ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಮಸೀದಿಗೆ ಮಂಗಳಾರತಿ: ಐವರ ಬಂಧನ

ಹಿಂದೂ ಮಹಾಮಂಡಳಿಯ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಜಾಮೀಯ ಮಸೀದಿ ಬಾಗಿಲಿಗೆ ಆರತಿ ಬೆಳಗಿ, ಹಿಂದೂ ದೇವರ ಹೆಸರಲ್ಲಿ ಘೋಷಣೆ ಕೂಗಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಗಂಗಾವತಿ ನಗರ ಪೊಲೀಸ್‌ ಠಾಣೆಯಲ್ಲಿ ಐದು ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗಂಗಾವತಿ (ಕೊಪ್ಪಳ ಜಿಲ್ಲೆ): ಹಿಂದೂ ಮಹಾಮಂಡಳಿಯ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಜಾಮೀಯ ಮಸೀದಿ ಬಾಗಿಲಿಗೆ ಆರತಿ ಬೆಳಗಿ, ಹಿಂದೂ ದೇವರ ಹೆಸರಲ್ಲಿ ಘೋಷಣೆ ಕೂಗಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಗಂಗಾವತಿ ನಗರ ಪೊಲೀಸ್‌ ಠಾಣೆಯಲ್ಲಿ ಐದು ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಯಮನೂರ ರಾಠೋಡ, ರೌಡಿಶೀಟರ್‌ಗಳಾದ ಶ್ರೀಕಾಂತ ಹೊಸಕೇರಿ, ಕುಮಾರ ಹೂಗಾರ, ಚೆನ್ನಬಸವ ಹೂಗಾರ ಹಾಗೂ ಸಂಗಮೇಶ ಅಯೋಧ್ಯ ವಿರುದ್ಧ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ.

ಸೆ. 28ರಂದು ಗಣಪತಿ ವಿಸರ್ಜನೆ ಮೆರವಣಿಗೆ ಜಾಮೀಯ ಮಸೀದಿ ಬಳಿ ಬರುತ್ತಿದ್ದಂತೆಯೇ ಮಸೀದಿ ಬಾಗಿಲಿಗೆ ಆರತಿ ಬೆಳಗಿದ್ದಾರೆ. ಗಲಭೆ ಮಾಡುವ ಉದ್ದೇಶದಿಂದ ಜೈಶ್ರೀರಾಮ್, ಭಾರತ ಮಾತಾಕೀ ಜೈ, ಗವಿ ಗಂಗಾಧರೇಶ್ವರ ಮಹಾರಾಜ ಕೀ ಜೈ ಎನ್ನುವ ಘೋಷಣೆಗಳನ್ನು ಕೂಗಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಂಗಳಾರತಿ ಮಾಡುವ ವಿಡಿಯೊವನ್ನು ಯಮನೂರ ರಾಠೋಡ ಎಂಬುವವರು ತಮ್ಮ ಫೇಸ್‌ಬುಕ್‌ ರೀಲ್ಸ್‌ನಲ್ಲಿ ಹಂಚಿಕೊಂಡು ‘ಧರ್ಮೋ ರಕ್ಷತಿ ರಕ್ಷತಃ, ಮೂಲ ಗಂಗಾಧರೇಶ್ವರ ಪುರಾತನ ದೇವಾಲಯಕ್ಕೆ ಮಂಗಳಾರತಿ ಎಂದು ಬರೆದುಕೊಂಡಿದ್ದಾರೆ. ಇದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ.

ಮಸೀದಿ ಬಳಿ ಮಂಗಳಾರತಿ ಮಾಡಲಾಗಿದ್ದು, ಪಟಾಕಿಗಳನ್ನು ಸಿಡಿಸಲಾಗಿದೆ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಪರಿಣಾಮ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ನಂತರ ಗಣೇಶ ವಿಸರ್ಜನೆ ಮೆರವಣಿಗೆಯನ್ನು ನಿಲ್ಲಿಸಲಾಯಿತು. ಕೆಲವರು ಮಸೀದಿಗೆ ಮಂಗಳಾರತಿ ಮಾಡಿದ್ದರೆ, ಕುಂಕುಮವನ್ನು ಎರಚಿದ್ದಾರೆಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೊಪ್ಪಳ ಪೊಲೀಸರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಯಾವುದನ್ನು ಪೋಸ್ಟ್ ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದರ ಕುರಿತು ಸೂಚನೆಗಳ ನೀಡಲು ಚಿಂತನೆ ನಡೆಸುತ್ತಿದ್ದಾರೆ. ನಿರ್ದೇಶನಗಳು ಇನ್ನೆರಡು ದಿನಗಳಲ್ಲಿ ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com