ಸಾರ್ವಜನಿಕ ಶೌಚಾಲಯ ನಿರ್ವಹಣೆ ಕುರಿತ ಅನುಸರಣೆ ವರದಿ ಸಲ್ಲಿಸದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 5 ಲಕ್ಷ ರೂ. ದಂಡ!

ಬೆಂಗಳೂರಿನಲ್ಲಿನ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ಕೈಗೊಂಡ ಕ್ರಮಗಳ ಅನುಸರಣೆ ವರದಿಯನ್ನು ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ಬಿಬಿಎಂಪಿ ಕಚೇರಿ(ಸಂಗ್ರಹ ಚಿತ್ರ)
ಬಿಬಿಎಂಪಿ ಕಚೇರಿ(ಸಂಗ್ರಹ ಚಿತ್ರ)

ಬೆಂಗಳೂರು: ಬೆಂಗಳೂರಿನಲ್ಲಿನ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ಕೈಗೊಂಡ ಕ್ರಮಗಳ ಅನುಸರಣೆ ವರದಿಯನ್ನು ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ವಿಭಾಗೀಯ ಪೀಠ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರು ನವೆಂಬರ್ 2ರಂದು ನಡೆಯಲಿರುವ ವಿಚಾರಣೆಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಆದೇಶಿಸಿದೆ. 

ನಗರ ಮೂಲದ ಎನ್‌ಜಿಒ ಲೆಟ್ಜ್‌ಕಿಟ್ ಫೌಂಡೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಹಿಂದಿನ ವಿಚಾರಣೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು. ನಗರದಲ್ಲಿನ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳ ಸ್ಥಿತಿಗತಿ ಕುರಿತು ಮೂರು ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಿತ್ತು. ಆದರೆ ಇಂದು ಅಫಿಡವಿಟ್ ಸಲ್ಲಿಸಲು ಮತ್ತೆ ಹೆಚ್ಚಿನ ಕಾಲಾವಕಾಶ ಕೋರಿತ್ತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪುತ್ತಿಗೆ ರಮೇಶ್ ಅವರು, ಬೆಂಗಳೂರು ನಾಗರಿಕರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವರದಿ ಸಲ್ಲಿಸಲು ಅಧಿಕಾರಿಗಳು ವಿಫಲವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ದಂಡ ವಿಧಿಸಿದೆ.

ಆಗಸ್ಟ್ 8ರಂದು ಪ್ರಕರಣದ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ಬಿಬಿಎಂಪಿಗೆ ಮೂರು ವಾರಗಳ ಕಾಲಾವಕಾಶ ನೀಡಿದಾಗಲೂ ಸಹ, ಅದನ್ನು ಪಾಲಿಸದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿಗೆ ಎಚ್ಚರಿಕೆ ನೀಡಿತ್ತು. ಬಿಬಿಎಂಪಿ ಆಗಸ್ಟ್ 6ರಂದು ಸಲ್ಲಿಸಿದ ವರದಿಯನ್ನು ನ್ಯಾಯಾಲಯವು 'ಅಪೂರ್ಣ ಮತ್ತು ವಿವರಗಳ ಕೊರತೆ' ಎಂದು ಸ್ವೀಕರಿಸಲು ನಿರಾಕರಿಸಿತು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಸಾರ್ವಜನಿಕ ಶೌಚಾಲಯಗಳ ಕೊರತೆಗಳು ಮತ್ತು ಅವುಗಳನ್ನು ಸುಧಾರಿಸಲು ಬಿಬಿಎಂಪಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಮಗ್ರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. 2020ರಲ್ಲಿ ಸಲ್ಲಿಸಲಾಗಿದ್ದ PIL ಸಂಬಂಧ ನ್ಯಾಯಾಲಯವು ಇಲ್ಲಿಯವರೆಗೆ ಅಧಿಕಾರಿಗಳಿಗೆ ಸತತ ನಿರ್ದೇಶನಗಳನ್ನು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com