4 ತಿಂಗಳಿನಿಂದ ಸಿಗದ ವೇತನ: ಸರ್ಕಾರದ ವಿರುದ್ಧ ಸಿಡಿದೆದ್ದ ಆಶಾ ಕಾರ್ಯಕರ್ತೆಯರು

ಕಳೆದ 3-4 ತಿಂಗಳಿಂದ ವೇತನ ನೀಡದಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಸಿಡಿದೆದ್ದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಳೆದ 3-4 ತಿಂಗಳಿಂದ ವೇತನ ನೀಡದಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಸಿಡಿದೆದ್ದಿದ್ದಾರೆ.

ರಾಜ್ಯದಲ್ಲಿ ಒಟ್ಟು 42 ಸಾವಿರ ಆಶಾ ಕಾರ್ಯಕರ್ತೆಯರು ಇದ್ದಾರೆ. ಬಿರು ಬಿಸಲು, ಕೊರೆವ ಚಳಿ ಲೆಕ್ಕಿಸದೆ ಇವರು ಕೆಲಸ ಮಾಡುತ್ತಾರೆ. ಆದರೆ, ಸುಮಾರು 3-4 ತಿಂಗಳಿಂದ ವೇತನ ಸಿಕಿಲ್ಲ. ಇದರಿಂದ ಪರದಾಡುವಂತಾಗಿದೆ ಎಂದು ಎಐಟಿಯುಸಿ (ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್) ತೀವ್ರ ಬೇಸರ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರ ನೀಡುವ ಗೌರವ ಧನ ಹಾಗೂ ಕೇಂದ್ರ ಸರ್ಕಾರದ ಪ್ರೋತ್ಸಾಹ ಧನಗಳೇ ನಮ್ಮ ಬದುಕಿಗೆ ಆಧಾರ. ಈಗ ಅದಕ್ಕೂ ಕೊಳ್ಳಿ ಇಡುತ್ತಿರುವುದು ಎಷ್ಟು ಸರಿ?. ನೂತನ ಸರ್ಕಾರವಾದರೂ ನಮಗೆ ನ್ಯಾಯ ಒದಗಿಸಲಿ. ಪದೇ ಪದೇ ಸಭೆ ನಡೆಸಿ ಪೊಳ್ಳು ಭರವಸೆ ಕೊಡುವ ಬದಲು ಹಣ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್​ ಅವರಿಗೆ ಮನವಿ ಮಾಡಿದ್ದಾರೆ.

ನಾಲ್ಕು ತಿಂಗಳಿಂದ ನನ್ನ ವೇತನೆ ನೀಡಿಲ್ಲ. ನನ್ನ ಮಗಳ ಶಾಲೆ ಪ್ರಾರಂಭವಾಗುತ್ತಿದೆ. ಇನ್ನೂ ಅವಳ ಶಾಲಾ ಶುಲ್ಕವನ್ನು ಪಾವತಿಸಿಲ್ಲ. ಪುಸ್ತಕಗಳು, ಇತರೆ ವಸ್ತುಗಳನ್ನು ಖರೀದಿಸಿಲ್ಲ. ನನ್ನ ಗಂಡನ ಆದಾಯದಿಂದ ಮಾತ್ರ ನಾವು ಮನೆ ಬಾಡಿಗೆ ಮತ್ತು ಪಡಿತರ ವೆಚ್ಚವನ್ನು ನಿಭಾಯಿಸುವುದು ಕಷ್ಟಕರವಾಗಿ ಹೋಗಿದೆ ಎಂದು ವಿಭೂತಿಪುರ ಪಿಎಚ್‌ಸಿಯ ಆಶಾ ಕಾರ್ಯಕರ್ತೆಯೊಬ್ಬರು ಹೇಳಿದ್ದಾರೆ.

ಕೂಡಲೇ ಈ ಬಗ್ಗೆ ಗಮನಹರಿಸಿ ವೇತನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಅವರು ಮನವಿ ಮಾಡಿಕೊಂಡಿದ್ದಾರೆ.

ಕಳೆದ 45 ದಿನಗಳಿಂದ ಆಶಾ ಕಾರ್ಯಕರ್ತೆಯರ ವೇತನ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇನೆ. ಆದರೆ ಪ್ರತಿ ಬಾರಿಯೂ ಒಂದು ವಾರದಲ್ಲಿ ಬಿಡುಗಡೆ ಮಾಡುವುದಾಗಿ ಸುಳ್ಳು ಭರವಸೆ ನೀಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು 5,000 ರೂಪಾಯಿಗಳ ನಿಗದಿತ ವೇತನವನ್ನು ಪಡೆಯುತ್ತಾರೆ, ಹಿಂದಿನ ಬೊಮ್ಮಾಯಿ ಸರ್ಕಾರದ 2023 ರ ರಾಜ್ಯ ಬಜೆಟ್‌ನಲ್ಲಿ ಗೌರವ ಧನವನ್ನು ಹೆಚ್ಚಿಸಿದ್ದರು ಎಂದು ಹೇಳಿದ್ದಾರೆ.

ಆಶಾ ಕಾರ್ಯಕರ್ತೆಯರ ಈ ಹೇಳಿಕೆಯನ್ನು ಆಶಾ ಕಾರ್ಯಕ್ರಮದ ಉಪನಿರ್ದೇಶಕ ಪ್ರಭುಗೌಡ ಅವರು ನಿರಾಕರಿಸಿದ್ದು, ಮಾರ್ಚ್ ಮತ್ತು ಏಪ್ರಿಲ್ ತಿಂಗಳ ವೇತನ ಮಾತ್ರ ನೀಡಲಾಗಿಲ್ಲ ಎಂದು ಹೇಳಿದ್ದಾರೆ.

ಮಾರ್ಚ್ 29 ರಂದು ಚುನಾವಣಾ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು (ಇಸಿ) ವೇತನವನ್ನು ತಡೆಹಿಡಿಯಲು ನಿರ್ದೇಶಿಸಿದೆ.

ಕಾರ್ಯವಿಧಾನದ ಪ್ರಕಾರ, ಹೊಸ ಸರ್ಕಾರ ಆದೇಶವನ್ನು ಹೊರಡಿಸಬೇಕಿದೆ. ಹೀಗಾಗಿ ಎರಡು ತಿಂಗಳಿಂದ ವೇತನವನ್ನು ನೀಡಲಾಗಿಲ್ಲ. ಚುನಾವಣೆ ಮುಗಿದಿರುವುದರಿಂದ ಇಲಾಖೆ ಹೊಸ ಆದೇಶ ಹೊರಡಿಸಲಿದ್ದು, ಶೀಘ್ರವೇ ವೇತನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

"ಮಾರ್ಚ್ 29 ರಂದು ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬರುವುದರೊಂದಿಗೆ, ಚುನಾವಣಾ ಆಯೋಗವು (ಇಸಿ) ವೇತನವನ್ನು ತಡೆಹಿಡಿಯಲು ನಿರ್ದೇಶಿಸಿದೆ. ಕಾರ್ಯವಿಧಾನದ ಪ್ರಕಾರ, ಪರಿಷ್ಕೃತ ರೂ 6,000 ವೇತನವನ್ನು ನಮೂದಿಸಿ ಹೊಸ ಸರ್ಕಾರಿ ಆದೇಶವನ್ನು ಹೊರಡಿಸಬೇಕು ಎಂದು ಅವರು ಹೇಳಿದರು, ಆದ್ದರಿಂದ ಎರಡು ತಿಂಗಳಿಂದ ವೇತನವನ್ನು ನೀಡಲಾಗಿಲ್ಲ. ಚುನಾವಣೆ ಮುಗಿದಿರುವುದರಿಂದ ಇಲಾಖೆ ಹೊಸ ಆದೇಶ ಹೊರಡಿಸಿದ್ದು, ಶೀಘ್ರವೇ ವೇತನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com