ಜಾನುವಾರುಗಳಿಗೂ ತಟ್ಟಿದ ಬರದ ಬಿಸಿ: ದುಪ್ಪಟ್ಟು ಬೆಲೆ ತೆತ್ತು ಆಂಧ್ರಪ್ರದೇಶದಿಂದ ಮೇವು ಖರೀದಿಸುತ್ತಿರುವ ರೈತರು!

ರಾಜ್ಯದಲ್ಲಿ ಎದುರಾಗಿರುವ ಬರದ ಬಿಸಿ ಕೇವಲ ಮನುಷ್ಯರಿಗಷ್ಟೇ ಅಲ್ಲದೆ, ಜಾನುವಾರುಗಳ ಮೇಲೂ ಪರಿಣಾಮ ಬೀರತೊಡಗಿದೆ. ಬರದ ಪರಿಣಾಮ ತಾವು ಸಾಕಿರುವ ಹಸು, ಕುರಿ ಹಾಗೂ ಮೇಕೆಗಳ ರಕ್ಷಣೆಗೆ ರೈತರು ದುಪ್ಪಟ್ಟ ಹಣ ನೀಡಿ ನೆರೆಯ ಆಂಧ್ರಪ್ರದೇಶ ರಾಜ್ಯದಿಂದ ಮೇವು ಖರೀದಿ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಿತ್ರದುರ್ಗ: ರಾಜ್ಯದಲ್ಲಿ ಎದುರಾಗಿರುವ ಬರದ ಬಿಸಿ ಕೇವಲ ಮನುಷ್ಯರಿಗಷ್ಟೇ ಅಲ್ಲದೆ, ಜಾನುವಾರುಗಳ ಮೇಲೂ ಪರಿಣಾಮ ಬೀರತೊಡಗಿದೆ. ಬರದ ಪರಿಣಾಮ ತಾವು ಸಾಕಿರುವ ಹಸು, ಕುರಿ ಹಾಗೂ ಮೇಕೆಗಳ ರಕ್ಷಣೆಗೆ ರೈತರು ದುಪ್ಪಟ್ಟ ಹಣ ನೀಡಿ ನೆರೆಯ ಆಂಧ್ರಪ್ರದೇಶ ರಾಜ್ಯದಿಂದ ಮೇವು ಖರೀದಿ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು ಹಾಗೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಭಾಗದ ರೈತರು ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ಮೇವು ಖರೀದಿಸುತ್ತಿದ್ದಾರೆಂದು ತಿಳಿದುಬಂದಿದೆ.

ಈಗಾಗಲೇ ರಂಗಯ್ಯನದುರ್ಗ ಅಣೆಕಟ್ಟು ತುಂಬಿ ಹರಿಯುತ್ತಿದ್ದು, ಪೆರ್ಲಗುಡ್ಡದ ಗೊರ್ಲಮಾರೆ, ಬೋಡಿಕಟ್ಟೆಯಲ್ಲಿ ಸಾಕಷ್ಟು ನೀರಿದ್ದರೂ ಈ ನೀರು ಈ ಭಾಗದ ರೈತರಿಗೆ ಮಾತ್ರ ಉಪಯೋಗವಾಗುತ್ತಿಲ್ಲ. ಆಂಧ್ರಪ್ರದೇಶಕ್ಕೆ ನೀರು ಹರಿದು ಹೋಗುತ್ತಿದ್ದು, ಅಲ್ಲಿನ ರೈತರು ಈ ನೀರಿನ ಉಪಯೋಗ ಪಡೆಯುತ್ತಿದ್ದಾರೆ. ಈ ನೀರಿನಿಂದ  ಭತ್ತ ಹಾಗೂ ಶೇಂಗಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ, ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು ತಾಲೂಕಿನಲ್ಲಿ ಸಾಮಾನ್ಯ ವರ್ಷದಲ್ಲಿ ಯಥೇಚ್ಛವಾಗಿ ಮೇವು ಬೆಳೆಯುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಭಾಗದ ರೈತರು ಆಂಧ್ರಪ್ರದೇಶದಿಂದ ಮೇವು ಖರೀದಿಸಲು ದೊಡ್ಡ ಮೊತ್ತದ ಹಣ ನೀಡುತ್ತಿದ್ದಾರೆ. ಟ್ರ್ಯಾಕ್ಟರ್ ಗೆ 3ರಿಂದ 4 ಸಾವಿರ ರೂ.ಗೆ ಸಿಗುತ್ತಿದ್ದ ಭತ್ತದ ಹುಲ್ಲು  ಇದೀಗ 5ರಿಂದ 6 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದಾರೆ, 10ರಿಂದ 12 ಸಾವಿರ ರೂ.ಗೆ ಮಾರಾಟವಾಗುತ್ತಿದ್ದ ಶೇಂಗಾ ಹೊಟ್ಟು ಈಗ 20-25 ಸಾವಿರ ರೂಗೆ ಮಾರಾಟ ಮಾಡುತ್ತಿದ್ದಾರೆ.

ಬಿ.ಜಿ.ಕೆರೆಯ ರೈತ ಚಿನ್ನ ಓಬಯ್ಯ ಎಂಬುವವರು ಮಾತನಾಡಿ, ಜಿಲ್ಲಾಡಳಿತ ರೈತರಿಗೆ ಮೇವಿನ ಕಿಟ್ ವಿತರಿಸಿ ಮೇವು ಬೆಳೆಯಲು ಅವಕಾಶ ನೀಡಬೇಕು. ಆದರೆ, ಮೇವು ಬೆಳೆಯಲು ಸಾಕಷ್ಟು ತೇವಾಂಶವಿರುವ ಭೂಮಿ ಬೇಕು. ಮೇವು ಬೆಳೆಯಲು ಮನ್ರೇಗಾ ನೌಕರರನ್ನು ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ದೊಡ್ಡಉಳ್ಳಾರ್ತಿ ಕರಿಯಣ್ಣ ಎಂಬುವವರು ಮಾತನಾಡಿ, ರಾಜ್ಯಕ್ಕೆ ಭೇಟಿ ನೀಡುತ್ತಿರುವ ಕೇಂದ್ರ ಸರ್ಕಾರದ ತಂಡ ಬರಗಾಲದ ಬಗ್ಗೆ ಪರಿಶೀಲನೆ ನಡೆಸಲು ಚಳ್ಳಕೆರೆ ಮತ್ತು ಮೊಳಕಾಲ್ಮೂರಿನಗೆ ಭೇಟಿ ನೀಡಬೇಕಿತ್ತು. ಪೋಷಣೆ ಮಾಡಲು ಸಾಧ್ಯವಾಗದೆ ಮಾಂಸ ತಿನ್ನುವವರಿಗೆ ಸಾಕಿ ಸಲಹಿದ್ದ 10 ಮೇಕೆಗಳನ್ನು ಮಾರಾಟ ಮಾಡಿದ್ದೇನೆಂದು ಕಣ್ಣೀರು ಹಾಕಿದ್ದಾರೆ.

ನಾಯಕನಹಟ್ಟಿಯ ತಿಪ್ಪೇಸ್ವಾಮಿ ಎಂಬುವವರು ಮಾತನಾಡಿ, ಮನ್ರೇಗಾ ಕೆಲಸದ ದಿನಗಳನ್ನು 150 ಕ್ಕೆ ಹೆಚ್ಚಿಸಿರುವುದು ಉತ್ತಮ ಕ್ರಮವಾಗಿದ್ದು, ನೌಕರರನ್ನು ಕೆರೆಗಳ ಹೂಳು ತೆಗೆಯಲು ಮತ್ತು ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸಲು ಬಳಸಬೇಕೆಂದು ಹೇಳಿದ್ದಾರೆ.

ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ ಮಾತನಾಡಿ, ಕುಡಿಯುವ ನೀರಿನ ಅಗತ್ಯತೆಗಳನ್ನು ಪರಿಹರಿಸಲು ಹಣಕಾಸಿನ ಕೊರತೆ ಇಲ್ಲ. ಜಾನುವಾರುಗಳನ್ನು ರಕ್ಷಿಸಲು ಗೋಶಾಲೆಗಳನ್ನು ಸ್ಥಾಪಿಸಲು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com