ಹಾಸನ: ಬೆಳ್ಳಂಬೆಳಗ್ಗೆ ಸಿನಿಮೀಯ ರೀತಿ ಕಿಡ್ನಾಪ್; ಮದುವೆಗೆ ಒಪ್ಪದ ಶಾಲಾ ಶಿಕ್ಷಕಿ ಅಪಹರಣ!

ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ದುರುಳರು ಶಾಲಾ ಶಿಕ್ಷಕಿಯನ್ನೇ ಅಪಹರಿಸಿರುವ ಘಟನೆ ಹಾಸನ ಜಿಲ್ಲೆಯ ಬಿಟ್ಟಗೌಡನಹಳ್ಳಿಯ ಬಳಿ ಇಂದು ಬೆಳಗ್ಗೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಾಸನ: ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ದುರುಳರು ಶಾಲಾ ಶಿಕ್ಷಕಿಯನ್ನೇ ಅಪಹರಿಸಿರುವ ಘಟನೆ ಹಾಸನ ಜಿಲ್ಲೆಯ ಬಿಟ್ಟಗೌಡನಹಳ್ಳಿಯ ಬಳಿ ಇಂದು ಬೆಳಗ್ಗೆ ನಡೆದಿದೆ.

ಅರ್ಪಿತಾ, ಅಪಹರಣಕ್ಕೊಳಗಾದ ಶಿಕ್ಷಕಿ. ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಕೆಲಸ ಮಾಡುತ್ತಿದ್ದ ಅರ್ಪಿತಾ ಅವರನ್ನು ಶಾಲೆ ಮುಂಭಾಗದಿಂದಲೇ ಅಪಹರಿಸಲಾಗಿದೆ. ಶಿಕ್ಷಕಿ ಅರ್ಪಿತಾ ಗುರುವಾರ ಬೆಳಿಗ್ಗೆ ಶಾಲೆಗೆ ಹೊರಟಿದ್ದಾಗ, ಆಕೆಯ ಸಂಬಂಧಿ ರಾಮು ಎಂಬಾತ ಅಪಹರಣ ಮಾಡಿದ್ದಾನೆ ಎಂದು ಶಿಕ್ಷಕಿಯ ಪೋಷಕರು ಆರೋಪಿಸಿದ್ದಾರೆ.

15 ದಿನಗಳ ಹಿಂದೆ ರಾಮು ಮತ್ತು ಪೋಷಕರು ಮದುವೆ ಪ್ರಸ್ತಾಪದೊಂದಿಗೆ ಶಿಕ್ಷಕಿ ಮನೆಗೆ ಬಂದಿದ್ದರು. ಈ ವೇಳೆ ಮದುವೆಗೆ ಶಿಕ್ಷಕಿ ಅರ್ಪಿತಾ ಹಾಗೂ ಕುಟುಂಬದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಶಿಕ್ಷಕಿ ಮದುವೆಗೆ ಒಪ್ಪಿಲ್ಲವೆಂದು ಆಕೆಯನ್ನು ಅಪಹರಣ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಬೆಳಿಗ್ಗೆಯೇ ಘಟನೆ ನಡೆದಿದ್ದು, ಜನರಲ್ಲಿ ಆತಂಕ ಉಂಟಾಗಿದೆ. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ. ತಂಡಗಳನ್ನು ರಚಿಸಿದ್ದು, ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com