ಡಿಕೆಶಿ ವಿರುದ್ಧದ ಸಿಬಿಐ ತನಿಖೆಗೆ ಅನುಮತಿ ವಾಪಸ್: ಅಧಿವೇಶನದಲ್ಲಿ ಚರ್ಚೆಗೆ ಸಿದ್ಧ ಎಂದ ಕಾಂಗ್ರೆಸ್

ಸಿಬಿಐ ತನಿಖೆ ನಡೆಸುತ್ತಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ (ಡಿಎ) ಪ್ರಕರಣವನ್ನು ಹಿಂಪಡೆಯುವ ಸಂಪುಟ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಶುಕ್ರವಾರ ಸಮರ್ಥಿಸಿಕೊಂಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ.
ಸಚಿವ ಪ್ರಿಯಾಂಕ್ ಖರ್ಗೆ.

ಬೆಂಗಳೂರು: ಸಿಬಿಐ ತನಿಖೆ ನಡೆಸುತ್ತಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ (ಡಿಎ) ಪ್ರಕರಣವನ್ನು ಹಿಂಪಡೆಯುವ ಸಂಪುಟ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಶುಕ್ರವಾರ ಸಮರ್ಥಿಸಿಕೊಂಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ಈ ವಿಚಾರವಾಗಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಚರ್ಚೆ ನಡೆಸಿ ಎಂದು ಹೇಳಿದರು.

ಕೇಂದ್ರದಲ್ಲಿ ನಿಮ್ಮ ಸರ್ಕಾರ ಅಧಿಕಾರದಲ್ಲಿದೆ. ನಿಮ್ಮ ಸರ್ಕಾರವೇ ರೂಪಿಸಿರುವ ನಿಯಮವನ್ನು ಹೇಗೆ ಉಲ್ಲಂಘಿಸಿದಿರಿ? ಡಿಸೆಂಬರ್ 4ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಚರ್ಚೆ ಬರುವುದಾದರೆ, ನಾವು ಸಿದ್ಧವಿದ್ದೇವೆ. ಕರ್ನಾಟಕದ ಇತಿಹಾಸದಲ್ಲಿ ಯಡಿಯೂರಪ್ಪ ಅವರ ಪ್ರಕರಣ ಸೇರಿದಂತೆ ಯಾವುದೇ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ವಿಚಾರಣೆ ನಡೆಸಿಲ್ಲ ಎಂದು ತಿಳಿಸಿದರು.

ಶಿವಕುಮಾರ್ ಅವರನ್ನು ರಕ್ಷಿಸಲು ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರ ಯತ್ನಿಸುತ್ತಿದೆ ಎಂಬ ಆರೋಪ ಕುರಿತು ಮಾತನಾಡಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಅಷ್ಟು ಪ್ರಾಮಾಣಿಕವಾಗಿದ್ದರೆ, ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಪ್ರಕರಣ ಮತ್ತು ಬಿಟ್‌ಕಾಯಿನ್ ಹಗರಣದ ಪ್ರಕರಣಗಳನ್ನು ಸಿಬಿಐ ತನಿಖೆಗೇಕೆ ನೀಡುತ್ತಿಲ್ಲ? 10 ವರ್ಷಗಳ ಹಿಂದೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವಿರೋಧ ಪಕ್ಷಗಳನ್ನು ಮುಗಿಸಲು ರಣತಂತ್ರವನ್ನು ರೂಪಿಸುತ್ತಿದೆ. ಆಪರೇಷನ್ ಕಮಲ ಮತ್ತು ಐಟಿ, ಇಡಿ, ಸಿಬಿಐ ಬೆದರಿಕೆಗಳ ಮೂಲಕ ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳ ಮಾಡುತ್ತಿದೆ ಎಂದು ಆರೋಪಿಸಿದರು.

ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ಯಡಿಯೂರಪ್ಪ ಅವರು ವಿಧಾನಸಭೆ ಸ್ಪೀಕರ್‌ನಿಂದ ಒಪ್ಪಿಗೆ ಪಡೆಯದೆ ಅಥವಾ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಪರಿಗಣಿಸದೆ ಶಿವಕುಮಾರ್ ಅವರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದಾರೆ, ಈ ಮೂಲಕ ಕಾನೂನನ್ನು ಪಾಲನೆ ಮಾಡಿಲ್ಲ. ಯಡಿಯೂರಪ್ಪ ಅವರು ಮುಖ್ಯ ಕಾರ್ಯದರ್ಶಿಗೆ ಮೌಖಿಕವಾಗಿ ಸೂಚನೆ ನೀಡಿದ್ದರು, ಅದರ ಆಧಾರದ ಮೇಲೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ. ಇದು ಕಾನೂನುಬಾಹಿರ ಎಂದು ಹೇಳಿದರು.

ನವೆಂಬರ್ 29 ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ''ನ್ಯಾಯಾಲಯದ ತೀರ್ಪಿನಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ಬಿಜೆಪಿ ಸರ್ಕಾರ ಮಾಡಿರುವ ತಪ್ಪನ್ನು ಮುಂದುವರಿಸಲು ನಾವು ಸಿದ್ಧರಿಲ್ಲ, ಹೀಗಾಗಿ ಪ್ರಕರಣವನ್ನು ಸಿಬಿಐನಿಂದ ಹಿಂಪಡೆಯಲು ಕಾನೂನು ಚೌಕಟ್ಟಿನಲ್ಲಿ ನಿರ್ಧಾರ ಕೈಗೊಂಡೆವು. ''ಯಾವುದೇ ಪ್ರಕರಣವನ್ನು ತನಿಖೆಗೆ ವಹಿಸುವಾಗ ಸ್ಪೀಕರ್ ಅನುಮತಿ ಪಡೆಯಬೇಕು, ಆದರೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಎಲ್ಲ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತರುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com