

ಬೆಂಗಳೂರು: ಎಂಎಸ್ಇಝಡ್ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ನಿರ್ವಸಿತರಿಗೆ ಉದ್ಯೋಗ ನೀಡುವ ಮತ್ತು ಉದ್ಯೋಗದಲ್ಲಿ ಮುಂದುವರಿಸುವ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಗುರುವಾರ ಮಹತ್ವದ ವರ್ಚುಯಲ್ ಸಭೆ ನಡೆಯಿತು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಕಂಪನಿಗಳ ಹಾಗೂ ಹೋರಾಟ ಸಮಿತಿಯ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ದಿನೇಶ್ ಗುಂಡೂರಾವ್, ಯೋಜನೆಗಾಗಿ ಭೂಮಿ ಕಳೆದುಕೊಂಡವರ ಉದ್ಯೋಗ ವಿಚಾರದಲ್ಲಿನ ಎಲ್ಲಾ ಗೊಂದಲಗಳನ್ನು ಡಿಸೆಂಬರ್ 01ನೇ ತಾರೀಖಿನ ಒಳಗಾಗಿ ಪರಿಹರಿಸಬೇಕು. ತಪ್ಪಿದ್ದಲ್ಲಿ ಗೈಲ್ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವುದಾಗಿ ತಿಳಿಸಿದ್ದಾರೆ.
ಭೂಸ್ವಾಧೀನದ ಭಾಗವಾಗಿ ಭೂಮಿ ಕಳೆದುಕೊಂಡವರಿಗೆ ಕರ್ನಾಟಕ ಸರಕಾರವು ಉದ್ಯೋಗದ ಭರವಸೆ ನೀಡಿದೆ. ನೇಮಕಾತಿ ನಿಯಮಗಳನ್ನು ಮುಂದಿಟ್ಟು ಉದ್ಯೋಗ ನಿರಾಕರಿಸಲು ಸಾಧ್ಯವಿಲ್ಲ. ಎಂಆರ್ಪಿಎಲ್ ಮತ್ತು ಐಎಸ್ಪಿಆರ್ಎಲ್ ಸಂಸ್ಥೆಗಳು ಉದ್ಯೋಗ ನೀಡಿರುವ ರೀತಿಯನ್ನೇ ಜಿಎಂಪಿಎಲ್ ಅನುಸರಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.