

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಮಧ್ಯಮ ವರ್ಗದವರ ಬದುಕು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಟೀಕಿಸಿದ್ದಾರೆ.
ಅಕ್ಟೋಬರ್ 1 ರಂದು ರಾಜ್ಯ ಸರ್ಕಾರವು ಮಾರ್ಗದರ್ಶಿ ಮೌಲ್ಯವನ್ನು ಹೆಚ್ಚಿಸಿದ ನಂತರ ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ವೆಚ್ಚಗಳು ಶೇಕಡಾ 10ರಿಂದ 20ರಷ್ಟು ಹೆಚ್ಚಾಗಿವೆ, ಬೆಂಗಳೂರು ಹೊರವಲಯದಲ್ಲಿ ಶುಲ್ಕ ಮತ್ತಷ್ಟು ಹೆಚ್ಚಾಗಿದೆ.
ಬೆಂಗಳೂರು ನಗರದಲ್ಲಿ 8 ಅಧಿಕ ಸಂಚಾರ ದಟ್ಟಣೆ ಕೇಂದ್ರಗಳಲ್ಲಿ ಖಾಸಗಿ ವಾಹನಗಳ ಮೇಲೆ ದಟ್ಟಣೆ ತೆರಿಗೆ ವಿಧಿಸಲು ರಾಜ್ಯ ಸರ್ಕಾರವು ಪರಿಗಣಿಸುತ್ತಿದ್ದು, ಮತ್ತೊಂದೆಡೆ ಕಾರ್‌ಪೂಲಿಂಗ್ ನ್ನು ನಿಷೇಧಿಸಲು ಪರಿಗಣಿಸುತ್ತಿದೆ. ಇವುಗಳಿಂದ ನಗರದ ಮಧ್ಯಮ ವರ್ಗದ ಜನರಿಗೆ ಬದುಕು ಕಷ್ಟವಾಗುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿ ಭಾಗ್ಯಗಳನ್ನು ಈಡೇರಿಸಲು ಕಷ್ಟಪಟ್ಟು ದುಡಿದು ಜೀವನ ಸಾಗಿಸುವ ಮಧ್ಯಮ ವರ್ಗದವರಿಂದ ಪ್ರತಿ ಪೈಸೆಯನ್ನು ಕಿತ್ತುಕೊಳ್ಳಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದಂತೆ ತೋರುತ್ತಿದೆ ಎಂದು ಸಂಸದರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರವಾಗಿ ವಾಹನಗಳ ಮೇಲೆ ‘ದಟ್ಟಣೆ ಶುಲ್ಕ’ ವಿಧಿಸುವ ಕಲ್ಪನೆಯನ್ನು ಮೊಬಿಲಿಟಿ ತಜ್ಞರು ಇತ್ತೀಚೆಗೆ ಸರ್ಕಾರದ ಮುಂದಿಟ್ಟಿದ್ದಾರೆ. ಸಾರ್ವಜನಿಕರ ಮೇಲೆ ಹೇರುವ ಶುಲ್ಕವನ್ನು ಸಾರ್ವಜನಿಕ ಸಾರಿಗೆಯನ್ನು ಒದಗಿಸಲು ಮತ್ತು ಸುಧಾರಿಸಲು ಬಳಸಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನು ರಾಜ್ಯ ಸರ್ಕಾರ ಜಾರಿ ತರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.