ಶ್ರವಣದೋಷವುಳ್ಳ ವ್ಯಕ್ತಿಯ ಮೇಲೆ ಹಲ್ಲೆ, ದರೋಡೆ: ಆಟೋ ಚಾಲಕನಿಗಾಗಿ ಪೊಲೀಸರ ಹುಡುಕಾಟ

ಆ್ಯಪ್ ಆಧಾರಿತ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಶ್ರವಣದೋಷವುಳ್ಳ ವ್ಯಕ್ತಿಯ ಮೇಲೆ ಆಟೋ ಚಾಲಕ ಅಮಾನುಷವಾಗಿ ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆಯೊಂದು ನಗರದಲ್ಲಿ ವರದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆ್ಯಪ್ ಆಧಾರಿತ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಶ್ರವಣದೋಷವುಳ್ಳ ವ್ಯಕ್ತಿಯ ಮೇಲೆ ಆಟೋ ಚಾಲಕ ಅಮಾನುಷವಾಗಿ ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆಯೊಂದು ನಗರದಲ್ಲಿ ವರದಿಯಾಗಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಜಿತೇಂದ್ರ ಬಿ ಶಾ ಎಂದು ಗುರ್ತಿಸಲಾಗಿದೆ. ಆಟೋ ಚಾಲಕನ ಹಲ್ಲೆಯಿಂದಾಗಿ ಜಿತೇಂದ್ರ ಅವರು ಆಘಾತಕ್ಕೊಳಗಾಗಿದ್ದು, ಪಾರ್ಶ್ವವಾಯು ಹಾಗೂ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಅಲ್ಲದೆ, ಬೆನ್ನಿನ ಮೂಳೆ ಹಾಗೂ ಪಕ್ಕೆಲುಬುಗಳು ಮುರಿದಿರುವುದಾಗಿ ತಿಳಿದುಬಂದಿದೆ.

ಸಂತ್ರಸ್ತ ವಕ್ತಿ ಆನ್‌ಲೈನ್ ಬಸ್ ಟಿಕೆಟಿಂಗ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಗುರುವಾರ ಬೆಳಿಗ್ಗೆ 9.30ರ ಸುಮಾರಿಗೆ ಆಟೋರಿಕ್ಷಾವನ್ನು ಮೆಜೆಸ್ಟಿಕ್‌ನಿಂದ 2 ನೇ ಮೇನ್, ಗೊರಗುಂಟೆಪಾಳ್ಯದ ವಸತಿ ಅಪಾರ್ಟ್‌ಮೆಂಟ್ ಸಮುಚ್ಚಯಕ್ಕೆ ಬುಕ್ ಮಾಡಿದ್ದಾರೆ.

ಜಿತೇಂದ್ರ ಅವರು ಆಟೋ ಹತ್ತಿದ ಬಳಿಕ ಸುಬ್ರಹ್ಮಣ್ಯನಗರ ಪೊಲೀಸ್‌ ವ್ಯಾಪ್ತಿಯ ಯಶವಂತಪುರದ ಮೆಟ್ರೋ ಕ್ಯಾಶ್‌ ಅಂಡ್‌ ಕ್ಯಾರಿ ಬಳಿ ಆಟೋಗೆ ಗ್ಯಾಸ್ ಬಳಿ ತೆರಳಿದ ಆಟೋ ಚಾಲಕ, ಗ್ಯಾಸ್ ತುಂಬಿಸಿ ಜಿತೇಂದ್ರ ಅವರ ಬಳಿ ಹಣ ಕೇಳಿದ್ದಾನೆ. ಈ ವೇಳೆ ಜಿತೇಂದ್ರ ಅವರು ಪಾಕೆಟ್ ನ್ನು ಹೊರತೆಗೆದಾಗ ಪಾಕೆಟ್ ನಲ್ಲಿ ಹೆಚ್ಚಿನ ಹಣ ಇರುವುದನ್ನು ನೋಡಿದ್ದಾನೆ. ಕೆಲ ನಿಮಿಷಗಳ ಬಳಿಕ ಜಿತೇಂದ್ರ ಅವರ ಬಳಿಯಿದ್ದ ಪಾಕೆಟ್, ಮೊಬೈಲ್ ಫೋನ್ ಹಾಗೂ ಶ್ರವಣ ಸಾಧನವನ್ನು ಕಸಿದುಕೊಂಡಿದ್ದಾನೆ. ನಂತರ ರಿಕ್ಷಾವನ್ನು ಒರಾಯನ್ ಮಾಲ್'ಗೆ ಹೋಗುವ ರಸ್ತೆಯ ಕಡೆಗೆ ತಿರುಗಿಸಿ, ವಾಹನ ಚಲಿಸುತ್ತಿರುವಾಗಲೇ ಜಿತೇಂದ್ರ ಅವರನ್ನು ಹೊರಗೆ ತಳ್ಳಿದ್ದಾನೆ.

ಚಲಿಸುತ್ತಿದ್ದ ಟೋರಿಕ್ಷಾದಿಂದ ಕೆಳಗೆ ಬಿದ್ದ ಪರಿಣಾಮ ಜಿತೇಂದ್ರ ಅವರಿಗೆ ತೀವ್ರತರ ಗಾಯಗಳಾಗಿವೆ. ದೇಹದ ಮೇಲೆ ಸಾಕಷ್ಟು ಗಾಯಗಳಿದ್ದು, ಥಳಿಸಿರುವುದರಿಂದ ಆಗಿದೆಯೇ ಅಥವಾ ಆಟೋದಿಂದ ಹೊರಗೆ ತಳ್ಳಿದ ನಂತರ ಗಾಯಗಳಾಗಿವೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಇದೀಗ ಜಿತೇಂದ್ರ ಅವರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಹೇಳಿಕೆ ದಾಖಲು ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಜಿತೇಂದ್ರ ಅವರನ್ನು ಕಂ ದಾರಿಹೋಕರು ಕೂಡಲೇ 108 ಆ್ಯಂಬುಲೆನ್ಸ್'ಗೆ ಕರೆ ಮಾಡಿದ್ದಾರೆ. ನಂತರ ಯಶವಂತಪುರದ ಪೀಪಲ್ ಟ್ರೀ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಆಸ್ಪತ್ರೆಯ ಸಿಬ್ಬಂದಿ ಆರ್‌ಎಂಸಿ ಯಾರ್ಡ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ, ನಂತರ ಪ್ರಕರಣ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.

ಇದೀಗ ಚಾಲಕನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಗುರುವಾರ ಸಂಜೆ ಜಿತೇಂದ್ರ ಅವರಿಗೆ ಸ್ವಲ್ಪ ಮಟ್ಟಿಗೆ ಪ್ರಜ್ಞೆ ಬಂದಿತ್ತು. ಈ ವೇಳೆ ತಮ್ಮ ಗುರುತನ್ನು ತಿಳಿಸಿದ್ದರು ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.

ಪೀಪಲ್ ಟ್ರೀ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಡಾ.ಎಸ್.ಜೋತಿ ನೀರಜಾ ಮಾತನಾಡಿ, ವ್ಯಕ್ತ ಮಿದುಳು ಹಾಗೂ ಬೆನ್ನುಮೂಳೆಗೆ ಗಂಭೀರ ಗಾಯಗಳಾಗಿವೆ. ಪಕ್ಕೆಲುಬುಗಳ ಎರಡೂ ಬದಿಗಳು ಮುರಿತವಾಗಿವೆ. ಆದರೆ, ಆರೋಗ್ಯ ಸ್ಥಿರವಾಗಿದೆ. ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com