ಬರ ಪರಿಹಾರ: ರೈತರ ಬೆಳೆ ಸಾಲಗಳ ಪುನರ್ ರಚಿಸುವಂತೆ ಎಲ್ಲಾ ಬ್ಯಾಂಕ್ ಗಳಿಗೆ ಸರ್ಕಾರ ಸೂಚನೆ
ಬೆಂಗಳೂರು: ಬರಗಾಲದಿಂದ ರೈತರು ಅನುಭವಿಸುತ್ತಿರುವ ನಷ್ಟವನ್ನು ಗಮನದಲ್ಲಿಟ್ಟುಕೊಂಡು ರೈತರ ಸಾಲ ಪುನರ್ ರಚಿಸುವಂತೆ ಎಲ್ಲ ಬ್ಯಾಂಕ್‌ಗಳಿಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯ (ಎಸ್‌ಎಲ್‌ಬಿಸಿ) ವಿಶೇಷ ಸಭೆಯಲ್ಲಿ ಸರ್ಕಾರ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಕರ್ನಾಟಕದ ಎಸ್‌ಎಲ್‌ಬಿಸಿಯ ಉಸ್ತುವಾರಿ ಸಂಚಾಲಕ ಬಿ ಪಾರ್ಶ್ವನಾಥ್ ಅವರು ಮಾತನಾಡಿ, ರಾಜ್ಯದ ಎಲ್ಲಾ ಬ್ಯಾಂಕ್‌ಗಳ ಮುಖ್ಯಸ್ಥರು ಮತ್ತು ಪ್ರಮುಖ ಜಿಲ್ಲಾ ವ್ಯವಸ್ಥಾಪಕರಿಗೆ ಸುತ್ತೋಲೆಗಳನ್ನು ಹೊರಡಿಸಲಾಗಿದೆ.
ಬರ ಪೀಡಿತ ಪ್ರದೇಶಗಳ ರೈತರಿಗೆ ಬ್ಯಾಂಕ್‌ಗಳು ನೀಡುವ ವಿವಿಧ ಪರಿಹಾರ ಕ್ರಮಗಳ ಕುರಿತು ಚರ್ಚಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್ ಅವರು ಸಭೆಯನ್ನು ಕರೆದಿದ್ದರು.
ಸಭೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ಕುರಿತು ಚರ್ಚಿಸಲಾಯಿತು. ಆಯಾ ಇಲಾಖೆಗಳು ಸಲ್ಲಿಸಿದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ನಷ್ಟದ ವರದಿಗಳನ್ನು ಗಮನಿಸಲಾಯಿತು. ಅದರಂತೆ, ಅರ್ಹ ರೈತರ ಸಾಲವನ್ನು ಪುನರ್ ರಚಿಸಲು ರಾಜ್ಯದ ಎಲ್ಲಾ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ನಿಗದಿತ ವಾಣಿಜ್ಯ ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೆ ಬರ ಪೀಡಿತ ಪ್ರದೇಶಗಳಿಗೆ ಪರಿಹಾರ ಕ್ರಮಗಳ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಸ್ಟರ್ ನಿರ್ದೇಶನವನ್ನು ಅನುಸರಿಸಲು ಸಲಹೆ ನೀಡಲಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ