ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಹೌಹಾರಿದ ಅಧಿಕಾರಿಗಳು: ಬೆಡ್​​ ರೂಮ್ ಮಂಚದ ಕೆಳಗೆ 42 ಕೋಟಿ ರೂ. ಹಣ ಪತ್ತೆ!

ಬೆಂಗಳೂರು ನಗರದಲ್ಲಿ ಆದಾಯ ತೆರಿಗೆ (Income Tax) ಇಲಾಖೆ ಅಧಿಕಾರಿಗಳು ನಿನ್ನೆ ಗುರುವಾರದಿಂದ ದಾಳಿ ನಡೆಸಿ ಕಾರ್ಯಾಚರಣೆ ನಡೆಸುತ್ತಿದ್ದು ಕಂತೆ ಕಂತೆ ನೋಟು, ಅಪಾರ ಪ್ರಮಾಣದ ನಗ ನಾಣ್ಯಗಳು ಪತ್ತೆಯಾಗಿವೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಸಿಕ್ಕಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಆದಾಯ ತೆರಿಗೆ (Income Tax) ಇಲಾಖೆ ಅಧಿಕಾರಿಗಳು ನಿನ್ನೆ ಗುರುವಾರದಿಂದ ದಾಳಿ ನಡೆಸಿ ಕಾರ್ಯಾಚರಣೆ ನಡೆಸುತ್ತಿದ್ದು ಕಂತೆ ಕಂತೆ ನೋಟು, ಅಪಾರ ಪ್ರಮಾಣದ ನಗ ನಾಣ್ಯಗಳು ಪತ್ತೆಯಾಗಿವೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಸಿಕ್ಕಿದೆ.

ಏಕಕಾಲದಲ್ಲಿ ಆರ್​ಟಿ ನಗರದ ಎರಡು ಸ್ಥಳಗಳ ಮೇಲೆ ಐಟಿ ದಾಳಿ ನಡೆದಿದ್ದು, ಆತ್ಮಾನಂದ ಕಾಲೋನಿಯ ಫ್ಲಾಟ್ ಒಂದರ ಕೊಠಡಿಯಲ್ಲಿದ್ದ ಮಂಚದಡಿ ಕಂತೆ ಕಂತೆ ನೋಟುಗಳು ಕಂಡು ಅಧಿಕಾರಿಗಳು ಬೆಚ್ಚಿಬಿದ್ದರು. ಫ್ಲಾಟ್​ನಲ್ಲಿ ಬರೊಬ್ಬರಿ 23 ಬಾಕ್ಸ್​ಗಳಲ್ಲಿ 500 ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಕಾರಿನಲ್ಲಿ ಹಣ ಸಾಗಾಟ ಮಾಡಲು ತಯಾರಾಗಿತ್ತು ಎಂದು ತಿಳಿದುಬಂದಿದೆ. 

ಆತ್ಮಾನಂದ ಕಾಲೋನಿಯ ಫ್ಲಾಟ್​ನ ಕೊಠಡಿಯೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮಂಚದಡಿ ಪರಿಶೀಲನೆ ನಡೆಸಿದಾಗ ಕೋಟ್ಯಂತರ ರೂಪಾಯಿ ಪತ್ತೆಯಾಗಿದೆ. ಪತ್ತೆಯಾದ ಹಣದ ಒಟ್ಟಾರೆ ಮೊತ್ತ ಎಣಿಕೆ ಮಾಡಿದ ಐಟಿ ಅಧಿಕಾರಿಗಳು, ಬಳಿಕ ಮಾಜಿ ಕಾರ್ಪೋರೇಟರ್​ ಮನೆ ಬಾಗಿಲು ತಟ್ಟಿದ್ದಾರೆ.

ಗಣೇಶ ಬ್ಲಾಕ್​ನಲ್ಲಿರುವ ವಾರ್ಡ್ ನಂ 95ರ ಮಾಜಿ ಕಾರ್ಪೊರೇಟರ್ ಅಶ್ವತಮ್ಮ ಹಾಗೂ ಆರ್.ಅಂಬಿಕಾಪತಿ ದಂಪತಿಗಳ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ, ಫ್ಲಾಟ್​ನಲ್ಲಿ ಪತ್ತೆಯಾದ ಕೋಟ್ಯಂತರ ರೂಪಾಯಿ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 

40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಅಂಬಿಕಾಪತಿ: ಈ ಅಂಬಿಕಾಪತಿ ಕಳೆದ ಬಾರಿ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು. ರಾಜ್ಯದಲ್ಲಿ ನಡೆಯುವ ಕಾಮಗಾರಿಗೆ ಶೇಕಡಾ 40ರಷ್ಟು, ಬಿಬಿಎಂಪಿಯಲ್ಲಿ 50 ಪರ್ಸೆಂಟ್ ನೀಡಬೇಕು ಎಂದು ಹೇಳಿ ಕೆಲವು ರಾಜಕೀಯ ನಾಯಕರ ಮೇಲೆ ಗಂಭೀರ ಆರೋಪ ಮಾಡಿದ್ದರು. 

10ಕ್ಕೂ ಹೆಚ್ಚು ಕಡೆ ಐಟಿ ದಾಳಿ: ತೆರಿಗೆ ವಂಚನೆ ಸಂಬಂಧ ನಗರದ 10ಕ್ಕೂ ಹೆಚ್ಚು ಕಡೆಗಳಲ್ಲಿ ನಿನ್ನೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಮಲ್ಲೇಶ್ವರಂ, ಸದಾಶಿವನಗರ, ಡಾಲರ್ಸ್ ಕಾಲೋನಿ, ಮತ್ತಿಕೆರೆ, ಸರ್ಜಾಪುರ ರಸ್ತೆ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಚಿನ್ನದ ವ್ಯಾಪಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಕಾಫಿ ಬೋರ್ಡ್ ನಿರ್ದೇಶಕ ಚಂದ್ರಶೇಖರ್ ನಿವಾಸದ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರ್ ಎಂವಿ ಎಕ್ಸ್ ಟೆನ್ಶನ್ ನಲ್ಲಿರುವ ಚಂದ್ರಶೇಖರ್ ನಿವಾಸದಲ್ಲಿ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

ಬೆಚ್ಚಿಬಿದ್ದ ಅಧಿಕಾರಿಗಳು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಧ್ಯರಾತ್ರಿ ಬೆಂಗಳೂರಿನ ಆರ್​​. ಟಿ.ನಗರದ ಮಾಜಿ ಕಾರ್ಪೊರೇಟರ್​​​ ಅಶ್ವತ್ಥಮ್ಮ, ಪತಿ ಆರ್​.ಅಂಬಿಕಾಪತಿ ಮತ್ತು ​ಅಶ್ವತ್ಥಮ್ಮ ಅವರ ಬಾಮೈದ ಪ್ರದೀಪ್​​ ಫ್ಯ್ಲಾಟ್​​​​​​ ಮೇಲೆ ದಾಳಿ ಮಾಡಿದ್ದರು. ಪರಿಶೀಲನೆ ವೇಳೆ ಬೆಡ್​​ ರೂಮ್​ನ ಮಂಚದ ಕೆಳಗೆ 23 ಬಾಕ್ಸ್​​ನಲ್ಲಿ 500 ರೂಪಾಯಿ ಮುಖಬೆಲೆಯ 42 ಕೋಟಿ ರೂಪಾಯಿಗೂ ಅಧಿಕ ಕಂತೆ ಕಂತೆ ಹಣ ಪತ್ತೆಯಾಗಿದೆ. 

ಬೆಂಗಳೂರಿನಲ್ಲಿ ಬಿಲ್ಡರ್ಸ್​​​, ಚಿನ್ನದ ವ್ಯಾಪಾರಿಗಳು ಹಾಗೂ ಗುತ್ತಿಗೆದಾರರಿಂದ ಈ ಹಣ ಸಂಗ್ರಹಿಸಲಾಗಿದೆ. ಹೀಗೆ ಸಂಗ್ರಹಿಸಲಾದ ಹಣವನ್ನು ಬೆಂಗಳೂರಿನಿಂದ-ಚೆನ್ನೈಗೆ, ಚೆನ್ನೈಯಿಂದ-ಹೈದರಾಬಾದ್ ಗೆ ವಾರ್ಗವಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ತೆಲಂಗಾಣ ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಇಲ್ಲಿ ಹಣ ಸಂಗ್ರಹಿಸಿ ಅಲ್ಲಿಗೆ ಕಳುಹಿಸಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.

ಈ ಹಿಂದೆ ಅಕ್ಟೋಬರ್ 6ರಂದು ನಗರ 10ಕ್ಕೂ ಹೆಚ್ಚು ಕಡೆಗಳಲ್ಲಿ ಖಾಸಗಿ ಕಂಪನಿಗಳು, ಅವುಗಳ ಮಾಲೀಕರು ಹಾಗೂ ಚಿನ್ನದ ವ್ಯಾಪಾರಿಗಳ‌ ಮನೆಗಳ ಮೇಲೆ ಐಟಿ ಅಧಿಕಾರಿಗಳು ರೇಡ್ ಮಾಡಿ ದಾಖಲೆಗಳನ್ನು ಪರಿಶೀಲಿಸಿದ್ದರು. ತೆರಿಗೆ ವಂಚನೆ ಆರೋಪಡಿ ಮೊನ್ನೆಯಷ್ಟೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಬಿರಿಯಾನಿ ಸೆಂಟರ್​ಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು. ದಾಳಿ ವೇಳೆ ಬಿರಿಯಾನಿ ಸೆಂಟರ್​ಗಳ 30 ಯುಪಿಐ ವಿವಿಧ ಖಾತೆಗಳು, ಮಾಲೀಕರ ಮನೆಯಿಂದ 1.47 ಕೋಟಿ ರೂಪಾಯಿ ನಗದು ಸಿಕ್ಕಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com