ದೇವನಹಳ್ಳಿ ಬಳಿ ಕೆರೆಯಲ್ಲಿ ಮುಳುಗಿ ನಾಲ್ವರು ಯುವಕರು ಸಾವು, ಮೃತದೇಹ ಪತ್ತೆ
ಬೆಂಗಳೂರು: ಭಾನುವಾರ ನಂದಿ ಬೆಟ್ಟಕ್ಕೆ ಪ್ರವಾಸಕ್ಕೆ ತೆರಳಿದ್ದ ನಾಲ್ವರು ಯುವಕರು ರಾಮನಾಥಪುರ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.
ಭಾನುವಾರ ಸಂಜೆ ಎರಡು ಮೃತದೇಹಗಳನ್ನು ಹೊರೆ ತೆಗೆದಿದ್ದ ಅಧಿಕಾರಿಗಳು, ಸೋಮವಾರ ಬೆಳಗ್ಗೆ ಇನ್ನೇರಡು ಮೃತದೇಹಗಳನ್ನು ಹೊರಗೆ ತಂದಿದ್ದಾರೆ. ಮೃತರೊಬ್ಬರ ವಾಟ್ಸಾಪ್ ನಲ್ಲಿ ಕಂಡುಬಂದ ಕೆರೆಯ ಚಿತ್ರವು ಅವರು ಎಲ್ಲಿಗೆ ಹೋಗಿದ್ದಾರೆಂದು ಗುರುತಿಸಲು ಸಂಬಂಧಿಕರಿಗೆ ನೆರವಾಗಿದೆ.
ಶೇಖ್ ತಾಯಾರ್ (19), ಮುನೀರ್ ಅಹಮದ್ (19), ಇಸ್ರಾರ್ ಅಹ್ಮದ್ (18), ಮತ್ತು ಫೈಝಲ್ ಖಾನ್ (19) ಮೃತಪಟ್ಟ ದುರ್ದೈವಿಗಳು. ಇವರೆಲ್ಲರೂ ಆರ್‌ಟಿ ನಗರದ ಚಾಮುಂಡಿ ನಗರದ ನಿವಾಸಿಗಳು. ಎರಡು ಬೈಕ್‌ಗಳಲ್ಲಿ ಪ್ರವಾಸಕ್ಕೆ ತೆರಳಿದ್ದ ಇವರು, ಭಾನುವಾರ ಬೆಳಗ್ಗೆ ಸುಮಾರು 11 ಗಂಟೆ ವೇಳೆಯಲ್ಲಿ ನಂದಿ ಬೆಟ್ಟದಿಂದ ಹಿಂತಿರುಗುವಾಗ ಕೆರೆ ಬಳಿಗೆ ತೆರಳಿರುವುದು ತಿಳಿದುಬಂದಿದೆ.
ಮಧ್ಯಾಹ್ನದ ನಂತರ ಅವರ ಸುಳಿವು ಸಿಗದಿದ್ದಾಗ ಆತಂಕಗೊಂಡ ಕುಟುಂಬ ಸದಸ್ಯರು ನಂದಿ ಬೆಟ್ಟ ಬಳಿ ಹುಡುಕಾಡಿದ್ದಾರೆ. ಆದರೆ ಪತ್ತೆಯಾಗಿಲ್ಲ, ಸಂಜೆ 6 ಗಂಟೆ ಸುಮಾರಿಗೆ, ಸ್ಥಳೀಯರೊಬ್ಬರು ವಾಟ್ಸಾಪ್ ನಲ್ಲಿ ಕೆರೆ ಚಿತ್ರ ಗುರುತಿಸಿದ ನಂತರ ಸಂಬಂಧಿಕರು ರಾಮನಾಥಪುರ ಕೆರೆ ಬಳಿ ನೋಡಿದಾಗ ಬೈಕ್ ಗಳು, ಹೆಲ್ಮೆಟ್, ಶೂ, ಜಾಕೆಟ್ ಗಳು ಕಂಡುಬಂದಿವೆ. ನಂತರ ವಿಶ್ವನಾಥಪುರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ಕೆರೆ ಸುಮಾರು 15 ಆಡಿ ಆಳ ಹೊಂದಿದ್ದು, ಮೃತರಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ದೇವನಹಳ್ಳಿ ಆಕಾಶ್ ಆಸ್ಪತ್ರೆಯಲ್ಲಿ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ