ಹಾಸನಾಂಬ ದರ್ಶನ: 9 ದಿನಗಳಲ್ಲಿ 5.52 ಕೋಟಿ ರೂ ಸಂಗ್ರಹ

ರಾಜ್ಯದ ಖ್ಯಾತ ಹಾಸನಾಂಬ ದೇಗುಲದಲ್ಲಿ ಭಕ್ತರ ದರ್ಶನ 9ನೇ ದಿನವೂ ಮುಂದುವರೆದಿದ್ದು, ಈ ಅವಧಿಯಲ್ಲಿ ದೇಗುಲದಲ್ಲಿ ಸುಮಾರು 5.52 ಕೋಟಿ ರೂ ಹಣ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಹಾಸನಾಂಬ ದೇಗುಲ
ಹಾಸನಾಂಬ ದೇಗುಲ

ಹಾಸನ: ರಾಜ್ಯದ ಖ್ಯಾತ ಹಾಸನಾಂಬ ದೇಗುಲದಲ್ಲಿ ಭಕ್ತರ ದರ್ಶನ 9ನೇ ದಿನವೂ ಮುಂದುವರೆದಿದ್ದು, ಈ ಅವಧಿಯಲ್ಲಿ ದೇಗುಲದಲ್ಲಿ ಸುಮಾರು 5.52 ಕೋಟಿ ರೂ ಹಣ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ಕಳೆದ ಒಂಬತ್ತು ದಿನಗಳಲ್ಲಿ ದೇವಸ್ಥಾನದ ಆಡಳಿತ ಮಂಡಳಿಯು 1000 ಹಾಗೂ 400 ರೂಪಾಯಿ ಮೌಲ್ಯದ ವಿಶೇಷ ಪ್ರವೇಶ ಚೀಟಿ ಹಾಗೂ ಲಡ್ಡು ಪ್ರಸಾದ ಮಾರಾಟ ಮಾಡಿ 5.52 ಕೋಟಿ ರೂ ಸಂಗ್ರಹಿಸಿದೆ. ಇಂದು ಅಂದರೆ ಮಂಗಳವಾರದವರೆಗೆ ದೇವಸ್ಥಾನ ತೆರೆದಿರುವುದರಿಂದ ಆದಾಯ 6.50 ಕೋಟಿ ದಾಟುವ ಸಾಧ್ಯತೆ ಇದೆ ಎಂದು ಹೇಳಿದೆ.

ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಹಾಸನಾಂಬ ದೇಗುಲ ವರ್ಷದಲ್ಲಿ ಕೆಲವೇ ದಿನಗಳು ಮಾತ್ರ ತೆರೆದಿರುತ್ತದೆ. ಹೀಗಾಗಿ ಇದು ರಾಜ್ಯದಾದ್ಯಂತ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದೆ. ಸಹಾಯಕ ಕಮಿಷನರ್ ಮತ್ತು ದೇವಸ್ಥಾನದ ಆಡಳಿತಾಧಿಕಾರಿ ಮಾರುತಿ ಗೌಡ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ನೊಂದಿಗೆ ಮಾತನಾಡಿ 28,052 ಜನರು 1,000 ರೂ ಟಿಕೆಟ್‌ಗಳನ್ನು ಖರೀದಿಸಿದರೆ, 71,885 ರೂ.400 ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಶನಿವಾರ 1.50 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಆದರೆ ಭಾನುವಾರದಂದು ಸಂಖ್ಯೆ ಕಡಿಮೆಯಾಗಿತ್ತು. ದರ್ಶನಕ್ಕೆ ಮಂಗಳವಾರ ಕೊನೆಯ ದಿನವಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ, ದೇವಸ್ಥಾನದ ಆಡಳಿತಾಧಿಕಾರಿ, ಮ್ಯೂರಲ್ ತಹಶೀಲ್ದಾರ್ ಸಮ್ಮುಖದಲ್ಲಿ ಅರ್ಚಕರು ದೇವಸ್ಥಾನದ ಬಾಗಿಲು ಮುಚ್ಚುವ ಮುನ್ನ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ಶುಕ್ರವಾರ ದೇವಸ್ಥಾನದ ಆವರಣದಲ್ಲಿ 17 ಮಂದಿ ಭಕ್ತರಿಗೆ ವಿದ್ಯುತ್ ಶಾಕ್ ತಗುಲಿ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ವರ್ಷ ಮೊದಲ ಬಾರಿಗೆ ದೇವಾಲಯದ ಆಡಳಿತ ಸಮಿತಿಯು ದೇವಾಲಯದಲ್ಲಿ ನಿಯೋಜನೆಗೊಂಡ ಅಧಿಕಾರಿಗಳಿಗೆ ಉಪಹಾರ, ಊಟ ಮತ್ತು ರಾತ್ರಿಯ ಊಟದ ವ್ಯವಸ್ಥೆಯನ್ನು ಮಾಡಿತ್ತು.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಸಚಿವರಾದ ಆರ್.ಬಿ.ತಿಮ್ಮಾಪುರ್, ಕೆ.ವೆಂಕಟೇಶ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಜಿ ಸಚಿವ ಗೋಪಾಲಯ್ಯ, ಆಧ್ಯಾತ್ಮಿಕ ಮುಖಂಡ ರವಿಶಂಕರ್ ಗುರೂಜಿ ಸೇರಿದಂತೆ ಪ್ರಮುಖರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com