ಬೆಂಗಳೂರು: ರೂಮ್ ನೀಡಲು ನಿರಾಕರಿಸಿದ ಮಹಿಳಾ ಹೋಟೆಲ್ ಉದ್ಯಮಿಯ ಅಪಹರಣ!

ರೂಂ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ 42 ವರ್ಷದ ಮಹಿಳಾ ಹೋಟೆಲ್ ಉದ್ಯಮಿಯೊಬ್ಬರನ್ನು ಮೂವರು ಮಹಿಳೆಯರು ಸೇರಿದಂತೆ ಐವರ ತಂಡ ಅಪಹರಿಸಿದ ಘಟನೆ ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರೂಂ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ 42 ವರ್ಷದ ಮಹಿಳಾ ಹೋಟೆಲ್ ಉದ್ಯಮಿಯೊಬ್ಬರನ್ನು ಮೂವರು ಮಹಿಳೆಯರು ಸೇರಿದಂತೆ ಐವರ ತಂಡ ಅಪಹರಿಸಿದ ಘಟನೆ ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಂಕಜಾ ಅಪಹರಣಕ್ಕೊಳಗಾದ ಮಹಿಳೆಯಾಗಿದ್ದಾರೆ. ಪಂಕಜಾ ಅವರು ಕಳೆದ ನಾಲ್ಕು ವರ್ಷಗಳಿಂದ ಎಂಇಎಸ್ ರಿಂಗ್ ರಸ್ತೆಯಲ್ಲಿ ಡಿಎಂ ರೆಸಿಡೆನ್ಸಿ ಲಾಡ್ಜ್ ನಡೆಸುತ್ತಿದ್ದು, ತಮ್ಮ ಪತಿ ವಿಜಯ್ ಅವರೊಂದಿಗೆ ಅದೇ ಲಾಡ್ಜ್‌ನಲ್ಲಿ ವಾಸವಿದ್ದರು. ಘಟನೆ ವೇಳೆ ವಿಜಯ್ ಅವರು ಸ್ಥಳದಲ್ಲಿರಲಿಲ್ಲ ಎಂದು ತಿಳಿದುಬಂದಿದೆ.

ಭಾನುವಾರ ಮಧ್ಯಾಹ್ನ ಮೂವರು ಮಹಿಳೆಯರು ಸೇರಿದಂತೆ ಐವರ ತಂಡ ರೂಮ್ ಬುಕ್ ಮಾಡಲು ಲಾಡ್ಜ್'ಗೆ ಬಂದಿದ್ದಾರೆ. ಈ ವೇಳೆ ಪಂಕಜಾ ಅವರು ಸ್ಥಳೀಯ ನಿವಾಸಿಗಳಿಗೆ ಕೊಠಡಿಗಳನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಅಲ್ಲದೆ, ಫ್ಯಾರಿಮಾ, ಅಸ್ಮಾ ಮತ್ತು ನಜ್ಮಾ ಎಂಬ ಮೂವರು ಮಹಿಳೆಯರು ಪಂಕಜಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಅಲ್ಲದೆ, ಮೂವರು ಮಹಿಳೆಯರು ಪಂಕಜಾ ಅವರನ್ನು ಬಲವಂತವಾಗಿ ಆಟೋ ಹತ್ತಿಸಿಕೊಂಡು, ಅಪಹರಣ ನಡೆಸಿದ್ದಾರೆ. ಮಾರ್ಗಮಧ್ಯೆ ಜಾಲಹಳ್ಳಿ ಸಂಚಾರಿ ಪೊಲೀಸರು ಅನುಮಾನಗೊಂಡು ಆಟೋವನ್ನು ನಿಲ್ಲಿಸಿದ್ದಾರೆ. ಈ ವೇಳೆ ಪಂಕಜಾ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮಹಿಳೆಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ತನಿಖೆ ವೇಳೆ ಆರೋಪಿಗಳು ತಾವು ಅಪಹರಣ ಮಾಡಿಲ್ಲ. ರೂಮ್ ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತಿತ್ತು ಎಂದು ಹೇಳಿದ್ದಾರೆ.

ಈ ಸಂಬಂಧ ಜಾಲಹಳ್ಳಿ ಪೊಲೀಸರು ಅಪಹರಣ ಹಾಗೂ ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದು, ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಉಳಿದ ಆರೋಪಿಗಳನ್ನು ಸಾದಿಕ್ ಪಾಷಾ ಹಾಗೂ ಜಯರಾಮ್ ಎಂದು ಗುರ್ತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com