ಬೆಂಗಳೂರಿನ ಅತ್ತಿಬೆಲೆಯಲ್ಲಿ ಪಟಾಕಿ ದುರಂತ; ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಎನ್‌ಜಿಟಿ

ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿನ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 14 ಮಂದಿ ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ರಾಜ್ಯ ಸರ್ಕಾರದಿಂದ ಸಮಗ್ರ ಮಾಹಿತಿ ಕೇಳಿದೆ.
ಗೋದಾಮು ಸುಟ್ಟು ಕರಕಲಾಗಿರುವುದು.
ಗೋದಾಮು ಸುಟ್ಟು ಕರಕಲಾಗಿರುವುದು.

ನವದೆಹಲಿ: ಅತ್ತಿಬೆಲೆಯಲ್ಲಿನ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 14 ಮಂದಿ ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ರಾಜ್ಯ ಸರ್ಕಾರದಿಂದ ಸಮಗ್ರ ಮಾಹಿತಿ ಕೇಳಿದೆ.

ವರದಿ ಪ್ರಕಾರ, ಬೆಂಗಳೂರು ಸಮೀಪದ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿರುವ ಅಂಗಡಿ-ಗೋದಾಮಿನಲ್ಲಿ ಪಟಾಕಿಗಳನ್ನು ವಾಹನದಿಂದ ಇಳಿಸುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಬಳಿಕ 12 ಮಂದಿ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದು, ಚಿಕಿತ್ಸೆ ವೇಳೆ ಇಬ್ಬರು ಮೃತಪಟ್ಟಿದ್ದಾರೆ. 

ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ನೇತೃತ್ವದ ಪೀಠವು ಸೋಮವಾರ ಹೊರಡಿಸಿದ ಆದೇಶದಲ್ಲಿ, ಕಾನೂನುಬದ್ಧ ನಿಯಮಗಳ ಅನುಸರಣೆ ಸ್ಥಿತಿ, ಸಂತ್ರಸ್ತರಿಗೆ ಪರಿಹಾರ, ಪರಿಸರ ಮರುಸ್ಥಾಪನೆಯ ಕ್ರಮಗಳು ಮತ್ತು ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಮಂಡಳಿಯು ಖಚಿತಪಡಿಸಿಕೊಳ್ಳಲು ಬಯಸಿದೆ ಎಂದು ಹೇಳಿದೆ.

ಸುಧೀರ್ ಅಗರ್ವಾಲ್ ಮತ್ತು ಎ ಸೆಂಥಿಲ್ ವೇಲ್ ಅವರನ್ನೂ ಒಳಗೊಂಡ ಪೀಠವು, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಹಾಗೂ ಬಾಲಾಜಿ ಪಟಾಕಿ ಗೋದಾಮಿನ ಮಾಲೀಕರನ್ನು ಪ್ರತಿವಾದಿಗಳನ್ನಾಗಿ ಸೇರ್ಪಡೆ ಮಾಡಿಕೊಂಡಿದೆ. 

ಮುಂದಿನ ವಿಚಾರಣೆಯಂದು ಬಾಲಾಜಿ ಪಟಾಕಿ ಗೋದಾಮಿನ ಮಾಲೀಕರ ಹೆಸರು, ವಿಳಾಸ ಮತ್ತು ಇನ್ನಿತರ ವಿವರಗಳನ್ನು ನೀಡುವಂತೆ ರಾಜ್ಯದ ವಕೀಲರಿಗೆ ಪೀಠ ಸೂಚಿಸಿದೆ. ಅಲ್ಲದೆ,  ಮೃತಪಟ್ಟವರ ಕುಟುಂಬಗಳಿಗೆ ನೀಡಿರುವ ಪರಿಹಾರದ ಬಗ್ಗೆಯೂ ಮಾಹಿತಿ ನೀಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕರ್ನಾಟಕ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಚೆನ್ನೈನ ದಕ್ಷಿಣ ಪೀಠದ ಮುಂದೆ ಪ್ರಕರಣವನ್ನು ವರ್ಗಾಯಿಸಿದ ನ್ಯಾಯಮಂಡಳಿ, ನವೆಂಬರ್ 30ರಂದು ಮುಂದಿನ ವಿಚಾರಣೆಯನ್ನು ಮುಂದೂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com