ಬೆಂಗಳೂರು: ಕೋವಿಡ್‌ನಿಂದಲೇ ಹೃದಯಾಘಾತ ಹೆಚ್ಚಳ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಮಾಹಿತಿ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಕೋವಿಡ್ ಸೋಂಕಿನಿಂದಲೇ ಹೃದಯಾಘಾತ ಸಾವುಗಳ ಪ್ರಮಾಣ ಹೆಚ್ಚಳವಾಗುತ್ತಿದೆ ಎಂಬ ವಾದ ಕೇಳಿಬರುತ್ತಿದೆ. ಈ ಹಿನ್ನಲೆಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ಮಾತನಾಡಿದ್ದು, 'ಕೋವಿಡ್‌ನಿಂದಲೇ ಹೃದಯಾಘಾತ ಹೆಚ್ಚಳ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
'ಶೇ. 80 ಕ್ಕೂ ಹೆಚ್ಚು ಜನರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ ಮತ್ತು ಅಷ್ಟೇ ಸಂಖ್ಯೆಯ ಜನರು ಲಸಿಕೆ ತೆಗೆದುಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳ ಅಂಕಿಅಂಶಗಳ ಪ್ರಕಾರ, ಸುಮಾರು 30 ಪ್ರತಿಶತದಷ್ಟು ಹೃದಯಾಘಾತವನ್ನು 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ಎದುರಿಸುತ್ತಾರೆ. ಕೋವಿಡ್ ಸೋಂಕಿತರಲ್ಲಿ ಮಾತ್ರ ಹೃದಯಾಘಾತ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ವೈಜ್ಞಾನಿಕ ಅಧ್ಯಯನವಿಲ್ಲ ಮತ್ತು ಅವರು ಕಠಿಣ ಪರಿಶ್ರಮ ಅಥವಾ ಜಿಮ್ಮಿಂಗ್ ಮತ್ತು ವ್ಯಾಯಾಮದಂತಹ ಯಾವುದೇ ಶ್ರಮದಾಯಕ ದೈಹಿಕ ಚಟುವಟಿಕೆಯಿಂದ ದೂರವಿರಬೇಕು ಎಂದು ಮಂಜುನಾಥ್ ಅವರು ಹೇಳಿದರು.
ಗುಜರಾತ್‌ನಲ್ಲಿ ನವರಾತ್ರಿ ಹಬ್ಬದ ಅಂಗವಾಗಿ 'ಗರ್ಬಾ' ನೃತ್ಯದ ವೇಳೆ ಹೃದಯಾಘಾತದಿಂದ ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಮಂಗಳವಾರ ಇಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿ, ಕೋವಿಡ್ ಸೋಂಕಿತರು ಇಂತಹ ಒತ್ತಡದಾಯಕ ಕಾರ್ಯಗಳಿಂದ ದೂರವಿರಬೇಕು. ಹೃದಯಾಘಾತವನ್ನು ತಪ್ಪಿಸಲು ಸ್ವಲ್ಪ ಸಮಯದವರೆಗೆ ಶ್ರಮದಾಯಕ ವ್ಯಾಯಾಮಗಳನ್ನು ಮಾಡಬಾರದು ಎಂದು ಸಲಹೆ ನೀಡಿದ್ದರು.
ಇದೇ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಮಂಜುನಾಥ್, 'ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ನಿಖರವಾದ ಕಾರಣ ತಿಳಿದುಬರುತ್ತದೆ. ಜನರು ತಮ್ಮ ವಯಸ್ಸು ಮತ್ತು ತೂಕಕ್ಕೆ ಅನುಗುಣವಾಗಿ ವ್ಯಾಯಾಮ ಮತ್ತು ಜಿಮ್‌ಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತಗಳು ಹೆಚ್ಚಾಗುತ್ತಿವೆ. ಇದಕ್ಕೆ ಹಲವಾರು ಕಾರಣಗಳಿವೆ ಮತ್ತು ನಾವು ಅದನ್ನು ಸಂಪೂರ್ಣವಾಗಿ ಕೋವಿಡ್ ನೊಂದಿಗೆ ತಳುಕು ಹಾಕಲು ಸಾಧ್ಯವಿಲ್ಲ. ಕಳೆದ ಹತ್ತು ವರ್ಷಗಳಲ್ಲಿ, ಕರ್ನಾಟಕದಲ್ಲಿ ಹೃದಯಾಘಾತ ಪ್ರಕರಣಗಳು ಶೇಕಡಾ 22 ರಷ್ಟು ಹೆಚ್ಚಾಗಿದೆ. ಯುವ ಹೃದಯಾಘಾತ ಗುಂಪಿನಲ್ಲಿ ಮಹಿಳೆಯರು ಶೇಕಡಾ ಎಂಟರಷ್ಟಿದ್ದಾರೆ. ಶೇಕಡಾ 25 ಕ್ಕಿಂತ ಹೆಚ್ಚು ಶೇಕಡಾ ಹೃದ್ರೋಗಿಗಳಿಗೆ ಬೇರೆ ಯಾವುದೇ ತೊಂದರೆಗಳಿಲ್ಲ. ಧೂಮಪಾನ, ಅತಿಯಾದ ಮದ್ಯಪಾನ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಒತ್ತಡವು ಹೃದಯಾಘಾತಕ್ಕೆ ಮುಖ್ಯ ಕಾರಣಗಳು ಎಂದು ಮಂಜುನಾಥ್ ಅವರು ವಿವರಿಸಿದರು.
ಕಲುಷಿತ ವಾತಾರವಣ ಕೂಡ ಕಾರಣ
ಇನ್ನು ರಕ್ತನಾಳಗಳ ಆರೋಗ್ಯದ ಮೇಲೆ ಕಲುಷಿತ ವಾತಾರವಣ ಕೂಡ ಪರಿಣಾಮ ಬೀರುತ್ತದೆ. 2.5 ಮೈಕ್ರಾನ್‌ಗಿಂತ ಚಿಕ್ಕದಾದ ಕಣಗಳು ದೇಹದ ವಾಯುಮಾರ್ಗಗಳ ಮೂಲಕ ಹಾದುಹೋಗುವುದರಿಂದ ಮತ್ತು ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ. ಇತ್ತೀಚಿನ ವರದಿಗಳಲ್ಲಿ ಹೃದಯಾಘಾತಕ್ಕೆ ವಾಯು ಮಾಲಿನ್ಯವು ಹೊಸ ಕಾರಣವಾಗಿ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದರು.
Advertisement