ಪೋಟೋ, ವಿಡಿಯೋ ಸಮೇತ ಕಾಮಗಾರಿ ವಿವರ ನೀಡಿ: ಬಿಬಿಎಂಪಿ ಅಧಿಕಾರಿಗಳಿಗೆ ಡಿಸಿಎಂ ಖಡಕ್ ಸೂಚನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಆಗಿರುವ ಕೆಲಸ, ವೆಚ್ಚದ ಬಗ್ಗೆ ಫೋಟೋ, ವಿಡಿಯೋ ಮತ್ತಿತರ ದಾಖಲೆಗಳನ್ನು ಒದಗಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ಅಧಿಕಾರಿಗಳೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಭೆ
ಬಿಬಿಎಂಪಿ ಅಧಿಕಾರಿಗಳೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಭೆ
Updated on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಆಗಿರುವ ಕೆಲಸ, ವೆಚ್ಚದ ಬಗ್ಗೆ ಫೋಟೋ, ವಿಡಿಯೋ ಮತ್ತಿತರ ದಾಖಲೆಗಳನ್ನು ಒದಗಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಬಿಬಿಎಂಪಿ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಲಹೆ, ಸೂಚನೆಗಳನ್ನು ನೀಡಿದ ಉಪ ಮುಖ್ಯಮಂತ್ರಿ, ಬಿಬಿಎಂಪಿ ಅನುದಾನ ಪಡೆದು ಶುರು ಮಾಡದ ಕೆಲಸ, ಕಾಮಗರಿಗಳನ್ನು ಯತಾಸ್ಥಿತಿಯಲ್ಲಿ ತಡೆ ಹಿಡಿಯಬೇಕು. ಕಾಲಮಿತಿಯೊಳಗೆ ಪೂರ್ಣಗೊಳಿಸದ ಯೋಜನೆ ಕೆಲಸಗಳನ್ನು ತಡೆ ಹಿಡಿಯಬೇಕು. ಕೆಲಸ ಆಗದಿದ್ದರೂ ಬಿಲ್,  ಒಂದೇ ಕಾಮಗಾರಿಗೆ ಎರಡೆರಡು ಬಿಲ್, ಒಂದೇ ಕಾಮಗಾರಿಗೆ ಎರಡು ಕಂಪನಿಗಳಿಂದ ಬಿಲ್ ಆಗಿರುವ ಬಗ್ಗೆ ತನಿಖೆ ಮಾಡಿ 10 ದಿನದೊಳಗೆ ಪಟ್ಟಿ ನೀಡಬೇಕು ಎಂದರು. 

ರಸ್ತೆ ಮತ್ತಿತರ ಕಾಮಗಾರಿಗಳನ್ನು ಏಜೆನ್ಸಿಗಳ ಮೂಲಕವೇ ಮಾಡುವುದಾದರೆ ಪಾಲಿಕೆಯಲ್ಲಿ ಎಂಜಿನಿಯರ್ ಗಳು ಇರುವುದರ ಔಚಿತ್ಯವಾದರೂ ಏನು? ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್, ಕೆಲಸ ಆಗಿರುವ ಜಾಗಗಳಿಗೆ ಖುದ್ದು ಹೋಗಿ ಪರಿಶೀಲನೆ ಮಾಡೋಣ. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೊರವಲಯದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಅವಕಾಶ ಕಲ್ಪಿಸಬಾರದು. ಹಾಗೇ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ದಂಡ ಮತ್ತಿತರ ಕಾನೂನು ಕ್ರಮ ಜರುಗಿಸಬೇಕು.ಒಣ ಮತ್ತು ಹಸಿಕಸ ವೈಜ್ಞಾನಿಕ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದರು. 

ಸ್ವಚ್ಛತೆ, ನೈರ್ಮಲ್ಯ, ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಅಕ್ರಮಗಳಿಗೆ ಆಸ್ಪದ ಇಲ್ಲದಂತೆ ಟಿ ಡಿ ಆರ್ ಯೋಜನೆ ಜಾರಿಗೆ ತರಬೇಕು. ರಸ್ತೆ ಮತ್ತಿತರ ಯೋಜನೆಗಳಿಗೆ ಆಸ್ತಿ ಕಳೆದುಕೊಂಡವರ ಹಿತ ಕಾಯಬೇಕು.ಯಾವುದೇ ಯೋಜನೆ ಕಾಮಗಾರಿ ಆರಂಭಕ್ಕೆ ಮುನ್ನ ಆ ಜಾಗದ ವಿಡಿಯೋ, ಫೋಟೋ ಮಾಡಬೇಕು. ನಿಜವಾಗಿಯೂ ಜನರ ಉಪಯೋಗಕ್ಕೆ ಆ ಯೋಜನೆ ಉಪಯೋಗವಾಗಿದೆಯೇ ಎಂಬ ಮಾಹಿತಿ ಸಾರ್ವಜನಿಕರಿಗೆ ಸಿಗಲಿ ಎಂದರು. 

ಬೆಂಗಳೂರು ಬರೀ ಕರ್ನಾಟಕ್ಕದ್ದಲ್ಲ, ಇಡೀ ದೇಶದ ಆಸ್ತಿ.  ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿಯಲು  ಕ್ರಮ ಕೈಗೊಳ್ಳಬೇಕು, ಸಮಯದ ಮಿತಿ ಇಲ್ಲದೇ ದುಡಿಯಬೇಕು. ಬದ್ಧತೆ,ನಿಷ್ಠೆಯಿಂದ ಕೆಲಸ ಮಾಡಬೇಕು, ಆಡಳಿತಕ್ಕೆ ಚುರುಕು ಮುಟ್ಟಿಸಲು ಒಂದಷ್ಟು ಬದಲಾವಣೆ ಮಾಡುತ್ತೇವೆ. ಕ್ರಮ ಕೈಗೊಳ್ಳಲು ಆಸ್ಪದ ಕೊಡಬೇಡಿ, ಉತ್ತಮವಾಗಿ ಕೆಲಸ ಮಾಡಿ  ಸರಕಾರದ ಗೌರವ ಉಳಿಸಿ ಎಂದು ಸಲಹೆ ನೀಡಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com