ಸರ್ಕಾರದಿಂದ ಸೇಡಿನ ರಾಜಕಾರಣ ಖಂಡಿಸಿ ಮೂರು ದಿನ ಸತ್ಯಾಗ್ರಹ: ಬೆಂಗಳೂರು ಸಿಟಿ ರೌಂಡ್ಸ್ ಹಾಕಿದ ಬಿ ಎಸ್ ಯಡಿಯೂರಪ್ಪ
ಬೆಂಗಳೂರು: ಕಳೆದ ಮೂರು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಲವು ಭಾಗಗಳಲ್ಲಿ ಅವಾಂತರ ಉಂಟಾಗಿದೆ. ಬೆಂಗಳೂರಿನಲ್ಲಿ ಮಳೆಯಿಂದಾಗಿ ಭಾರೀ ಸಮಸ್ಯೆಗಳು ಎದುರಾಗುತ್ತಿವೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಬಿಬಿಎಂಪಿ, ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಬೆಂಗಳೂರಿನ ಮಳೆ ಅವಾಂತರ ಬಗ್ಗೆ ವಸ್ತು ಸ್ಥಿತಿ ಅರಿತು ಸರ್ಕಾರದ ಗಮನಕ್ಕೆ ತರಲೆಂದು ಇಂದು ಬುಧವಾರ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬೆಂಗಳೂರು ಸಿಟಿ ರೌಂಡ್ಸ್ ನಡೆಸಿದರು. ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ರೌಂಡ್ಸ್ ಹಾಕಿ ಸ್ಥಗಿತಗೊಂಡ ಕಾಮಗಾರಿಗಳ ವೀಕ್ಷಣೆ ಮಾಡಿದ್ದಾರೆ. ಹೊಸಕೆರೆಹಳ್ಳಿ ಭಾಗದಲ್ಲಿ ಸ್ಥಗಿತಗೊಂಡ ಕಾಮಗಾರಿಗಳ ವೀಕ್ಷಣೆ ಮಾಡಿದರು. ಬಿಎಸ್ವೈಯವರಿಗೆ ಶಾಸಕರಾದ ಅಶ್ವತ್ಥ್ ನಾರಾಯಣ, ಮುನಿರತ್ನ ಸಾಥ್ ನೀಡಿದರು.
3 ದಿನ ಸತ್ಯಾಗ್ರಹ: ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರ್ ಆರ್ ನಗರದಲ್ಲಿ ಎಲ್ಲಾ ವ್ಯವಹಾರಗಳು ಸ್ಥಗಿತಗೊಂಡಿವೆ. ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಈ ತಿಂಗಳ ಅಂತ್ಯದಲ್ಲಿ ಮೂರು ದಿನ ಸತ್ಯಾಗ್ರಹ ಮಾಡುತ್ತೇನೆ. ವಿಧಾನಸೌಧ ಅಥವಾ ಫ್ರೀಡಂಪಾರ್ಕ್ನಲ್ಲಿ ಸತ್ಯಾಗ್ರಹ ಮಾಡ್ತೇನೆ. ನಾಳೆ ಸತ್ಯಾಗ್ರಹದ ದಿನಾಂಕ ನಿಗದಿ ಮಾಡುತ್ತೇನೆ. ಮುನಿರತ್ನ ಕ್ಷೇತ್ರದಲ್ಲಿ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ, ಅಭಿವೃದ್ಧಿ ಕಾರ್ಯ ಸ್ಥಗಿತವಾಗಿದೆ. ಇದೆಲ್ಲವನ್ನೂ ಪ್ರತಿಭಟಿಸಿ ಸತ್ಯಾಗ್ರಹ ಮಾಡುತ್ತೇನೆ ಎಂದರು.
ತಮ್ಮ ಕ್ಷೇತ್ರಕ್ಕೆ ಸರ್ಕಾರ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದೆ, ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿ ಕಳೆದ ತಿಂಗಳು ಕ್ಷೇತ್ರದ ಶಾಸಕ ಮುನಿರತ್ನ ವಿಧಾನ ಸೌಧ ಮುಂದೆ ಸತ್ಯಾಗ್ರಹ ಕುಳಿತಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ