ಗೋಕರ್ಣ: ಹಿಂದೂ ಸಂಪ್ರದಾಯದಂತೆ ಪಿತೃ ಕಾರ್ಯ ನೆರವೇರಿಸಿದ ಮುಸ್ಲಿಂ ಕುಟುಂಬವೊಂದು ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.
ಧಾರವಾಡದ ಧನೇಶ್ವರಿ ನಗರದಲ್ಲಿ ನೆಲೆಸಿರುವ ಶಂಸಾದ್ ಕುಟುಂಬ ಗುರುವಾರ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕೋಟಿ ತೀರ್ಥದಲ್ಲಿ ಪಿತೃಪಕ್ಷದ ಪರ್ವಕಾಲದಲ್ಲಿ ಪಿತೃಕಾರ್ಯ ನೆರವೇರಿಸಿತ್ತು. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಶಂಸಾದ್ ಕುಟುಂಬವು ಮೊದಲಿನಿಂದಲೂ ಕುಂಡಲಿ, ಜಾತಕ, ಹಿಂದೂ ಸಂಪ್ರದಾಯದ ಮೇಲೆ ನಂಬಿಕೆ ಉಳ್ಳವರಾಗಿದ್ದಾರೆ. ಹೀಗಾಗಿ ಮೊದಲಿಂದಲೂ ಹಿಂದೂ ಸಂಪ್ರದಾಯಗಳನ್ನು ಚಾಚೂ ತಪ್ಪದೆ ಪಾಲನೆ ಮಾಡುತ್ತಾ ಬಂದಿದ್ದಾರೆ. ಇನ್ನು ಗದಗಿನ ವೀರನಾರಾಯಣ ದೇವಸ್ಥಾನದ ಹತ್ತಿರ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯದವರ ಜೊತೆಯಲ್ಲಿಯೇ ಈ ಕುಟುಂಬ ಹೆಚ್ಚು ಒಡನಾಟ ಇಟ್ಟುಕೊಂಡು ಬೆಳೆದುಬಂದಿದೆ.
ಶಂಸಾದ್‌ರ ತಮ್ಮನಿಗೆ ಮದುವೆ ಸಂಬಂಧವು ಸರಿಯಾಗಿ ಕೂಡಿ ಬರುತ್ತಿರಲಿಲ್ಲ, ಹೆಣ್ಣು ಸಿಕ್ಕಿಲ್ಲ ಎಂದು ಜ್ಯೋತಿಷಿಯ ಮೊರೆ ಹೋಗಿದ್ದರು. ಆಗ ಅವರು ಶಂಸಾದ್‌ರ ಅಜ್ಜ ಹುಸೇನ್ ಸಾಬ್ ಸತ್ತು ಹಲವು ವರ್ಷಗಳಾದರೂ ಅವರ ಆತ್ಮಕ್ಕೆ ಇನ್ನೂ ಶಾಂತಿ ಸಿಕ್ಕಿಲ್ಲ. ಹೀಗಾಗಿ ನಿಮ್ಮ ಕುಟುಂಬಕ್ಕೆ ಅದರ ಕಾಟ ಶುರುವಾಗಿದೆ. ನೀವು ಪಿತೃಪಿಂಡ ಕಾರ್ಯ ಮಾಡಿ ಎಂದು ಸಲಹೆ ನೀಡಿದ್ದಾರೆ.
ಅವರ ಸಲಹೆಯಂತೆ ತಮ್ಮನ ಮದುವೆ, ಮಾನಸಿಕ ಶಾಂತಿ ಹಾಗೂ ಉದ್ಯೋಗದಲ್ಲಿ ಏಳಿಗೆ ಸಿಗಲಿ ಎಂಬ ಉದ್ಧೇಶದಿಂದ ಕುಟುಂಬವು ಪಿತೃಕಾರ್ಯ ನೆರವೇರಿಸಿತ್ತು.
ಜ್ಯೋತಿಷಿ ತೋರಿದ ಮಾರ್ಗದರ್ಶನದಂತೆ ಗೋಕರ್ಣಕ್ಕೆ ಶಂಸಾದ್ ಕುಟುಂಬ, ಕ್ಷೇತ್ರ ಪುರೋಹಿತರಾದ ವೇದಬ್ರಹ್ಮ ನಾಗರಾಜ ಭಟ್ ಗ ರ್ಲಿಂಗ್ ಹಾಗೂ ವೇ. ಸುಬ್ರಹಣ್ಯ ಚಿತ್ರಿಗೆಮಠ ಇವರ ನೇತೃತ್ವದಲ್ಲಿ ಪಿತೃ ಕಾರ್ಯಗಳನ್ನು ನೆರವೇರಿಸಿದ್ದರು.
ಈ ಪೂಜೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ. ಬೆದರಿಕೆಗಳಿಗೆ ಹೆದರಿರುವ ಕುಟುಂಬವು ಇದೀಗ ತಮ್ಮ ಕುರಿತ ಯಾವುದೇ ಮಾಹಿತಿಗಳನ್ನು ಯಾರೊಂದಿಗು ಹಂಚಿಕೊಳ್ಳದಂತೆ ದೇಗುಲದ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದೆ.
ಇದನ್ನೂ ಓದಿ: 57 ಮುಸ್ಲಿಂ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರ!
ನಾವು ಸಾತ್ವಿಕ ಉದ್ದೇಶಗಳಿಗಾಗಿ ಆಚರಣೆಗಳನ್ನು ಮಾಡುತ್ತೇವೆ. ಎಲ್ಲಾ ಸಮುದಾಯಗಳು ಮತ್ತು ಧರ್ಮಗಳಿಗೆ ಸೇವೆಗಳನ್ನು ನೀಡುತ್ತೇವೆ. ದೇಗುಲದಲ್ಲಿ ಸಮಾನತೆ ಇರುವುದರಿಂದ ಯಾವುದೇ ತಾರತಮ್ಯವಿಲ್ಲದೆ ಸೇವೆಗಳನ್ನು ನೀಡುತ್ತೇವೆ. ದೇವಸ್ಥಾನದ ಒಳಗೆ ಎಲ್ಲರಿಗೂ ಅವಕಾಶ ನೀಡುತ್ತೇವೆ. ನಮಗೆ ಭಕ್ತರಲ್ಲಿ ಭೇದವಿಲ್ಲ. ಆದರೆ ಕೆಲವರು ರಾಜಕೀಯ ಮಾಡಲು ಯತ್ನಿಸುತ್ತಿದ್ದು, ಇದರಿಂದ ಕುಟುಂಬಕ್ಕೆ ನೋವಾಗಿದೆ ಎಂದು ವಿಧಿವಿಧಾನಗಳನ್ನು ನೆರವೇರಿಸಿದ ಪುರೋಹಿತರಲ್ಲಿ ಒಬ್ಬರಾದ ಸುಬ್ರಹ್ಮಣ್ಯ ಚಿತ್ರಗಿಮಠ ಅವರು ಹೇಳಿದ್ದಾರೆ.
ಈ ಕುಟುಂಬಕ್ಕೆ ಹಿಂದೂ ಧರ್ಮದ ಬಗ್ಗೆ ಸಾಕಷ್ಟು ತಿಳಿದಿದೆ. ಅವರು ಗಣಪತಿ ಸ್ತೋತ್ರವನ್ನು ಪಠಿಸುತ್ತಾರೆ ಮತ್ತು ದತ್ತಾತ್ರೇಯ ಉಪಾಸನೆಯನ್ನು ಮಾಡುತ್ತಾರೆ. ಗೋಕರ್ಣದಲ್ಲಿ ನಾವು ಟಿಪ್ಪು ಸುಲ್ತಾನನ ಕಾಲದಿಂದಲೂ ರಾಜರು ಮತ್ತು ಆಳುವ ಜನರ ಕಲ್ಯಾಣಕ್ಕಾಗಿ ಸಲಾಂ ಪೂಜೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
Advertisement