ಹಿಂದುತ್ವ ವಿರೋಧಿ ಪೋಸ್ಟ್: ನಟ ಚೇತನ್'ಗೆ ಜಾಮೀನು ಮಂಜೂರು

ಹಿಂದುತ್ವದ ವಿರುದ್ಧ ಪೋಸ್ಟ್ ಮಾಡಿ ಬಂಧನಕ್ಕೊಳಗಾಗಿದ್ದ ನಟ ಚೇತನ್'ಗೆ 32ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ನಟ ಚೇತನ್
ನಟ ಚೇತನ್
Updated on

ಬೆಂಗಳೂರು: ಹಿಂದುತ್ವದ ವಿರುದ್ಧ ಪೋಸ್ಟ್ ಮಾಡಿ ಬಂಧನಕ್ಕೊಳಗಾಗಿದ್ದ ನಟ ಚೇತನ್'ಗೆ 32ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ನಟ ಚೇತನ್‌ ಕುಮಾರ್‌ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ 32ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಜೆ ಲತಾ ಅವರು ಜಾಮೀನು ಭದ್ರತೆಯಾಗಿ ಇಪ್ಪತ್ತೈದು ಸಾವಿರ ರೂಪಾಯಿ ವೈಯಕ್ತಿಕ ಬಾಂಡ್‌ ಅಥವಾ ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತೆ ನೀಡಲು ಆದೇಶಿಸಿದರು. ಅಲ್ಲದೇ, ತನಿಖೆಗೆ ಸಹಕರಿಸುವಂತೆ ನಿರ್ದೇಶಿಸಿದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಸುನೀಲ್‌ ಕುಮಾರ್‌ ಗುನ್ನಾಪುರ ಅವರು “ಉರಿಗೌಡ ಮತ್ತು ನಂಜೇಗೌಡ ಎಂಬವವರು ಟಿಪ್ಪುವನ್ನು ಕೊಂದರು ಎಂಬುದನ್ನು ಬಿಜೆಪಿ ಮತ್ತು ಸಂಘ ಪರಿಹಾರ ಸೃಷ್ಟಿಸಿದ್ದು, ಚೇತನ್‌ ಅವರು ಇದು ಒಂದು ಸುಳ್ಳು ಎಂದು ಹೇಳಿದ್ದಾರೆ. ಇದಕ್ಕೆ ಇತಿಹಾಸದಲ್ಲಿ ಯಾವುದೇ ದಾಖಲೆ ಇಲ್ಲ ಎಂದು ಒಕ್ಕಲಿಗ ಸಮುದಾಯ ಸ್ವಾಮೀಜಿ ಹೇಳಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ಸುಳ್ಳುಗಳನ್ನು ಪ್ರಶ್ನೆ ಮಾಡಬೇಕು. ಚೇತನ್‌ ಅವರು ಅದನ್ನು ಮಾಡಿದ್ದಾರೆ. ಒಕ್ಕಲಿಗರು ಮತ್ತು ಮುಸ್ಲಿಮ್‌ ಸಮುದಾಯದ ವಿರುದ್ಧ ವೈಷಮ್ಯ ಉಂಟು ಮಾಡುವ ಕೃತ್ಯವನ್ನು ಮಾಡಬಾರದು ಎಂದು ಚೇತನ್‌ ಹೇಳಿದ್ದಾರೆ. ಹೀಗಾಗಿ, ಐಪಿಸಿ ಸೆಕ್ಷನ್‌ 295 ಇಲ್ಲಿ ಅನ್ವಯಿಸುವುದಿಲ್ಲ.

"1927ರಲ್ಲಿ ಮಾರ್ಚ್‌ 20ರಂದು ಬಾಬಾ ಸಾಹೇಬ್‌ ಮತ್ತು ಸಾವಿರಾರು ದಲಿತರು ಮಹಾಡ್‌ ನಗರದ ಚೌಡರ್‌ ಕೆರೆಯಲ್ಲಿ ನೀರು ಕುಡಿದ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಅಸ್ಪೃಶ್ಯತೆಯ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಮೂಲಕ ದುರ್ಬಲ ವರ್ಗದವರ ಪರವಾಗಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿ ಯಾರ ಬಗ್ಗೆಯೂ ಅವರು ಕೆಟ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಯಾವುದೇ ಕೃತ್ಯವನ್ನೂ ಚೇತನ್‌ ಅವರು ಎಸಗಿಲ್ಲ" ಎಂದು ವಾದಿಸಿದ್ದರು.

ಸರ್ಕಾರಿ ಅಭಿಯೋಜಕರು “ಚೇತನ್‌ ಪದೇಪದೇ ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ವಿಭಿನ್ನ ಕೋಮುಗಳ ನಡುವೆ ದ್ವೇಷ ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ, ಅವರಿಗೆ ಜಾಮೀನು ಮಂಜೂರು ಮಾಡಬಾರದು” ಎಂದು ಆಕ್ಷೇಪಿಸಿದ್ದರು.

ಬೆಂಗಳೂರಿನ ಶಿವಕುಮಾರ್‌ ಎಂಬವರು ನೀಡಿದ ದೂರಿನ ಅನ್ವಯ ಶೇಷಾದ್ರಿಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 295ಎ ಮತ್ತು 505ಬಿ ಅಡಿ ಎಫ್‌ಐಆರ್‌ ದಾಖಲಿಸಿ, ಮಂಗಳವಾರ ಚೇತನ್‌ ಅವರನ್ನು ಬಂಧಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com