ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಿಡದಿ ವರೆಗೂ ಮೆಟ್ರೊ ಮಾರ್ಗ ವಿಸ್ತರಣೆ, ಡಿಪಿಆರ್ ಸಿದ್ಧಪಡಿಸಲು ಡಿಕೆ.ಶಿವಕುಮಾರ್ ಸೂಚನೆ

ನಮ್ಮ ಮೆಟ್ರೋವನ್ನು ಬಿಡದಿವರೆಗೂ ವಿಸ್ತರಣೆ ಮಾಡಲು ಸರ್ವೇ ಮಾಡಿಸುತ್ತಿದ್ದು, ಈ ವಿಚಾರವಾಗಿ ಡಿಪಿಆರ್ ಸಿದ್ಧಪಡಿಸಲು ಸೂಚಿಸಿದ್ದೇನೆ. ಇನ್ನು ಬಿಡದಿ ಯೋಜನಾ ಪ್ರಾಧಿಕಾರ ರದ್ದು ಮಾಡಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಪರಿವರ್ತಿಸಲು ಆದೇಶ ಮಾಡಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಶನಿವಾರ ಹೇಳಿದರು.
Published on

ಬೆಂಗಳೂರು: “ನಮ್ಮ ಮೆಟ್ರೋವನ್ನು ಬಿಡದಿವರೆಗೂ ವಿಸ್ತರಣೆ ಮಾಡಲು ಸರ್ವೇ ಮಾಡಿಸುತ್ತಿದ್ದು, ಈ ವಿಚಾರವಾಗಿ ಡಿಪಿಆರ್ ಸಿದ್ಧಪಡಿಸಲು ಸೂಚಿಸಿದ್ದೇನೆ. ಇನ್ನು ಬಿಡದಿ ಯೋಜನಾ ಪ್ರಾಧಿಕಾರ ರದ್ದು ಮಾಡಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಪರಿವರ್ತಿಸಲು ಆದೇಶ ಮಾಡಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶನಿವಾರ ಹೇಳಿದರು.

ಬಿಡದಿಯ ಟೊಯೋಟಾ- ಕಿರ್ಲೋಸ್ಕರ್ ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ತರಬೇತಿ ಕಟ್ಟಡವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, “ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದಾರೆ. ಇವರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲು ಮೆಟ್ರೋ ಯೋಜನೆ ಇಲ್ಲಿಯ ತನಕ ವಿಸ್ತರಿಸುವಂತೆ ಶಾಸಕರು, ಸಂಸದರು ಮನವಿ ಸಲ್ಲಿಸಿದ್ದರು. ಹೀಗಾಗಿ ಬಿಎಂಆರ್‌ಸಿಎಲ್ ಅವರಿಗೆ ಯೋಜನಾ ವರದಿ ಸಿದ್ದಪಡಿಸಲು ತಿಳಿಸಿದ್ದೇನೆಂದು ಹೇಳಿದರು.

ಬಿಡದಿ ಯೋಜನಾ ಪ್ರಾಧಿಕಾರವನ್ನು ತೆಗೆದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಮಾಡುತ್ತೇವೆ. ಬಿಡದಿಯಲ್ಲಿ ಸುಮಾರು 10,000 ಎಕರೆ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು, ಯಾವುದೇ ಉದ್ದೇಶಕ್ಕೆ ಬಳಕೆ ಮಾಡಿಲ್ಲ. ಬೆಂಗಳೂರಿನಲ್ಲಿ ಸಿಗುವ ಸೌಲಭ್ಯ ಈ ಭಾಗದಲ್ಲೂ ಸಿಗಬೇಕು ಎನ್ನುವ ಉದ್ದೇಶ ನಮ್ಮದು. ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ ಈ ಎರಡು ಯೋಜನೆಗಳನ್ನು ಈ ಶುಭದಿನದಂದು ಘೋಷಿಸುತ್ತೇನೆ. ಈ ಯೋಜನೆಗಳ ಮೂಲಕ ಈ ಭಾಗ ಅಭಿವೃದ್ಧಿ ಆಗಬೇಕು, ಈ ಭಾಗದ ಜನರ ಆಸ್ತಿ ಮೌಲ್ಯ ಹೆಚ್ಚಾಗಬೇಕು.

ಈ ಭಾಗದ ಆಸ್ಪತ್ರೆ, ವಿದ್ಯಾಸಂಸ್ಥೆಗಳು, ಕಾರ್ಮಿಕರು, ಅವರ ಮಕ್ಕಳು ಹೀಗೆ ಎಲ್ಲರಿಗೂ ಹೊಸ ಶಕ್ತಿ ತುಂಬಲು ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆ.

ಟೊಯೋಟಾ ಸಂಸ್ಥೆ ಹೆಣ್ಣುಮಕ್ಕಳ ತರಬೇತಿ ಕೇಂದ್ರ ತೆರೆದಿರುವುದು ಸಂತೋಷದ ವಿಚಾರ. ಮಹಿಳೆಯರಿಗೆ ಶಕ್ತಿ ತುಂಬುವುದು ನಮ್ಮ ಸರ್ಕಾರದ ಸಂಕಲ್ಪ. ಶಕ್ತಿ ಯೋಜನೆ ಮೂಲಕ ಉಚಿತ ಬಸ್ ಪ್ರಯಾಣ ಮಾಡಿದ ಪರಿಣಾಮ ಮೈಸೂರು ದಸರಾ ಆಚರಣೆ ವೇಳೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದರಿಂದ ಪ್ರವಾಸೋದ್ಯಮ, ವ್ಯಾಪಾರ ವಹಿವಾಟು ಹೆಚ್ಚಾಗುತ್ತಿದೆ. ಮುಂದಿನ ಚುನಾವಣೆ ವೇಳೆಗೆ ಮಹಿಳೆಯರಿಗೆ ರಾಜಕೀಯದಲ್ಲೂ ಶೇ.33ರಷ್ಟು ಮೀಸಲಾತಿ ಜಾರಿಗೆ ತಂದು ಈ ಭಾಗದಲ್ಲಿ ಮಹಿಳಾ ಪ್ರತಿನಿಧಿಗಳು ಆಯ್ಕೆಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.

ನನಗೂ ಟೊಯೋಟಾ ಸಂಸ್ಥೆಗೂ ಹಳೇ ಸಂಬಂಧ. ಮನೋರಮ ಮದ್ವರಾಜ್ ಅವರು ಆರಂಭ ಮಾಡಿದರು. ಸಾತನೂರಲ್ಲಿ ಆರಂಭ ಆಗಬೇಕಿತ್ತು. ರೈತರ ವಿರೋಧ ಹಿನ್ನೆಲೆಯಲ್ಲಿ ಬಿಡದಿಯಲ್ಲಿ ಸಂಸ್ಥೆ ಆರಂಭವಾಯಿತು. ಟೊಯೋಟಾ ದೇಶಕ್ಕೆ ಆಸ್ತಿ, ಈ ಸಂಸ್ಥೆ, ಅದರ ಸಿಬ್ಬಂದಿ, ಅದರ ವಾಹನಗಳ ಮೇಲೆ ನಮಗೆ ಅಪಾರ ನಂಬಿಕೆ ಇದೆ. ಟೊಯೋಟಾ ಸಂಸ್ಥೆ ಜತೆಗೆ ನಾನಿದ್ದೇನೆ, ನಮ್ಮ ಸರ್ಕಾರವೂ ಇದೆ. ನಾನು ಟೊಯೋಟಾ ಕುಟುಂಬದ ಸದಸ್ಯ. ನಿಮ್ಮ ಜತೆ ನಾನಿದ್ದೇನೆ.

ಈ ಸಂಸ್ಥೆ ರಾಮನಗರ ಜಿಲ್ಲೆಯ ಸಾಕಷ್ಟು ಜನರಿಗೆ ಕೆಲಸ ಕೊಟ್ಟಿದೆ. ಆದರೆ ಯೂನಿಯನ್ ಚಟುವಟಿಕೆ ಮೂಲಕ ಕೆಲವರು ಗೊಂದಲ ಮೂಡಿಸಿದ್ದರು. ಯಾವುದೇ ಚಟುವಟಿಕೆ ಅಭಿವೃದ್ಧಿಗೆ ಮಾರಕ ಆಗಬಾರದು. ಒಂದು ಸಂಸ್ಥೆ ಆರಂಭಿಸಿ, ಬಂಡವಾಳ ಹೂಡಿಕೆ ಮಾಡಬೇಕಾದರೆ ಅನೇಕ ಸರ್ಕಾರದ ಕಾನೂನು ಮುಂದಿಟ್ಟುಕೊಂಡು ಯೂನಿಯನ್‌ಗಳು ಅಡ್ಡಿ ಬರುತ್ತವೆ. ಇದರಿಂದ ಅಭಿವೃದ್ಧಿಗೆ ಮಾರಕವಾಗುತ್ತದೆ. ನೆರೆಯ ಕೇರಳದಲ್ಲಿ ಯೂನಿಯನ್ ಗಳು ಹೆಚ್ಚಾದ ಪರಿಣಾಮ ಅಲ್ಲಿ ಹೆಚ್ಚಿನ ಬುದ್ಧಿವಂತರು ಇದ್ದರೂ ಯಾರೂ ಬಂಡವಾಳ ಹೂಡಿಕೆ ಮಾಡಲು ಮುಂದಾಗುವುದಿಲ್ಲ. ನಮ್ಮ ರಾಜ್ಯದಲ್ಲಿ ಬಂಡವಾಳ ವಿಸ್ತರಣೆ ಮಾಡಿ ಹಚ್ಚಿನ ಜನರಿಗೆ ಕೆಲಸ ನೀಡಲು ಟೊಯೋಟಾ ಸಂಸ್ಥೆ ಮುಂದಾಗಿದೆ.

ಶ್ರಮ, ಶಿಸ್ತು ಇಲ್ಲದೇ ಯಾರೂ ಉದ್ದಾರ ಆಗಲು ಸಾಧ್ಯವಿಲ್ಲ. ಒಂದು ಸಂಸ್ಥೆ ಕಟ್ಟೋದು ಎಷ್ಟು ಕಷ್ಟ ಅಂತ ಅರ್ಥ ಮಾಡ್ಕೋಬೇಕು. ಎಷ್ಟೋ ಜನಕ್ಕೆ ಈ ಸಂಸ್ಥೆಯಲ್ಲಿನ ಕೆಲಸ ನೋಡಿ ಹೆಣ್ಣು ಕೊಟ್ಟಿದ್ದಾರೆ. ಇಲ್ಲಿ ಕೆಲಸ ಮಾಡೋದು, ತರಬೇತಿ ಪಡೆಯೋದು ಒಂದು ಗೌರವ. ಹೀಗಾಗಿ ಸಂಸ್ಥೆ ಬೆಳೆಸಿ, ನೀವೂ ಬೆಳೆಯಿರಿ.

ಇಲ್ಲಿ ತರಬೇತಿ ಪಡೆಯುತ್ತಿರುವ ಹಾಗೂ ಕೆಲಸ ಮಾಡುತ್ತಿರುವ ಯುವ ಸಮುದಾಯಕ್ಕೆ ಒಂದು ಕಿವಿ ಮಾತು. ನೀವು ಜೀವನದಲ್ಲಿ ಕನಸು ಕಾಣಬೇಕು, ಅದನ್ನು ನನಸಾಗಿಸಲು ನೀವು ಹಂಬಲಿಸಬೇಕು. ಅದಕ್ಕಾಗಿ ಶ್ರಮ ಹಾಕಬೇಕು. ಈ ಪ್ರಕ್ರಿಯೆಯಲ್ಲಿ ನೀವು ಶಿಸ್ತನ್ನು ಹೊಂದಿರಬೇಕು.

ಗ್ರಾಮೀಣ ಭಾಗದ ಮಕ್ಕಳಿಗೆ ಪ್ರೋತ್ಸಾಹ ನೀಡಲು, 51 ಐಟಿಐ ಕಾಲೇಜುಗಳ ಜತೆ ಒಡಂಬಡಿಕೆ ಮಾಡಿಕೊಂಡು ಅಲ್ಲಿ ಅವರಿಗೆ ತರಬೇತಿ ನೀಡಿ ಉದ್ಯೋಗ ಸಿಗುವಂತೆ ಮಾಡಲಾಗುತ್ತಿದೆ. ಟೊಯೋಟಾ ಕಂಪನಿಯಲ್ಲಿ ಕೆಲಸ ಮಾಡುವುದರಿಂದ ಸಮಾಜದಲ್ಲಿ ಗೌರವ ಸಿಗುತ್ತದೆ.

ನೀವು ನಿಮ್ಮ ಬೇರು ಮರೆತರೆ ಫಲ ಸಿಗುವುದಿಲ್ಲ. ಹುಳಿ ಪೆಟ್ಟು ಬೀಳದೆ ಯಾವ ಕಲ್ಲು ಶಿಲೆಯಾಗುವುದಿಲ್ಲ, ಉಳುಮೆ ಮಾಡದೇ ಯಾವ ಜಮೀನೂ ಮಟ್ಟವಾಗುವುದಿಲ್ಲ. ಅದೇ ರೀತಿ ಶ್ರಮವಿಲ್ಲದೆ ಫಲವಿಲ್ಲ, ಶ್ರಮಪಟ್ಟರೆ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯ.

ಟೊಯೋಟಾ ಸಂಸ್ಥೆಯವರು ಮುಂದಿನ ದಿನಗಳಲ್ಲಿ ಶಾಲೆಗಳ ಜೊತೆಗೆ ಇಂಜಿನಿಯರಿಂಗ್ ಕಾಲೇಜುಗಳ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಮನವಿ ಮಾಡುತ್ತೇನೆಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com