ಬೆಂಗಳೂರು: ವಿಧಾನಸೌಧ ಮುಂದೆ ಸ್ಥಾಪಿಸಿರುವ ಸಮಾಜ ಪರಿವರ್ತಕ, ಜಗಜ್ಯೋತಿ ಬಸವೇಶ್ವರ ಹಾಗೂ ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ಮಾ.26ರ ಸಂಜೆ 6.30ಕ್ಕೆ ನಡೆಯಲಿದ್ದು, ಕೇಂದ್ರ ಸಚಿವ ಅಮಿತ್ ಶಾ ಅವರು ಪ್ರತಿಮೆ ಅನಾವರಣ ಮಾಡಲಿದ್ದಾರೆ.
ವಿಧಾನಸೌಧದ ಆವರಣದಲ್ಲಿರುವ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮಧ್ಯಭಾಗದಲ್ಲಿ ಈ ಇಬ್ಬರೂ ಮಹಾನೀಯರ ನಾಲ್ಕು ಮೀಟರ್ ಎತ್ತರದ ಅಶ್ವಾರೂಢ ಪ್ರತಿಮೆಗಳ ಸ್ಥಾಪನೆಯಾಗಲಿದೆ.
ಸುಮಾರು ರೂ.8 ಕೋಟಿ ವೆಚ್ಚದಲ್ಲಿ ಪ್ರತಿಮೆ ಸಿದ್ಧಗೊಂಡಿದ್ದು, ಕಳೆದ ಜನವರಿಯಲ್ಲಿ ಪ್ರತಿಮೆ ಸ್ಥಾಪನೆ ಸಂಬಂಧ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.
ಕಾರ್ಯಕ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶೀ ಕೇಂದ್ರ ಸ್ವಾಜೀಮಿ, ಆದಿಚುಂಚನಗಿರಿ ಮಠದ ನಿರ್ಮಲಾನಾಂದನಾಥ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸಿದ್ದಗಂಗಾಮಠದ ಸಿದ್ದಲಿಂಗ ಸ್ವಾಮೀಜಿ, ಮಾದಾರ ಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಗುರುಗುಂಡಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆಂದು ತಿಳಿದುಬಂದಿದೆ.
ಈಗಾಗಲೇ ವಿಧಾನಸೌಧದ ಮುಂಭಾಗದಲ್ಲಿ ನಾಡಪ್ರಭು ಕೆಂಪೇಗೌಡ ಮತ್ತು ಬಸವೇಶ್ವರರ ಪ್ರತಿಮೆಗಳನ್ನು ಕ್ರೇನ್ ಮೂಲಕ ಅಳವಡಿಸಲಾಗಿದ್ದು, ವಿಧಾನಸೌಧದ ಆವರಣ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.
ಅಮಿತ್ ಶಾ ಭೇಟಿ ಹಿನ್ನೆಲೆ ಬೆಂಗಳೂರಿನ ಹೃದಯ ಭಾಗದಲ್ಲಿ ತಟ್ಟಲಿದೆ ಟ್ರಾಫಿಕ್ ಬಿಸಿ ತಟ್ಟಲಿದ್ದು, ಸುಗಮ ಸಂಚಾರಕ್ಕೆ ಸಂಚಾರಿ ಪೊಲೀಸರು ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಿದ್ದಾರೆ. ಬಳ್ಳಾರಿ ರಸ್ತೆ, ಹೆಬ್ಬಾಳ ಸರ್ಕಲ್, ಮೇಖ್ರಿ ಸರ್ಕಲ್, ಕಾವೇರಿ ಜಂಕ್ಷನ್, ರಾಜಭವನ ರಸ್ತೆ, ಇನ್ ಫೆಂಟ್ರಿ ರಸ್ತೆ, ನೃಪತುಂಗ ರಸ್ತೆ, ಕ್ವೀನ್ಸ್ ರಸ್ತೆ, ಕೆ.ಆರ್ ಸರ್ಕಲ್, ಹಡ್ಸನ್ ಸರ್ಕಲ್, ಹಳೆ ಏರ್ಪೋರ್ಟ್ ರಸ್ತೆ, ಟ್ರಿನಿಟಿ ಸರ್ಕಲ್ ಹಾಗೂ ಟೌನ್ ಹಾಲ್ ಸುತ್ತಮುತ್ತ ಪರ್ಯಾಯ ಮಾರ್ಗ ಬಳಸುವಂತೆ ವಾಹನ ಸವಾರರಿಗೆ ಸೂಚನೆ ನೀಡಲಾಗಿದೆ.
Advertisement