ಬೆಂಗಳೂರು: ಅಪಹರಣಕಾರರಿಗೆ ಸಹಾಯ ಮಾಡಿದ್ದ ಪೊಲೀಸರ ಬಂಧನ!
ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಗ್ಯಾಂಗ್‌ಗೆ ಸಹಾಯ ಮಾಡಿದ ಆರೋಪದ ಮೇಲೆ ಮಡಿವಾಳ ಪೊಲೀಸ್ ಠಾಣೆಯ ಪ್ರೊಬೇಷನರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಪೇದೆ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರು ಮಂದಿಯ ತಂಡವೊಂದು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವ್ಯಕ್ತಿಯೊಬ್ಬನನ್ನು ಅಪಹರಿಸಿ 1.5 ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿ ಸೇರಿದಂತೆ ಸುಮಾರು 1.7 ಕೋಟಿ ರೂ. ಸುಲಿಗೆ ಮಾಡಿದ್ದರು.
ಸಂತ್ರಸ್ತರು ಹಲವು ಖಾತೆಗಳಿಗೆ ವಹಿವಾಟು ನಡೆಸಿದ್ದರು. ಅವರಿಂದ ಹಣ ವಸೂಲಿ ಮಾಡಲು ಆರೋಪಿಗಳಿಗೆ ಪ್ರೊಬೇಷನರಿ ಪಿಎಸ್ ಐ ನೆರವಾಗಿದ್ದಾರೆ. ಆರೋಪಿಗಳು ವಿರುದ್ಧ ಕೆಜಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.ನಂತರ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಆರೋಪಿಗಳಲ್ಲಿ ಒಬ್ಬನನ್ನು ನವೆಂಬರ್ 10 ರಂದು ಬಂಧಿಸಲಾಗಿತ್ತು.
"ನವೆಂಬರ್ 15 ರಂದು ಪ್ರೊಬೇಷನರಿ ಪಿಎಸ್‌ಐ, ಕಾನ್‌ಸ್ಟೆಬಲ್ ಮತ್ತು ಗೃಹ ರಕ್ಷಕರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಸೆರೆಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ" ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ಸೋಮವಾರ ತಿಳಿಸಿದೆ. ಪ್ರೊಬೇಷನರಿ ಪಿಎಸ್‌ಐ ಸಿದ್ಧಾರೂಢ ಬಿಜ್ಜಣ್ಣನವರ್, ಪೊಲೀಸ್ ಪೇದೆ ಅಲ್ಲಾ ಬಕ್ಷ್ ಮತ್ತು ಹೋಮ್ ಗಾರ್ಡ್ ರಾಜ್ ಕಿಶೋರ್ ಎಂದು ಗುರುತಿಸಲಾಗಿದೆ. ನವೆಂಬರ್ 10 ರಿಂದ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳು ಕಾರ್ತಿಕ್ ಅವರನ್ನು ಕೆಜಿ ಹಳ್ಳಿ ಪ್ರದೇಶಕ್ಕೆ ಕರೆದೊಯ್ದು ಸುಲಿಗೆ ಮಾಡಿದ್ದರು.
ಕಾರ್ತಿಕ್‌ನಿಂದ ಹಣ ವಸೂಲಿ ಮಾಡಲು ಕಿಶೋರ್, ಬಿಜ್ಜಣ್ಣನವರ್ ಅವರ ಸಹಾಯ ಕೇಳಿದ್ದರು. ಕಾರ್ತಿಕ್ ತನ್ನ ಸಹೋದರನಿಂದ ಹಣ ಪಡೆದಿದ್ದಾಗಿ ಪ್ರೊಬೇಷನರಿ ಪಿಎಸ್ ಐಗೆ ಹೋಮ್ ಗಾರ್ಡ್ ತಿಳಿಸಿದ್ದಾರೆ. ಕಾರ್ತಿಕ್ ಅವರನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿದ ನಂತರ ಬಿಜ್ಜಣ್ಣನವರ್ ತಮ್ಮ ಅಧಿಕೃತ ಅಧಿಕಾರ ಬಳಸಿ ಹಣ ವಸೂಲಿ ಮಾಡಿದ್ದರು. ಜುಲೈನಲ್ಲಿ ಈ ಘಟನೆ ನಡೆದಿದ್ದು, ಈ ಹಿಂದೆ ಕೆ.ಜಿ.ಹಳ್ಳಿ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು.
ವಂಶಿ ಕೃಷ್ಣ, ಕಿಶೋರ್ ಮತ್ತು ವಿನೋದ್ ನಾಯಕ್ ಎಂಬ ಇತರ ಮೂವರನ್ನು ಈ ಹಿಂದೆ ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ ನಂತರ, ಬಿಜ್ಜಣ್ಣನವರ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸಿಸಿಬಿಗೆ ಲಗತ್ತಿಸಲಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ