ಕೆಜಿ ಅಕ್ಕಿ ಯೊಂದಿಗೆ ತಲಾ 15 ಕೆಜಿ ಅಕ್ಕಿ ನೀಡಿ, ಇಲ್ಲದಿದ್ದರೆ, ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಅವರು ಕಿಡಿಕಾರಿದರು.

ಯೋಜನೆ ಜಾರಿಗೆ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅಥವಾ ಮಾಜಿ ಸಚಿವ ಆರ್ ಅಶೋಕ ಅವರ ಅನುಮತಿ ಪಡೆಯಬೇಕಾಗಿಲ್ಲ. ಅಧಿಕಾರದಲ್ಲಿದ್ದಾಗ ಹಲವು ಬಾರಿ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ಅವರು ವಿಫಲರಾಗಿದ್ದಾರೆ. ಹೀಗಾಗಿ ಅವರಿಗೆ ಸರ್ಕಾರವನ್ನು ಟೀಕಿಸುವ ನೈತಿಕತೆ ಇಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com