ಜಾತಿ ಗಣತಿ ವರದಿ ಕುರಿತು ಸಾರ್ವಜನಿಕ ಚರ್ಚೆಯಾಗಬೇಕು: ಸಚಿವ ಸತೀಶ್ ಜಾರಕಿಹೊಳಿ ಆಗ್ರಹ

ವಿವಾದಿತ ಜಾತಿ ಗಣತಿ ವರದಿ ಕುರಿತು ಸಾರ್ವಜನಿಕ ಚರ್ಚೆಯಾಗಬೇಕು ಎಂದು ಉತ್ತರ ಕರ್ನಾಟಕದ ಪ್ರಮುಖ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೋಮವಾರ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
Updated on

ಬೆಂಗಳೂರು: ವಿವಾದಿತ ಜಾತಿ ಗಣತಿ ವರದಿ ಕುರಿತು ಸಾರ್ವಜನಿಕ ಚರ್ಚೆಯಾಗಬೇಕು ಎಂದು ಉತ್ತರ ಕರ್ನಾಟಕದ ಪ್ರಮುಖ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೋಮವಾರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ವರದಿಯಲ್ಲಿ ತಮ್ಮ ಉಪಜಾತಿಗಳನ್ನು ಕೈಬಿಟ್ಟಿರುವುದರಿಂದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ಆತಂಕಕ್ಕೊಳಗಾಗಿರಬಹುದು. ಇವೆಲ್ಲವನ್ನೂ ವರದಿಗೆ ಸೇರಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಜಾತಿ ಗಣತಿ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಚರ್ಚೆ ನಡೆಸಬೇಕಿದೆ. ಬಳಿಕ ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಯಬೇಕು. ಯಾವುದೇ ನ್ಯೂನತೆ ಅಥವಾ ಲೋಪ ಕಂಡುಬಂದಲ್ಲಿ ಮರು ಸಮೀಕ್ಷೆ ನಡೆಸಲಿ ಎಂದು ಹೇಳಿದರು.

ಜಾತಿ ಗಣತಿ ಒಪ್ಪಿಕೊಳ್ಳಬಾರದು

ಜಾತಿ ಗಣತಿ ವರದಿಯನ್ನು ಒಪ್ಪಿಕೊಳ್ಳಬಾರದು ಎಂದು ಒಕ್ಕಲಿಗರ ಪ್ರಭಾವಿ ಶ್ರೀಗಳಲ್ಲೊಬ್ಬರಾದ ನಿರ್ಮಲಾನಂದನಾಥ ಸ್ವಾಮೀಜಿ ಶುಕ್ರವಾರ ಪುನರುಚ್ಚರಿಸಿದ್ದಾರೆ.

ವರದಿಯನ್ನು ಅಂಗೀಕರಿಸುವ ಬಗ್ಗೆ ಸರ್ಕಾರ ಮರುಚಿಂತನೆ ಮಾಡಬೇಕು. ಪ್ರಸ್ತುತ ಜಾತಿ ಗಣತಿ ದೋಷಪೂರಿತವಾಗಿದ್ದು, ಗಣತಿಯನ್ನು ಪುನಃ ಮಾಡಬೇಕು. ವರದಿ ಅರ್ಧ ಬೆಂದಿದ್ದು, ಅವೈಜ್ಞಾನಿಕವಾಗಿದೆ. ಇದು ಪೂರ್ಣವಾಗಿಲ್ಲ ಮತ್ತು ಸಮುದಾಯಗಳು ಅನ್ಯಾಯವನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಈ ವರದಿ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿದೆ ಎಂದರು.

2015ರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಎಚ್. ಕಾಂತರಾಜು ಅವರ ನೇತೃತ್ವದಲ್ಲಿ ಜಾತಿ ಗಣತಿ ಎಂದು ಜನಪ್ರಿಯವಾಗಿರುವ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು ಕರ್ನಾಟಕದಲ್ಲಿ ನಡೆಸಿತು. ಜಾತಿ ಗಣತಿಗೆ ಸಿದ್ದರಾಮಯ್ಯ ಆದೇಶ ನೀಡಿದರೂ, ವರದಿ ಒಪ್ಪದೇ ಹಠ ಹಿಡಿದ ತಮ್ಮ ಪಕ್ಷದ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಮುಖಂಡರ ಮುಂದೆ ಬಗ್ಗಬೇಕಾಯಿತು.

ಜಾತಿ ಗಣತಿ ವರದಿಯಲ್ಲೇನಿದೆ?

ರಾಜ್ಯದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಗುಂಪುಗಳು ಬಹುಸಂಖ್ಯಾತರನ್ನು ಹೊಂದಿದ್ದು, ನಂತರ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿ ಹೇಳಿದೆ.

ಬಹುಸಂಖ್ಯಾತ ಜನಸಂಖ್ಯೆ ಎಂದು ಪರಿಗಣಿಸಲಾದ ಲಿಂಗಾಯತರನ್ನು ಮೂರನೇ ಅತಿದೊಡ್ಡ ಸಮುದಾಯ ಎಂದು ತೋರಿಸಲಾಗಿದೆ. ಆದರೆ, ಎರಡನೇ ಸ್ಥಾನದಲ್ಲಿದೆ ಎಂದು ನಂಬಲಾದ ಒಕ್ಕಲಿಗರನ್ನು ನಾಲ್ಕನೇ ಸ್ಥಾನದಲ್ಲಿರುವುದಾಗಿ ತೋರಿಸಲಾಗಿದೆ. ಇದು ರಾಜ್ಯದಲ್ಲಿ ಕೋಲಾಹಲವನ್ನು ಸೃಷ್ಟಿಸಿತು ಎಂದು ಮೂಲಗಳು ತಿಳಿಸಿವೆ.
ಮುಸ್ಲಿಂ ಸಮುದಾಯವು ಕರ್ನಾಟಕದಲ್ಲಿ ಎರಡನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಎಂದು ತೋರಿಸಿದ್ದರಿಂದ ಭಾರಿ ವಿವಾದಕ್ಕೆ ಕಾರಣವಾಯಿತು.

ನವೆಂಬರ್ 24ರೊಳಗೆ ವರದಿ ಸಲ್ಲಿಸುವುದಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿಕೆ ನೀಡಿದ್ದು, ವಿವಾದದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರ ವರದಿಯನ್ನು ಒಪ್ಪಿಕೊಳ್ಳಲಿದೆ ಎಂದು ಹೇಳಿಕೆ ನೀಡಿದ್ದಾರೆ. 

ಲೋಕಸಭೆ ಚುನಾವಣೆಗೂ ಮುನ್ನ ಈ ವಿಚಾರ ಭಾರಿ ವಿವಾದಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com