ನಗರದ ಅಪಾರ್ಟ್‌ಮೆಂಟ್‌ನಲ್ಲಿ 11 ಬೆಕ್ಕುಗಳ ಸರಣಿ ಸಾವು: ಪೊಲೀಸ್ ಠಾಣೆ ಮೆಟ್ಟಿಲೇರಿದ ಉದ್ಯಮಿ!

ಪ್ರೀತಿಯಿಂದ ಸಾಕಿ ಸಲಹಿದ್ದ ಬೆಕ್ಕುಗಳು ದಿಢೀರನೇ ಒಂದರ ಹಿಂದೆ ಒಂದಂತೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಉದ್ಯಮಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಗರದಲ್ಲಿ ವರದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರೀತಿಯಿಂದ ಸಾಕಿ ಸಲಹಿದ್ದ ಬೆಕ್ಕುಗಳು ದಿಢೀರನೇ ಒಂದರ ಹಿಂದೆ ಒಂದಂತೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಉದ್ಯಮಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಗರದಲ್ಲಿ ವರದಿಯಾಗಿದೆ.

ನಗರದ ರಾಜರಾಜೇಶ್ವರಿ ನಗರದ ತಿರುಚ್ಚಿ-ಮಹಾಸ್ವಾಮಿ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ವಾಸವಿರುವ ಉದ್ಯಮಿ ಶ್ಯಾಮವೀರ್ ಶರ್ಮಾ (47) ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ಹಿನ್ನೆಲೆಯಲ್ಲಿ ಪೊಲೀಸರು ಅಪಾರ್ಟ್'ಮೆಂಟ್ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ದೃಶ್ಯಾವಳಿಗಳಲ್ಲಿ ಉದ್ಯಮಿಯ ಮನೆಯ ಹೊರಗೆ ಇಟ್ಟಿದ್ದ ಬೆಕ್ಕುಗಳ ಆಹಾರದ ಬಟ್ಟಲಿಗೆ ಮಹಿಳೆಯೊಬ್ಬರು ಪುಡಿ ಮಿಶ್ರಣ ಮಾಡುತ್ತಿರುವುದು ಕಂಡು ಬಂದಿದೆ.

ಶಂಕಾಸ್ಪದ ಬೆಳವಣಿಗೆಗಳು ಕಂಡುಬಂದ ಹಿನ್ನೆಲೆಯಲ್ಲಿ ಬೆಕ್ಕಳುಗಳ ಸಾವಿಗೆ ನಿಖರ ಕಾರಣಗಳ ತಿಳಿಯಲು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದಾರೆ.

ನಾವಿರುವುದು ನೆಲ ಮಹಡಿಯಲ್ಲಿ. ಪ್ಯಾಸೇಜ್ ನಲ್ಲಿ ಬೆಕ್ಕುಗಳಿಗೆ ಬಟ್ಟಲಿನಲ್ಲಿ ಆಹಾರ ಇಡಲಾಗುತ್ತಿತ್ತು. ಮಹಿಳೆಯೊಬ್ಬರು ಬಟ್ಟಲುಗಳಿಗೆ ಪುಡಿ ಮಿಶ್ರಣ ಮಾಡುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಎರಡು ವರ್ಷಗಳ ಹಿಂದೆ ಮೂರು ಬೆಕ್ಕುಗಳು ಇದೇ ರೀತಿ ಸಾವನ್ನಪ್ಪಿದ್ದವು. ಆದರೆ, ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಆದರೆ, ಈ ಬಾರಿ ಸಾಕ್ಷಿಗಳು ಸಿಕ್ಕಿವೆ.
 
ವಾರದ ಹಿಂದೆ 11 ಬೆಕ್ಕುಗಳ ಪೈಕಿ 7 ಬೆಕ್ಕುಗಳು ಒಂದರ ಹಿಂದಂತೆ ಸಾವನ್ನಪ್ಪಲು ಪ್ರಾರಂಭಿಸಿದ್ದವು. ರಕ್ತಸ್ರಾವ, ವಾಂತಿ, ನಿತ್ರಾಣದಿಂದ ಅವು ಸಾವನ್ನಪ್ಪಿದ್ದವು. ವೈರಸ್ ನಿಂದ ಸಾವನ್ನಪ್ಪಿಯೇ ಎಂಬುದನ್ನು ತಿಳಿಯಲು ಬೆಕ್ಕುಗಳನ್ನು ಪಶುವೈದ್ಯರ ಬಳಿ ಕರೆದುಕೊಂಡು ಹೋಗಲಾಗಿತ್ತು. ಬೆಕ್ಕಿನ ಮರಣೋತ್ತರ ಪರೀಕ್ಷೆಯನ್ನೂ ಮಾಡಿಸಲಾಗುತ್ತಿದ್ದು, ವರದಿಗಾಗಿ ಕಾಯುತ್ತಿದ್ದೇವೆಂದು ಉದ್ಯಮಿ ಹೇಳಿದ್ದಾರೆ. ದೂರು ಹಿನ್ನೆಲೆಯಲ್ಲಿ ಪೊಲೀಸರು ಐಪಿಸಿ ಸೆಕ್ಷನ್ 428 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com