ಬಿಜೆಪಿ ಲೂಟಿ ಮಾಡಿದ ಹಣವನ್ನು 3 ವರ್ಷದಲ್ಲಿ ನಾವು ಹಿಂದಿರುಗಿಸುತ್ತೇನೆ: ಮತದಾರರಿಗೆ ರಾಹುಲ್ ಗಾಂಧಿ ಭರವಸೆ

ಕುದುರೆ ವ್ಯಾಪಾರ’ದ ಮೂಲಕ ಬಿಜೆಪಿ ಸರ್ಕಾರ ರಚಿಸಿದ್ದು, ಕಳೆದ ಮೂರು ವರ್ಷಗಳಿಂದ ಅವರು ‘ಲೂಟಿ ಮಾಡಿದ ಹಣವನ್ನು ಹಿಂದಿರುಗಿಸುತ್ತೇನೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮತದಾರರಿಗೆ ಭರವಸೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದಲ್ಲಿ ಶನಿವಾರ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.
ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದಲ್ಲಿ ಶನಿವಾರ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.

ಬೆಳಗಾವಿ/ಹುಬ್ಬಳ್ಳಿ: ಕುದುರೆ ವ್ಯಾಪಾರ’ದ ಮೂಲಕ ಬಿಜೆಪಿ ಸರ್ಕಾರ ರಚಿಸಿದ್ದು, ಕಳೆದ ಮೂರು ವರ್ಷಗಳಿಂದ ಅವರು ‘ಲೂಟಿ ಮಾಡಿದ ಹಣವನ್ನು ಹಿಂದಿರುಗಿಸುತ್ತೇನೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮತದಾರರಿಗೆ ಭರವಸೆ ನೀಡಿದ್ದಾರೆ.

ಯಮಕನಮರಡಿ ಕ್ಷೇತ್ರದ ಭೂತರಾಮನಹಟ್ಟಿ ಗ್ರಾಮದಲ್ಲಿ ನಡೆದ ಪಕ್ಷದ ಪ್ರಚಾರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿಯವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ನಾಯಕರು ಜನರಿಂದ ಲೂಟಿ ಮಾಡಿದ ಹಣವನ್ನು ನಾವು ಹಿಂದಿರುಗಿಸಲು ಬಯಸುತ್ತೇವೆ. ಲೂಟಿ ಮಾಡಿದ ಸಾವಿರಾರು ಕೋಟಿಗಳನ್ನು ಅವರ ಖಾತೆಗೆ ಜಮಾ ಮಾಡಲಾಗುವುದು' ಎಂದು ಹೇಳಿದರು.

ಪೌರಕಾರ್ಮಿಕ ಕಾಮಗಾರಿಗಳಿಗೆ ಶೇ.40ರಷ್ಟು ಕಮಿಷನ್ ನೀಡಬೇಕು ಎಂದು ಆರೋಪಿಸಿ ಗುತ್ತಿಗೆದಾರರ ಸಂಘ ಪತ್ರ ಬರೆದರೂ ಪ್ರಧಾನಿ ಮೋದಿ ಮೌನ ತಾಳಿದ್ದರು. ಬಿಜೆಪಿಗೆ 2,500 ಕೋಟಿ ರೂಪಾಯಿ ಕೊಟ್ಟು ಮುಖ್ಯಮಂತ್ರಿ ಸ್ಥಾನವನ್ನು ಖರೀದಿಸಬಹುದು ಎಂದು ಬಿಜೆಪಿ ಶಾಸಕರೊಬ್ಬರು ಹೇಳಿಕೊಂಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಸಹಕಾರಿ ಬ್ಯಾಂಕ್‌ ಸೇರಿದಂತೆ ಎಲ್ಲೆಡೆ ಹಗರಣಗಳು ನಡೆಯುತ್ತಿವೆ. ಬಿಜೆಪಿ ಸರಕಾರ ಸೃಷ್ಟಿಸಿರುವ ದ್ವೇಷ, ಲೂಟಿ, ಸುಳ್ಳಿನ ವಾತಾವರಣದಲ್ಲಿ ಕರ್ನಾಟಕದಲ್ಲಾಗಲೀ, ದೇಶದಲ್ಲಾಗಲಿ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಹೀಗಾಗಿ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕಿದೆ ಎಂದು ತಿಳಿಸಿದರು.

ಸಂಸತ್ತಿನಲ್ಲಿ ನಾವು ಕೇಳಿದ ಯಾವುದೇ ಪ್ರಶ್ನೆಗಳಿಗೂ ಸರ್ಕಾರ ಉತ್ತರಿಸಿಲ್ಲ. ಸಂಸತ್ತಿನ ಪರಮಾಧಿಕಾರವನ್ನು ಹಾಳುಮಾಡುವ ಸರ್ಕಾರವನ್ನು ದೇಶವು ಎಂದಿಗೂ ನೋಡಿಲ್ಲ. ಹೀಗಾದರೆ ಪ್ರಜಾಪ್ರಭುತ್ವ ಉಳಿಯುವುದು ಹೇಗೆ? ಎಂದು ಪ್ರಶ್ನಿಸಿದರು.

“ರಾಜಸ್ಥಾನ, ಛತ್ತೀಸ್‌ಗಢ ಮತ್ತು ಹಿಮಾಚಲ ಪ್ರದೇಶದ ಸರ್ಕಾರಗಳು ಈಗಾಗಲೇ ಭರವಸೆಗಳನ್ನು ಈಡೇರಿಸಿವೆ. ಕರ್ನಾಟಕದಲ್ಲೂ ನೀಡಲಾಗಿರುವ ಭರವಸೆಯನ್ನು ಈಡೇರಿಸಲಾಗುತ್ತದೆ. ಎಲ್‌ಪಿಜಿ ಸಿಲಿಂಡರ್ ಮತ್ತು ಇಂಧನಗಳ ಬೆಲೆ ಗಗನಕ್ಕೇರುವುದರೊಂದಿಗೆ ದೇಶದಲ್ಲಿ ಹಣದುಬ್ಬರವು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದೆ, ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗ ಮೋದಿ ಭೇಟಿ ನೀಡಲಿಲ್ಲ. ಅಂತಾರಾಜ್ಯ ಜಲ ವಿವಾದವನ್ನು ಪರಿಹರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.

‘ಪ್ರಧಾನಿ ಮೋದಿ ಅವರು ಮುಂದಿನ ಐದು ವರ್ಷಗಳ ಕಾಲ ರಾಜ್ಯಕ್ಕೆ ತಮ್ಮ ಯೋಜನೆಗಳೇನು ಎಂಬುದನ್ನು ಜನರಿಗೆ ಹೇಳಿಲ್ಲ. ಅವರು ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಾರೆ, ಈ ಬಗ್ಗೆ ಅವರಿಗಿಂತ ನನಗೆ ಹೆಚ್ಚು ತಿಳಿದಿದೆ. ಭಯೋತ್ಪಾದನೆಯಿಂದ ನಾನು ನನ್ನ ಅಜ್ಜಿ ಮತ್ತು ತಂದೆಯನ್ನು ಕಳೆದುಕೊಂಡಿದ್ದೇನೆಂದು ಹೇಳಿದರು.

ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಸತೀಶ ಜಾರಕಿಹೊಳಿ ಅವರೂ ಸಮಾವೇಶದಲ್ಲಿ ಮಾತನಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com