ಒಕ್ಕಲಿಗರ ಸಂಘ ಸಲ್ಲಿಸಿದ ಮನವಿಗೆ ನಾನು ಸಹಿ ಮಾಡಬಾರದೇ? ಮಾಡಿದರೆ ತಪ್ಪೇನು?: ಡಿಕೆ.ಶಿವಕುಮಾರ್

ಒಕ್ಕಲಿಗರ ಸಂಘ ಸಲ್ಲಿಸಿದ ಮನವಿಗೆ ನಾನು ಸಹಿ ಮಾಡಬಾರದೇ? ಮಾಡಿದರೆ ತಪ್ಪೇನು? ಅದು ನಮ್ಮ ಸಮಾಜದ ನಿರ್ಣಯ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಬುಧವಾರ ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌

ಬೆಂಗಳೂರು: ಒಕ್ಕಲಿಗರ ಸಂಘ ಸಲ್ಲಿಸಿದ ಮನವಿಗೆ ನಾನು ಸಹಿ ಮಾಡಬಾರದೇ? ಮಾಡಿದರೆ ತಪ್ಪೇನು? ಅದು ನಮ್ಮ ಸಮಾಜದ ನಿರ್ಣಯ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಬುಧವಾರ ಹೇಳಿದ್ದಾರೆ.

ಕಾಂತರಾಜು ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸರ್ಕಾರ ಸ್ವೀಕಾರ ಮಾಡದಂತೆ ಸಹಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ನಮ್ಮ ಸಮಾಜದ ನಿರ್ಣಯ ಬೇರೆ, ರಾಜಕೀಯ ಬೇರೆ. ನಾನು ಮತ್ತು ಸಚಿವರು ಸಭೆಯಲ್ಲಿ ಭಾಗವಹಿಸಿದ್ದೇವೆ. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಸಿಗಬೇಕು ಎಂದು ಅನೇಕ ಸಮುದಾಯಗಳು ಆಗ್ರಹಿಸಿವೆ. ಪರಿಶಿಷ್ಟರು, ಪಂಚಮಸಾಲಿ, ವೀರಶೈವರು, ಒಕ್ಕಲಿಗರು ಸೇರಿದಂತೆ ಹಲವರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿ ಪಕ್ಷಬೇಧ ಮರೆತು ಹೋರಾಟ ಮಾಡಲಾಗುತ್ತಿದೆ. ಕೆಲ ಸಮುದಾಯ ಹಾಗೂ ಅದರ ನಾಯಕರು ಜಾತಿ ಗಣತಿ ಸಮೀಕ್ಷೆ ವೇಳೆ ನಮ್ಮನ್ನು ಸಂಪರ್ಕಿಸಿಲ್ಲ. ಹೀಗಾಗಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ಕೇಳುತ್ತಿದ್ದಾರೆಂದು ಹೇಳಿದರು.

ಒಕ್ಕಲಿಗರ ಸಂಘ ಸಲ್ಲಿಸಿದ ಮನವಿ ಪತ್ರಕ್ಕೆ ನಾನು ಸಹಿ ಮಾಡಬಾರದೇ? ಎಷ್ಟು ಜನ ಸಚಿವರು ಈ ವಿಚಾರದಲ್ಲಿ ಸಭೆ ಮಾಡಿಲ್ಲ? ಅದೇ ರೀತಿ ನಾನು ರಾಜಕೀಯ ಪಕ್ಕಕ್ಕಿಟ್ಟು ನಮ್ಮ ಸಮಾಜ, ಅದರ ಗೌರವ, ಅಭಿಮಾನ ಉಳಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದೇನೆ. ಇದು ಎಲ್ಲ ನಾಯಕರಲ್ಲೂ ಇರುತ್ತದೆ’ ಎಂದು ತಿಳಿಸಿದರು.

ನಿಗಮ ಮಂಡಳಿಗಳಿಗೆ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿ, ಚರ್ಚೆ ಮಾಡುತ್ತಿದ್ದೇವೆ. ಹಿರಿಯ ನಾಯಕರು, ಶಾಸಕರ ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ. ನಾನು ಮತ್ತು ಮುಖ್ಯಮಂತ್ರಿ ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹೋಗಬೇಕಿದೆ. 28ರಂದು ನಮ್ಮ ದೆಹಲಿ ನಾಯಕರು ಮತ್ತೆ ರಾಜ್ಯಕ್ಕೆ ಬರುತ್ತಿದ್ದು, ಆ ಸಭೆ ಬಳಿಕ ಹೈಕಮಾಂಡ್ ನಾಯಕರಿಗೆ ಪಟ್ಟಿ ಕಳುಹಿಸುತ್ತೇವೆ’ ಎಂದರು.

ಇದೇ ವೇಳೆ ನಿಗಮ ಮಂಡಳಿ ನೇಮಕ ವಿಳಂಬ ಮಾಡುತ್ತಿರುವುದು ಕಲೆಕ್ಷನ್‌ಗಾಗಿ ಎಂಬ ಬಿಜೆಪಿ ಆರೋಪದ ಬಗ್ಗೆ ಮಾತನಾಡಿ, ನಾವು ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ನಿಗಮ ಮಂಡಳಿ ನೇಮಕ ಮಾಡುತ್ತಿದ್ದೇವೆ. ಅವರು ಅಧಿಕಾರಕ್ಕೆ ಬಂದ ಎಷ್ಟು ವರ್ಷಗಳ ನಂತರ ಮಾಡಿದರು? ಅವರಿಗೆ ನಾಲ್ಕೈದು ಸಚಿವರನ್ನು ನೇಮಕ ಮಾಡಲಾಗದೇ ಮುಖ್ಯಮಂತ್ರಿಯೇ ಎಲ್ಲಾ ಖಾತೆಯನ್ನು ಇಟ್ಟುಕೊಂಡಿದ್ದರು’ ಎಂದು ಹೇಳಿದರು.

ಕಾಂತರಾಜು ವರದಿ ತಿರಸ್ಕರಿಸುವಂತೆ ಒಕ್ಕಲಿಗರ ಸಂಘದ ಆಗ್ರಹ ಪತ್ರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಹಿ ಹಾಕಿದ್ದಾರೆ. ಡಿಸಿಎಂ ಮಾತ್ರವಲ್ಲದೇ ಕಾಂಗ್ರೆಸ್ ಪಕ್ಷದ ಬಹುತೇಕ ಒಕ್ಕಲಿಗ ನಾಯಕರು, ಇತರೇ ಪಕ್ಷಗಳ ಪ್ರಮುಖರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ನವೆಂಬರ್ 24ಕ್ಕೆ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಆಯೋಗ ವರದಿ ಸಲ್ಲಿಸಲು ನಿರ್ಧರಿಸಿರುವ ಈ ಹೊತ್ತಲೇ ನಿರೀಕ್ಷೆಯಂತೆ ಸರ್ಕಾರದ ಒಳಗೆ ಹಾಗೂ ಹೊರಗಿನಿಂದ ಜಾತಿಗಣತಿ ವರದಿ ಕಿಚ್ಚು ಹೆಚ್ಚಾಗತೊಡಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com