ಬೆಂಗಳೂರಿಗಿಂದು ಪ್ರಧಾನಿ ಮೋದಿ: ಹೆಚ್ಎಎಲ್ ಕಾರ್ಯಕ್ರಮದಲ್ಲಿ ಭಾಗಿ

ವಾಯುಪಡೆಯಿಂದ ಶತಕೋಟಿ ಡೀಲ್ ನಿರೀಕ್ಷೆಯಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಕಂಪನಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಭೇಟಿ ನೀಡಲಿದ್ದಾರೆ.
ಪ್ರಧಾನಿ  ಮೋದಿ.
ಪ್ರಧಾನಿ ಮೋದಿ.

ಬೆಂಗಳೂರು: ವಾಯುಪಡೆಯಿಂದ ಶತಕೋಟಿ ಡೀಲ್ ನಿರೀಕ್ಷೆಯಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಕಂಪನಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಭೇಟಿ ನೀಡಲಿದ್ದಾರೆ.

ಬೆಳಗ್ಗೆ 9:15ಕ್ಕೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಮೋದಿಯವರು, ಈ ವೇಳೆತೇಜಸ್ ಜೆಟ್‌ಗಳ ಸೌಲಭ್ಯ ಸೇರಿದಂತೆ ಅವುಗಳ ಉತ್ಪಾದನಾ ಸೌಲಭ್ಯಗಳನ್ನು ಹಾಗೂ ತಾಂತ್ರಿಕ ಸವಲತ್ತುಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

ಬೆಂಗಳೂರು ಭೇಟಿ ಹಿನ್ನೆಲೆಯಲ್ಲಿ ಹೆಚ್‌ಎಎಲ್ ಈಗಾಗಲೇ ಅಗತ್ಯ ತಯಾರಿಗಳನ್ನು ಮಾಡಿಕೊಂಡಿದೆ. ಮಧ್ಯಾಹ್ನ 12.15ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣದ ಮೂಲಕ ತೆಲಂಗಾಣದ ದಿಂಡುಗಲ್ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳಸಲಿದ್ದು, ಅಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ,

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಪ್ರಧಾನಿ ಮೋದಿ ಅವರು ಇದು ಎರಡನೇ ಬಾರಿಗೆ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಈ ಹಿಂದೆ ಆಗಸ್ಟ್ 26ರಂದು ಬೆಂಗಳೂರಿಗೆ ಆಗಮಿಸಿ ಚಂದ್ರಯಾನ 3ರ ಯಶಸ್ಸಿಗೆ ಕಾರಣರಾದ ಇಸ್ರೋ ತಂಡವನ್ನು ಭೇಟಿ ಮಾಡಿ ಅಭಿನಂದಿಸಿದ್ದರು.

ಫ್ರೆಂಚ್ ಸಂಸ್ಥೆ ಸಫ್ರಾನ್‌ ಜೊತೆಗೆ ಜಂಟಿಯಾಗಿ ಹೆಲಿಕಾಪ್ಟರ್ ಎಂಜಿನ್‌ಗಳನ್ನು ವಿನ್ಯಾಸಗೊಳಿಸುವ ಮತ್ತು ಅಭಿವೃದ್ಧಿಪಡಿಸುವ ಕೆಲಸವನ್ನು ಹೆಚ್‌ಎಎಲ್ ಪ್ರಾರಂಭಿಸಲು ಸಿದ್ಧವಾಗಿದೆ. ಅದೇ ರೀತಿ, ಅಮೆರಿಕನ್‌ ಸಂಸ್ಥೆ ಜಿಇ ಏರೋಸ್ಪೇಸ್‌ನೊಂದಿಗೆ ದೇಶದಲ್ಲಿ ಫೈಟರ್ ಜೆಟ್ ಎಂಜಿನ್‌ಗಳ ಜಂಟಿ ಉತ್ಪಾದನೆಯ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆ ನಡೆಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕಾ ಪ್ರವಾಸದ ಪರಿಣಾಮವಾಗಿ ಭಾರತೀಯ ವಾಯುಪಡೆಗೆ ಫೈಟರ್ ಜೆಟ್ ಎಂಜಿನ್‌ಗಳನ್ನು ಉತ್ಪಾದಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ನೊಂದಿಗೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿರುವುದಾಗಿ ಜಿಇ ಏರೋಸ್ಪೇಸ್ (ಜೂನ್ 23-2023) ಪ್ರಕಟಿಸಿತ್ತು.

ಎರಡು ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಬಲಪಡಿಸುವಲ್ಲಿ ಇದು ಪ್ರಮುಖ ಅಂಶವಾಗಿದೆ. ಒಪ್ಪಂದವು ಭಾರತದಲ್ಲಿ ಜಿ ಇ ಏರೋಸ್ಪೇಸ್‌ನ ಎಫ್ 414 ಎಂಜಿನ್‌ಗಳ ಜಂಟಿ ಉತ್ಪಾದನೆಯ ಯೋಜನೆಗೆ ಬುನಾದಿಯಾಗಿದೆ. ಜಿಇ ಏರೋಸ್ಪೇಸ್ ಇದಕ್ಕಾಗಿ ಅಗತ್ಯವಾದ ರಫ್ತು ಅನುಮತಿಗೆ ಅಮೆರಿಕ ಸರ್ಕಾರದ ಅನುಮತಿ ಪಡೆದಿದೆ. ಈ ಒಪ್ಪಂದವು ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ ಎಂ ಕೆ 2 ಕಾರ್ಯಕ್ರಮದ ಭಾಗವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com