ಬೆಂಗಳೂರು: ಕೆಲಸಕ್ಕೆ ಸೇರಿದ ಒಂದೇ ತಿಂಗಳಲ್ಲಿ 3 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ಕದ್ದ ಮನೆಗೆಲಸದವ!

ನಗರದ ಆಭರಣ ವ್ಯಾಪಾರಿಯೊಬ್ಬರ ಮನೆಯಲ್ಲಿ ಮನೆಗೆಲಸಕ್ಕೆ ಸೇರಿದ್ದ ವ್ಯಕ್ತಿಯೊಬ್ಬ ಒಂದೇ ತಿಂಗಳಲ್ಲಿ ಬರೋಬ್ಬರಿ 4 ಕೆಜಿ ಚಿನ್ನ ಮತ್ತು 32 ಕೆಜಿ ಬೆಳ್ಳಿ ಆಭರಣಗಳು ಹಾಗೂ ಸುಮಾರು 9 ಲಕ್ಷ ರೂ.ನಗದು ಸೇರಿ 3 ಕೋಟಿ ರೂ. ಮೌಲ್ಯದ...
ಸಾದಂರ್ಭಿಕ ಚಿತ್ರ
ಸಾದಂರ್ಭಿಕ ಚಿತ್ರ

ಬೆಂಗಳೂರು: ನಗರದ ಆಭರಣ ವ್ಯಾಪಾರಿಯೊಬ್ಬರ ಮನೆಯಲ್ಲಿ ಮನೆಗೆಲಸಕ್ಕೆ ಸೇರಿದ್ದ ವ್ಯಕ್ತಿಯೊಬ್ಬ ಒಂದೇ ತಿಂಗಳಲ್ಲಿ ಬರೋಬ್ಬರಿ 4 ಕೆಜಿ ಚಿನ್ನ ಮತ್ತು 32 ಕೆಜಿ ಬೆಳ್ಳಿ ಆಭರಣಗಳು ಹಾಗೂ ಸುಮಾರು 9 ಲಕ್ಷ ರೂ.ನಗದು ಸೇರಿ 3 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾನೆ.

ಪ್ರಮುಖ ಆರೋಪಿ ಕೇತಾರಾಮ್ ಎಂಬಾತನನ್ನು ಕಳೆದ ಒಂದು ತಿಂಗಳ ಹಿಂದೆ ಆಭರಣ ವ್ಯಾಪಾರಿಯ ಮನೆ ಮತ್ತು ಅಂಗಡಿ ಸ್ವಚ್ಛಗೊಳಿಸಲು ನೇಮಿಸಲಾಗಿತ್ತು. ಚಿನ್ನಾಭರಣ ವ್ಯಾಪಾರಿ ಮುಂಬೈಗೆ ತೆರಳಿದ್ದಾಗ ಆರೋಪಿಗಳು ಆಭರಣದೊಂದಿಗೆ ಪರಾರಿಯಾಗಿದ್ದಾರೆ.

ಓ ಕೆ ರಸ್ತೆಯಲ್ಲಿರುವ ಕಾಂಚನಾ ಜ್ಯುವೆಲರ್ಸ್‌ನಲ್ಲಿ ಭಾನುವಾರ ಬೆಳಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆಯ ನಡುವೆ ಕಳ್ಳತನ ನಡೆದಿದೆ. 

ಈ ಸಂಬಂಧ ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶಂಕಿತರನ್ನು ಕೇತಾರಾಮ್, ರಾಕೇಶ್ ಮತ್ತು ದಿನೇಶ್ ಎಂದು ಗುರುತಿಸಲಾಗಿದೆ. 

ವಿವಿ ಪುರಂ ನಿವಾಸಿ ಮತ್ತು ಕಾಂಚನಾ ಜ್ಯುವೆಲರ್ಸ್ ಮಾಲೀಕ 70 ವರ್ಷದ ಅರವಿಂದ್ ಕುಮಾರ್ ತಾಡೆ ಅವರು ಸೋಮವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಕೇತಾರಾಮ್, ತಾಡೆ ಅವರ ನಿವಾಸದಲ್ಲಿ ಮನೆಗೆಲಸ  ಮಾಡುತ್ತಿದ್ದರು. ಅಲ್ಲದೆ ಜ್ಯುವೆಲ್ಲರಿ ಶಾಪ್ ಅನ್ನು ಕ್ಲೀನ್ ಮಾಡಲು ಬರುತ್ತಿದ್ದ. ಕಳ್ಳತನವಾದ ದಿನ ತಾಡೆ ಅವರು ಯಾವುದೋ ಕೆಲಸದ ಮೇಲೆ ಮುಂಬೈಗೆ ಹೋಗಿದ್ದರು. ಭಾನುವಾರವಾದ್ದರಿಂದ ಅವರ ಕುಟುಂಬ ಸದಸ್ಯರು ಸಹ ಹೊರಗೆ ಹೋಗಿದ್ದರು. ಕುಟುಂಬ ಸದಸ್ಯರ ಅನುಪಸ್ಥಿತಿಯಲ್ಲಿ ಕೇತಾರಾಮ್ ಆಭರಣ ಅಂಗಡಿಯ ಕೀಗಳನ್ನು ತೆಗೆದುಕೊಂಡು, ಇತರ  ಇಬ್ಬರೊಂದಿಗೆ ಸೇರಿ 4.3 ಕೆಜಿ ಚಿನ್ನಾಭರಣ ಹಾಗೂ 32 ಕೆಜಿ ಬೆಳ್ಳಿ ಆಭರಣಗಳನ್ನು ಕದ್ದೊಯ್ದಿದ್ದಾರೆ.

ಕಳ್ಳತನ ಮಾಡುವಾಗ ಆರೋಪಿಗಳು ಸಿಸಿಟಿವಿ ಸಂಪರ್ಕ ಕಡಿತಗೊಳಿಸಿದ್ದರು. ಕಳ್ಳತನದ ಬಗ್ಗೆ ತಿಳಿದ ಅಕ್ಕಪಕ್ಕದ ಅಂಗಡಿ ಮಾಲೀಕರು ತಾಡೆ ಅವರ ಮಗನಿಗೆ ಮಾಹಿತಿ ನೀಡಿದ್ದಾರೆ. 

ಪ್ರಮುಖ ಆರೋಪಿ ಕೇತು ರಾಮ್ ಮತ್ತು ಇತರ ಇಬ್ಬರ ತಲೆಮರೆಸಿಕೊಂಡಿದ್ದು, ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ನಮ್ಮಲ್ಲಿ ಪ್ರಮುಖ ಆರೋಪಿಗಳ ವಿವರಗಳಿವೆ ಮತ್ತು ನಾವು ಅದರ ಮೇಲೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com