ಪ್ರತಿಭಟನೆಗೆ ಮಣಿದು ಸಿದ್ದರಾಮಯ್ಯ ಯೋಜನೆ ಕೈಬಿಟ್ಟರು, ನಾನಾಗಿದ್ದರೆ ಬಗ್ಗುತ್ತಿರಲಿಲ್ಲ: ಸ್ಟೀಲ್ ಬ್ರಿಡ್ಜ್ ನಿರ್ಮಾಣ ಕುರಿತು ಡಿಕೆಶಿ ಸುಳಿವು

ಪ್ರತಿಭಟನೆಗೆ ಮಣಿದು ಸಿದ್ದರಾಮಯ್ಯ ಯೋಜನೆ ಕೈಬಿಟ್ಟರು, ನಾನಾಗಿದ್ದರೆ ಬಗ್ಗುತ್ತಿರಲಿಲ್ಲ ಎಂದು ಹೇಳುವ ಮೂಲಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮತ್ತೆ ಸ್ಟೀಲ್ ಬ್ರಿಡ್ಜ್ ಯೋಜನೆ ಕೈಗೆತ್ತಿಕೊಳ್ಳುವ ಸುಳಿವು ನೀಡಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಪ್ರತಿಭಟನೆಗೆ ಮಣಿದು ಸಿದ್ದರಾಮಯ್ಯ ಯೋಜನೆ ಕೈಬಿಟ್ಟರು, ನಾನಾಗಿದ್ದರೆ ಬಗ್ಗುತ್ತಿರಲಿಲ್ಲ ಎಂದು ಹೇಳುವ ಮೂಲಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮತ್ತೆ ಸ್ಟೀಲ್ ಬ್ರಿಡ್ಜ್ ಯೋಜನೆ ಕೈಗೆತ್ತಿಕೊಳ್ಳುವ ಸುಳಿವು ನೀಡಿದ್ದಾರೆ.

ಕಳೆದ ಬಾರಿ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಮುಂದಾದಾಗ ಹಣ ಹೊಡೆಯುತ್ತಾರೆ ಎಂದು ಜೋರಾಗಿ ಪ್ರತಿಭಟನೆ ಮಾಡಿದರು. ಆಗ ಸಿದ್ದರಾಮಯ್ಯ ಹಾಗೂ ಜಾರ್ಜ್ ಯೋಜನೆ ಕೈ ಬಿಟ್ಟರು. ನಾನಾಗಿದ್ದರೆ ಯಾವುದಕ್ಕೂ ಬಗ್ಗುತ್ತಿರಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, 'ಈಗಲೂ ನಾನು ಕೆಲವು ನಿರ್ಧಾರ ಕೈಗೊಳ್ಳುತ್ತೇನೆ. ಪ್ರತಿಭಟನೆ ಮಾಡುವವರು ಸಿದ್ಧರಾಗಲಿ. ನಾನು ಮಾತ್ರ ಕೆಲಸದ ವಿಚಾರದಲ್ಲಿ ಮುಂದೆ ಸಾಗುತ್ತಿರುತ್ತೇನೆ ಎಂದರು.

ಮಾನವನ ಗುಣಗಳಲ್ಲಿ ನಂಬಿಕೆ ಬಹಳ ಶ್ರೇಷ್ಠವಾದ ಗುಣ. ನೀವು ನಮ್ಮ ಮೇಲೆ ನಂಬಿಕೆ ಇಟ್ಟಿದ್ದೀರಿ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ನಾವು ಪ್ರತಿಮೆಗಿಂತ ಪ್ರಗತಿ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತೇವೆ. ಈ ಹಿಂದಿನ ಸರ್ಕಾರಗಳು ಅನೇಕ ಕೆಲಸ ಮಾಡಿವೆ. ಅವರ ಆಚಾರ ವಿಚಾರಕ್ಕೆ ತಕ್ಕಂತೆ ಕೆಲಸ ಮಾಡಿವೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸಬೇಕು. ಇದಕ್ಕಾಗಿ ಮೇಕೆದಾಟು ಯೋಜನೆ ಮುಂದಾಗಿದ್ದೇವೆ. ಇದರ ಜತೆಗೆ ಕಸದ ಸಮಸ್ಯೆ ನಿವಾರಣೆ ಮಾಡಬೇಕು. ಕೆಂಪೇಗೌಡರು ಹೇಗೆ ಎಲ್ಲಾ ಸಮಾಜದವರನ್ನು ಒಟ್ಟಾಗಿ ತೆಗೆದುಕೊಂಡು ಬೆಂಗಳೂರು ಕಟ್ಟಿದ್ದಾರೋ ಹಾಗೆಯೇ ಅವರ ಹಾದಿಯಲ್ಲಿ ನಾವು ಸಾಗಬೇಕು. ಬೆಂಗಳೂರು ಕಟ್ಟಬೇಕು ಎಂದರು.

ನಾವು ಪ್ರತಿಮೆಗಿಂತ ಪ್ರಗತಿಯಲ್ಲಿ ನಂಬಿಕೆ ಇಟ್ಟಿರುವ ಜನ. ಪ್ರತಿಮೆ ಬೇಕು. ಅದರ ಜತೆಗೆ ಪ್ರಗತಿಯತ್ತ ಹೆಚ್ಚು ಗಮನ ಹರಿಸಬೇಕು. ಕೆಂಪೇಗೌಡರು ಹಾಕಿರುವ ಮರಕ್ಕೆ ನಾವು ನೀರು, ಗೊಬ್ಬರ ಹಾಕಿ ಬೆಳೆಸಬೇಕು. ಕುವೆಂಪು ಅವರು ಈ ನಾಡನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಸಂದೇಶ ನೀಡಿದ್ದಾರೆ. ಅವರ ಈ ಸಂದೇಶ ಕೆಂಪೇಗೌಡರ ಆಚಾರ ವಿಚಾರಕ್ಕೆ ಹೋಲುತ್ತದೆ. ಕೆಂಪೇಗೌಡರು ಎಲ್ಲಾ ಜಾತಿ, ಧರ್ಮದವರು ಸಮನಾಗಿ ಬದುಕಲು ಚೌಕಟ್ಟು ಹಾಕಿಕೊಟ್ಟು ಬೆಂಗಳೂರನ್ನು ಯಾವ ರೀತಿ ಬೆಳೆಸಬೇಕು ಎಂದು ಅಡಿಪಾಯ ಹಾಕಿಕೊಟ್ಟಿದ್ದಾರೆ. ನಾವು ಅದರ ಮೇಲೆ ಸಾಗುತ್ತಿದ್ದೇವೆ. ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ 3 ಕೆ ಗಳಾದ ಕೆಂಪೇಗೌಡ, ಕೆಂಗಲ್ ಹನುಮಂತಯ್ಯ, ಎಸ್.ಎಂ ಕೃಷ್ಣ ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ ಎಂದರು.

ದೇವರು ನಮಗೆ ಅವಕಾಶ ಮಾತ್ರ ನೀಡುತ್ತಾನೆ. ಆದನ್ನು ಬಳಸಿಕೊಂಡು ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನನಗೆ ಸಿಕ್ಕಿರುವ ಅವಕಾಶದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಪ್ರತಿಯೊಬ್ಬರ ಸಹಕಾರ, ಸಲಹೆ, ಅಭಿಪ್ರಾಯ ಕೇಳುತ್ತಿದ್ದೇನೆ. ಬೆಂಗಳೂರು ಅಭಿವೃದ್ಧಿ ಕುರಿತ ಚರ್ಚೆಗೆ ಬಿಜೆಪಿಯ ಕೆಲವು ನಾಯಕರು ಬಂದಿದ್ದರು, ಮತ್ತೆ ಕೆಲವರು ಬಂದಿರಲಿಲ್ಲ. ಅದು ಅವರ ಇಚ್ಛೆ. ಅವರು ಬಂದರೂ ಸರಿ, ಬಾರದಿದ್ದರೂ ಸರಿ. ನಮ್ಮ ಗಾಡಿ ಮುಂದೆ ಸಾಗುತ್ತಿರುತ್ತದೆ. ನಮ್ಮ ವಿರುದ್ಧ ಎಷ್ಟೇ ಟೀಕೆ ಮಾಡಲಿ. ಕೆಲಸಗಳು ಉಳಿಯುತ್ತವೆ, ಟೀಕೆಗಳು ಸಾಯುತ್ತವೆ.

ಬೆಂಗಳೂರಿನ ಎಲ್ಲ ಪ್ರದೇಶ ಯೋಜಿತವಾಗಿ ನಿರ್ಮಾಣವಾಗಿಲ್ಲ. ಆದರೂ ಬೆಂಗಳೂರು ನಗರವನ್ನು ನಿಭಾಯಿಸಬೇಕು. ಕೆಂಗಲ್ ಹನುಮಂತಯ್ಯ ಅವರು ಪಾಲಿಕೆ ಅಧ್ಯಕ್ಷರಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 16 ಲಕ್ಷ ಇತ್ತು. ಈಗ ಬೆಂಗಳೂರಿನಲ್ಲಿ 1.60 ಕೋಟಿ ಜನ ವಾಸ ಮಾಡುತ್ತಿದ್ದಾರೆ. ಶೇ.42ರಷ್ಟು ಐಟಿ ತೆರಿಗೆ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ. ಇಲ್ಲಿ ಕಲಿತು ಬೆಳೆದವರು ವಿಶ್ವದ ಮೂಲೆ ಮೂಲೆಯಲ್ಲಿ ಸಾಧನೆ ಮಾಡುತ್ತಿದ್ದಾರೆ. ನಮ್ಮ ಹಿರಿಯರು ಬೆಂಗಳೂರಿನ ಅಭಿವೃದ್ಧಿಗೆ ಹಿಂದೆ ಕೆಂಗೇರಿ, ಯಲಹಂಕದಂತಹ ಸ್ಯಾಟಲೈಟ್ ಟೌನ್ ನಿರ್ಮಾಣ ಮಾಡಿದರು. ಈಗ ಮತ್ತೆ ಆ ರೀತಿಯ ಆಲೋಚನೆ ಇದೆ. ಸಂಚಾರಿ ದಟ್ಟಣೆ ನಿಯಂತ್ರಣಕ್ಕೆ ಪ್ರತ್ಯೇಕ ಯೋಜನೆ ರೂಪಿಸಬೇಕಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com