ಮುಸ್ಲಿಂ ಮತಗಳಿಂದಲೇ ಅಧಿಕಾರಕ್ಕೆ ಬಂದೆವು: ಕಾಂಗ್ರೆಸ್ ಗೆಲುವಿನ ರಹಸ್ಯ ಬಿಚ್ಚಿಟ್ಟ ಜಮೀರ್, ವಿಡಿಯೋ ವೈರಲ್
ಬೆಂಗಳೂರು: ರಾಜ್ಯದಲ್ಲಿ ಸಿಎಂ ಹುದ್ದೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು, ಈ ನಡುವಲ್ಲೇ ಸಚಿವ ಜಮೀರ್ ಅಹ್ಮದ್ ಅವರು ನೀಡಿರುವ ಹೇಳಿಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಜಮೀರ್ ಅವರು, ಕಾಂಗ್ರೆಸ್ ಗೆಲುವಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ವಿಡಿಯೋದಲ್ಲಿ ಮುಸ್ಲಿಮರೆಲ್ಲಾ ಒಗ್ಗಟ್ಟಾಗಿ ಮತದಾನ ಮಾಡಿದ್ದಕ್ಕೇ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು ಎಂದು ಹೇಳಿರುವುದು ಕಂಡು ಬಂದಿದ್ದು, ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಆಗಸ್ಟ್ 25 ರಂದು ಜೈಪುರ ಪ್ರವಾಸ ಕೈಗೊಂಡಿದ್ದ ಜಮೀರ್, ಅಲ್ಲಿನ ಕಾಂಗ್ರೆಸ್ ಶಾಸಕರನ್ನು ಉದ್ದೇಶಿಸಿ ಮಾತಾಡಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಸ್ಲಿಮರೇ ಕಾರಣ. ಮುಸ್ಲಿಂ ಮತಗಳಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಕರ್ನಾಟಕದ ಮಸೀದಿಗಳಲ್ಲಿ ನಾವು ಸಭೆ ಮಾಡಿ, ಒಗ್ಗಟ್ಟು ಪ್ರದರ್ಶನಕ್ಕೆ ಮನವಿ ಮಾಡಿದ್ದೆವು. ಎಲ್ಲಾ ಹಂತ ರೀಚ್ ಮಾಡಿ ವಿಶ್ವಾಸ ಗಳಿಸಿದೆವು. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು, ರಾಜಸ್ಥಾನದಲ್ಲೂ ಇದೇ ಸೂತ್ರ ಅನುಸರಿಸಿ ಎಂದು ಕರೆ ನೀಡಿದ್ದರು.
ಈ ವಿಡಿಯೋ ಈಗ ವೈರಲ್ ಆಗಿದ್ದು, ಜಮೀರ್ ಧಾರ್ಮಿಕ ಸ್ಥಳಗಳನ್ನು ರಾಜಕೀಯಕ್ಕೆ ಬಳಸಿಕೊಂಡರು ಎಂಬ ಆಪಾದನೆ ಕೇಳಿಬಂದಿದೆ.
ಇದು ಕಾಂಗ್ರೆಸ್‌ನ ಒಡೆದಾಳುವ ನೀತಿಗೆ ಉತ್ತಮ ಉದಾಹರಣೆ. ಹೀಗೆ ಆದರೆ, ಇಡೀ ದೇಶವನ್ನೇ ಕಾಂಗ್ರೆಸ್ ವಿಭಜಿಸುತ್ತೆ ಎಂದು ಬಿಜೆಪಿ ಕಿಡಿಕಾರಿದೆ. ಆದರೆ ಕಾಂಗ್ರೆಸ್‌ನ ಹಲವು ನಾಯಕರು ಮಾತ್ರ ಜಮೀರ್ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.
ಚುನಾವಣೆ ಬಂದಾಗ ನಾಡಿನ ಜನತೆ ಯಾರು ಏನು ಮಾಡಿದ್ದಾರೆ ಅನ್ನೋದನ್ನು ನೋಡುತ್ತಾರೆ. ಒಂದು ಸಮುದಾಯ ನೋಡಲ್ಲ, ನಮಗೆ ವಿಶ್ವಾಸವಿದೆ ಎಂದು ಮಾಜಿ ಸಚಿವ ಗೋಪಾಲಯ್ಯ ನುಡಿದಿದ್ದಾರೆ.
ಎಲ್ಲಾ ಸಮುದಾಯದ ಜನರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ರಾಜ್ಯದ 7 ಕೋಟಿ ಜನರಿಗೆ ನಾವು ಧನ್ಯವಾದ ಸಲ್ಲಿಸಿದ್ದೇವೆ. ಆದರೆ, ಅವರ ಸಮುದಾಯದ ವಿಚಾರಕ್ಕೆ ಬಂದಾಗ ನಾವು ಹೆಚ್ಚು ಕೆಲಸ ಮಾಡಿದ್ದೇವೆ ಎಂದು ಹೇಳಿಕೊಂಡಿರಬೇಕು. ಅದರಲ್ಲಿ ತಪ್ಪೇನಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ