ಪಂಚಮಸಾಲಿ ಲಿಂಗಾಯತ ಸಮುದಾಯದ ಐವರಿಗೆ ಸಚಿವ ಸ್ಥಾನ ನೀಡಬೇಕು: ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹ

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಸಂಬಂಧ ಕೂಡಲಸಂಗಮ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯ 3 ಪ್ರಮುಖ ನಿರ್ಣಯ ಕೈಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಸಂಬಂಧ ಕೂಡಲಸಂಗಮ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯ 3 ಪ್ರಮುಖ ನಿರ್ಣಗಳನ್ನು ಕೈಗೊಂಡಿದೆ.

ಲಿಂಗಾಯತ ಪಂಚಮಸಾಲಿ ಸಮುದಾಯದ ನೂತನ ಶಾಸಕರುಗಳ ಅಭಿನಂದನಾ ಸಮಾರಂಭ ಕುರಿತು ಚರ್ಚಿಸುವ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಪೂರ್ವಭಾವಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು.

ಈ ಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವರಿಷ್ಠರಿಗೆ ಪಂಚಮಸಾಲಿ ಸಮುದಾಯದ ರಾಜಕೀಯ ಪ್ರಾತಿನಿಧ್ಯ ಕುರಿತ ಬೇಡಿಕೆಗಳನ್ನು ಜಯಮೃತ್ಯುಂಜಯ ಸ್ವಾಮೀಜಿ ಮೂಲಕ ಸಮುದಾಯ ಮಂಡಿಸಿದೆ.

ಲಿಂಗಾಯತ ಪಂಚಮಸಾಲಿ ಸಮಾಜದ ಬಂಧುಗಳ ಒತ್ತಾಯದಂತೆ, ಮೀಸಲಾತಿಗಾಗಿ ಮುಂಚೂಣಿಯಲ್ಲಿ ಹೋರಾಡಿದಂತಹ ಶಾಸಕರಾದ ವಿಜಯಾನಂದ ಕಾಶಪ್ಪನವರ್ (ಹುನಗುಂದ), ವಿನಯ ಕುಲಕರ್ಣಿ (ಧಾರವಾಡ ಗ್ರಾಮೀಣ) ಹಾಗೂ ಲಕ್ಷ್ಮಿ ಹೆಬ್ಬಾಳಕರ್ (ಬೆಳಗಾವಿ ಗ್ರಾಮೀಣ) ಒಳಗೊಂಡಂತೆ ಒಟ್ಟು ಐದು ಶಾಸಕರಿಗೆ ಕಾಂಗ್ರೆಸ್ ಸಚಿವ ಸ್ಥಾನ ಕಲ್ಪಿಸಬೇಕು.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಶಿವಕುಮಾರ್ ಹಾಗೂ ಕಾಂಗ್ರೆಸ್ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಭೆಯಲ್ಲಿ ಒತ್ತಾಯಿಸಲಾಯಿತು.

ಬಿಜೆಪಿಯ ರಾಜ್ಯಾಧ್ಯಕ್ಷ ಅಥವಾ ವಿರೋಧ ಪಕ್ಷದ ಸ್ಥಾನಕ್ಕೆ ಸಮರ್ಥ ಲಿಂಗಾಯತ ಪಂಚಮಸಾಲಿ ಶಾಸಕರಿಗೆ ಅವಕಾಶ ಮಾಡಿಕೊಡಬೇಕು ಎಂದು ರಾಷ್ಟ್ರೀಯ ಬಿಜೆಪಿ ವರಿಷ್ಠರಿಗೆ ಆಗ್ರಹಿಸಲಾಯಿತು.

ನೂತನ ಶಾಸಕರ ಅಭಿನಂದನಾ ಸಮಾರಂಭವನ್ನು ಹಾಗೂ ಮೀಸಲಾತಿ ಹಕ್ಕೊತ್ತಾಯ ಸಮಾರಂಭವನ್ನು ಕೂಡಲ ಸಂಗಮದಲ್ಲಿ ಜೂನ್ ತಿಂಗಳಲ್ಲಿ ನೆರವೇರಿಸಲು ತೀರ್ಮಾನಿಸಲಾಯಿತು.

ಶಾಸಕ ವಿಜಯಾನಂದ ಕಾಶಪ್ಪನವರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನೂತನ ಶಾಸಕರಾದ ವಿನಯ ಕುಲಕರ್ಣಿ , ಲಕ್ಷ್ಮೀ ಹೆಬ್ಬಾಳ್ಕರ್, ರಾಜುಗೌಡ ಕಾಗೆ, ರಾಜುಗೌಡ ಪಾಟೀಲ್, ಅಶೋಕ ಮನಗೂಳಿ, ಬಾಬಾ ಸಾಹೇಬ್ ಪಾಟೀಲ , ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ನಿಗಮದ ಮಾಜಿ ಅಧ್ಯಕ್ಷ ಎಂ ಎಸ್ ರುದ್ರಗೌಡ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com