ಡಿಸೆಂಬರ್‌ ವೇಳೆಗೆ ರೈತರಿಗೆ ಬರ ಪರಿಹಾರ ತಲುಪಿಸಲಾಗುವುದು: ಕಂದಾಯ ಸಚಿವ ಕೃಷ್ಣ ಬೈರೇಗೌಡ

ಬರಗಾಲದಿಂದ ಆಗಿರುವ ಬೆಳೆ ಹಾನಿಗೆ ‘ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ವ್ಯವಸ್ಥೆ’ (ಫ್ರೂಟ್ಸ್‌) ದತ್ತಾಂಶದ ಆಧಾರದಲ್ಲೇ ಪರಿಹಾರ ವಿತರಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ಹೇಳಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ
ಕಂದಾಯ ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಬರಗಾಲದಿಂದ ಆಗಿರುವ ಬೆಳೆ ಹಾನಿಗೆ ‘ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ವ್ಯವಸ್ಥೆ’ (ಫ್ರೂಟ್ಸ್‌) ದತ್ತಾಂಶದ ಆಧಾರದಲ್ಲೇ ಪರಿಹಾರ ವಿತರಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ಹೇಳಿದರು.

ನಿನ್ನೆಯಷ್ಟೇ ಸಚಿವರು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಆಯ್ದ ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರ ಜೊತೆ ಸಭೆ ನಡೆಸಿದರು.

ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ಹಿಂದಿನ ವರ್ಷಗಳಲ್ಲಿ ಬರ ಪರಿಹಾರ ವಿತರಣೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವುದು ಪತ್ತೆಯಾಗಿತ್ತು. ಅಕ್ರಮಗಳನ್ನು ತಡೆಯುವುದಕ್ಕಾಗಿ ಫ್ರೂಟ್ಸ್‌ ದತ್ತಾಂಶದ ಆಧಾರದಲ್ಲಿ ಪರಿಹಾರ ವಿತರಣೆಗೆ ನಿರ್ಧರಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಡಿಸೆಂಬರ್‌ನಲ್ಲಿ ರೈತರಿಗೆ ಪರಿಹಾರ ಸಿಗುವ ಸಾಧ್ಯತೆಯಿದೆ ಎಂದು ಹೇಳಿದರು.

ರಾಜ್ಯದ ಶೇಕಡ 95ರಷ್ಟು ರೈತರು ಫ್ರೂಟ್ಸ್‌ ಗುರುತಿನ ಸಂಖ್ಯೆ ಹೊಂದಿದ್ದಾರೆ. ಆದರೆ, ಒಟ್ಟು ಸಾಗುವಳಿ ವಿಸ್ತೀರ್ಣದ ಶೇ 63ರಷ್ಟು ಮಾತ್ರ ದತ್ತಾಂಶದಲ್ಲಿ ದಾಖಲಾಗಿದೆ. ಆದ್ದರಿಂದ ವಿಸ್ತೀರ್ಣದ ವಿವರವನ್ನು ದಾಖಲಿಸಲು 15 ದಿನಗಳ ಕಾಲಾವಕಾಶ ನೀಡಲಾಗುವುದು. ನಂತರದಲ್ಲಿ ಫ್ರೂಟ್ಸ್‌ ದತ್ತಾಂಶದಲ್ಲಿ ದಾಖಲಾದ ವಿಸ್ತೀರ್ಣದ ಆಧಾರದಲ್ಲೇ ಪರಿಹಾರ ವಿತರಣೆ ನಡೆಯಲಿದೆ ಎಂದು ತಿಳಿಸಿದರು.

ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಕಂದಾಯ ಇಲಾಖೆ ಕಚೇರಿಗಳಲ್ಲಿ ಫ್ರೂಟ್ಸ್‌ ದತ್ತಾಂಶದಲ್ಲಿ ವಿಸ್ತೀರ್ಣ ದಾಖಲಿಸಲು ಅವಕಾಶ ಕಲ್ಪಿಸಲಾಗುವುದು. ರೈತರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.

ಡಿಸೆಂಬರ್ ನಲ್ಲಿಯೇ ಪರಿಹಾರ ಸಿಗಲಿದೆಯೇ ಎಂಬ ಪ್ರಶ್ನೆಗೆ ುತ್ತರಿಸಿ, ಕೇಂದ್ರ ತಂಡ ಕರ್ನಾಟಕದಲ್ಲಿದ್ದು, ಈಗಾಗಲೇ ಸರ್ಕಾರ ಅಂಕಿಅಂಶವನ್ನು ನೀಡಿದೆ. ಪರಿಹಾರದ ಮೊತ್ತ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಶೀಘ್ರದಲ್ಲೇ ಬಿಡುಗಡೆಯಾಗುವ ವಿಶ್ವಾಸವಿದೆ. ರೈತರ ಅಂಕಿಅಂಶಗಳನ್ನು ಸಿದ್ಧಪಡಿಸಲಾಗುತ್ತಿದೆ. ಕೇಂದ್ರದಿಂದ ಹಣ ಬಂದರೆ ಎರಡು ದಿನದಲ್ಲಿ ಪರಿಹಾರ ನೀಡಬಹುದು ಎಂದು ಹೇಳಿದರು.

ಭೇಟಿಗೆ ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ 10 ಬಾರಿ ಪತ್ರ ಬರೆದಿದ್ದೇವೆ. ದೆಹಲಿಯಲ್ಲಿ ಭೇಟಿಗೆ ಅವಕಾಶ ಸಿಗದಿದ್ದರೆ, ಬೇರೆ ಯಾವುದೇ ರಾಜ್ಯ, ಪ್ರದೇಶದಲ್ಲಿ ಬೇಕಾದರೂ ನಾವೇ ಭೇಟಿಗೆ ಬರುತ್ತೇವೆಂದೂ ತಿಳಿಸಿದ್ದೇವೆ. ಆದರೆ, ಇಲ್ಲಿಯವರೆಗೂ ನಮಗೆ ಸಮಯ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದಿನ ವರ್ಷಗಳಲ್ಲಿ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ನೀಡಿದ ಪರಿಹಾರದ ಕುರಿತು ಮಾತನಾಡಿ, ರೈತರ ಕುರಿತ ಮಾಹಿತಿಗಳನ್ನು ಅಧಿಕಾರಿಗಳು ಸ್ವತಃ ನಮೂದಿಸಿದ್ದು, ಇಲ್ಲಿ ಅಕ್ರಮಗಳು ನಡೆದಿರುವುದು, ಅಧಿಕಾರಿಗಳು ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಕಂಡು ಬಂದಿದೆ. ಹೀಗಾಗಿಯೇ ಫ್ರೂಟ್ಸ್‌ ದತ್ತಾಂಶದ ಆಧಾರದಲ್ಲಿ ಪರಿಹಾರ ವಿತರಣೆಗೆ ನಿರ್ಧರಿಸಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com