ರೈಡ್ ರಾಜಕಾರಣ: ಪಂಚರಾಜ್ಯ ಚುನಾವಣೆಯಲ್ಲಿ ಸೋಲುವ ಭಯದಿಂದ ಬಿಜೆಪಿ ಐಟಿ-ಇಡಿ ದಾಳಿ ನಡೆಸುತ್ತಿದೆ- ಸಿದ್ದರಾಮಯ್ಯ

ಮುಂಬರುವ ಪಂಚರಾಜ್ಯಗಳ ಚುನಾವಣೆಯ ಸೋಲಿನ ಭಯ ಮತ್ತು ಶ್ರೀಮಂತ ಉದ್ಯಮಿ- ಗುತ್ತಿಗೆದಾರರನ್ನು ಬ್ಲಾಕ್ ಮೇಲ್ ಮಾಡುವ ದುರುದ್ದೇಶದ ಕಾರಣಕ್ಕಾಗಿಯೇ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಐಟಿ-ಇಡಿ ದಾಳಿಗಳನ್ನು ನಡೆಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಮುಂಬರುವ ಪಂಚರಾಜ್ಯಗಳ ಚುನಾವಣೆಯ ಸೋಲಿನ ಭಯ ಮತ್ತು ಶ್ರೀಮಂತ ಉದ್ಯಮಿ- ಗುತ್ತಿಗೆದಾರರನ್ನು ಬ್ಲಾಕ್ ಮೇಲ್ ಮಾಡುವ ದುರುದ್ದೇಶದ ಕಾರಣಕ್ಕಾಗಿಯೇ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಐಟಿ- ಇಡಿ ದಾಳಿಗಳನ್ನು ನಡೆಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸುತ್ತಿರುವ ಬಿಜೆಪಿ ನಾಯಕರನ್ನು ಗುರಿಯಾಗಿಸಿದ ಸಿಎಂ, ತನ್ನ ದುರುದ್ದೇಶ ಮತ್ತು ಭ್ರಷ್ಟಚಾರವನ್ನು ಮುಚ್ಚಿಕೊಳ್ಳುವುದಕ್ಕಾಗಿಯೇ ಕಾಂಗ್ರೆಸ್ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಐಟಿ ದಾಳಿಗಳಿಗೂ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಂಬಂಧ ಇಲ್ಲ. ಈ ಬಗ್ಗೆ ಯಾವುದಾದರೂ ಪುರಾವೆಗಳಿದ್ದರೆ, ಕಾನೂನು ಪ್ರಕಾರ ಕ್ರಮಕೈಗೊಳ್ಳಲು ಅವರು ಸ್ವತಂತ್ರರಿದ್ದಾರೆ. ತೆರಿಗೆ ವಂಚಕರ ವಿರುದ್ಧದ ಕ್ರಮಗಳನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ.

ಗುತ್ತಿಗೆದಾರರು ಖೊಟ್ಟಿ ಖರೀದಿ ರಸೀದಿಗಳು ಮತ್ತು ಉಪ ಗುತ್ತಿಗೆದಾರರಿಂದ ನಕಲಿ ಖರ್ಚು ವೆಚ್ಚದ ದಾಖಲೆಗಳ ಮೂಲಕ ಅದಾಯ ಕಡಿಮೆಗೊಳಿಸಿ ತೆರಿಗೆ ವಂಚನೆ ಮಾಡಿರುವುದು ದಾಳಿಯಲ್ಲಿ ಪತ್ತೆಯಾಗಿದೆ ಎಂದು ಐಟಿ ಇಲಾಖೆಯೇ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಯಾವುದೇ ರಾಜಕೀಯ ಪಕ್ಷದ ಜೊತೆಗಿನ ವ್ಯವಹಾರದ ಬಗ್ಗೆ ಉಲ್ಲೇಖವನ್ನು ಇಲಾಖೆಯೇ ಮಾಡದೆ ಇರುವಾಗ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಎದೆ ಬಡಿದುಕೊಂಡು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿರುವುದು ಯಾಕೆ? ಇವರದ್ದೇ ಸರ್ಕಾರದ ಆದಾಯ ತೆರಿಗೆ ಇಲಾಖೆಯ ಮೇಲೆಯೂ ಇವರಿಗೆ ನಂಬಿಕೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇತ್ತೀಚಿನ ಐಟಿ ಇಲಾಖೆ ಶೋಧದ ವೇಳೆ ಪತ್ತೆಯಾಗಿರುವ ಕೋಟ್ಯಂತರ ರೂಪಾಯಿ ಹಣ ಪತ್ತೆಯಾಗಿದ್ದು, ಪಂಚ ರಾಜ್ಯಗಳ ಚುನಾವಣೆಗಾಗಿ ಪಕ್ಷಕ್ಕೆ ಹಣ ನೀಡಲು ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಆಜ್ಞೆಯ ಮೇರೆಗೆ ಕಮಿಷನ್ ಹಣ ಸಂಗ್ರಹಿಸಲಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಅವರು ಪ್ರತಿಕ್ರಿಯಿಸಿದರು.

'ಮುಂಬರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮಾತ್ರವಲ್ಲ 2024ರ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿ ಸೋಲುವುದು ಬಹುತೇಕ ಖಚಿತವಾಗಿರುವುದರಿಂದ ಬಿಜೆಪಿಗೆ ಈ ಹಿಂದಿನಂತೆ ಹಣ ಸಂಗ್ರಹವಾಗುತ್ತಿಲ್ಲ. ಜೊತೆಗೆ ಕರ್ನಾಟಕದಲ್ಲಿನ 40 ಪರ್ಸೆಂಟ್ ಕಮಿಷನ್‌ನ ದೊಡ್ಡ ಮೂಲವೂ ನಿಂತಿದೆ. ಹೀಗಾಗಿ, ಶ್ರೀಮಂತ ಉದ್ಯಮಿಗಳು ಮತ್ತು ಗುತ್ತಿಗೆದಾರರನ್ನು ಬ್ಲಾಕ್ ಮೇಲ್ ಮಾಡಿ ಬೆದರಿಸಿ ಹಣ ವಸೂಲಿ ಮಾಡಲು ಐಡಿ-ಇಡಿ ದಾಳಿ ನಡೆಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಶತಸಿದ್ದ. ತನ್ನ ಸೋಲಿಗೆ ಕಾರಣ ಹೇಳಲು ಬಿಜೆಪಿ ಈಗಲೇ ಕುಂಟುನೆಪಗಳನ್ನು ಹುಡುಕುತ್ತಿದೆ. ಕಾಂಗ್ರೆಸ್ ಪಕ್ಷದ ದುಡ್ಡಿನಬಲದಿಂದಾಗಿ ನಾವು ಸೋತುಹೋದೆವು ಎಂದು ಚುನಾವಣೆಯ ಮರುದಿನ ಬಿಜೆಪಿಯಿಂದ ಹೇಳಿಕೆ ಬಂದರೆ ಯಾರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

ಚುನಾವಣೆಗಾಗಿ ಯಾವ ಪಕ್ಷ ಹಣ ದೋಚುವುದರಲ್ಲಿ ತೊಡಗಿದೆ ಎನ್ನುವುದು ಚುನಾವಣಾ ಬಾಂಡ್‌ಗಳ ವಿವರವೇ ಸಾಕ್ಷಿಯಾಗಿದೆ. ಮಾರ್ಚ್‌ 2018ರಿಂದ ಜನವರಿ 2023ರ ವರೆಗೆ 12,008 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳು ಮಾರಾಟವಾಗಿದ್ದು, ಅದರಲ್ಲಿ ಬಿಜೆಪಿಗೆ ಸೇರಿರುವ ಬಾಂಡ್‌ಗಳ ಒಟ್ಟು ಮೌಲ್ಯ 5,272 ಕೋಟಿ ರೂಪಾಯಿ ಆಗಿದೆ. ಈ ಹಣವನ್ನು ಉದ್ಯಮಿಗಳು ಸ್ವಯಿಚ್ಚೆಯಿಂದ ನೀಡಿದರೇ? ಇಲ್ಲವೇ ಬ್ಲಾಕ್ ಮೇಲ್ ನಡೆಸಲಾಗಿತ್ತೇ? ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದಿದ್ದಾರೆ.

ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದಾಗ ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸಿದ್ದ ಬಿಜೆಪಿ ನಾಯಕರು ಈಗ ಯಾವುದೋ ಖಾಸಗಿ ಗುತ್ತಿಗೆದಾರನ ಮನೆಯಲ್ಲಿ ಹಣ ಸಕ್ಕಿದ್ದಕ್ಕೆ ನಮ್ಮ ರಾಜೀನಾಮೆ ಕೇಳಲು ನೈತಿಕತೆ ಇದೆಯೇ?. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಸಚಿವ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಮಾಜಿ ಶಾಸಕ ಸಂಪಂಗಿಯಿಂದ ಹಿಡಿದು ಮಾಡಾಳು ವಿರೂಪಾಕ್ಷಪ್ಪವರೆಗೆ ಬಿಜೆಪಿ ನಾಯಕರು ಭ‍್ರಷ್ಟಾಚಾರ ಆರೋಪದಲ್ಲಿ ಜೈಲು ಸೇರಿದವರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕೆಎಸ್ ಈಶ್ವರಪ್ಪ, ಮುನಿರತ್ನ, ಡಾ. ಸುಧಾಕರ್ ಮತ್ತು ಬಿಸಿ ಪಾಟೀಲ್ ಮೇಲೆ ಶೇ 40 ಕಮಿಷನ್ ಆರೋಪ ಇದೆ. ಬಿಟ್ ಕಾಯಿನ್ ಹಗರಣದದಲ್ಲಿ ಬಸವರಾಜ ಬೊಮ್ಮಾಯಿ ಮತ್ತು ನಳಿನ್ ಕುಮಾರ್ ಕಟೀಲ್ ಹೆಸರು ಕೇಳಿಬಂದಿದೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಡಾ. ಅಶ್ವತ್ಥನಾರಾಯಣ, ಬಿವೈ ವಿಜಯೇಂದ್ರ ಮತ್ತು ಆರಗ ಜ್ಞಾನೇಂದ್ರ ಶಾಮೀಲಾಗಿರುವ ಆರೋಪವಿದೆ. ಚುನಾವಣಾ ಟಿಕೆಟ್ ವಂಚನೆ ಪ್ರಕರಣದಲ್ಲಿ ಬಿಎಲ್ ಸಂತೋಷ್, ಸುನೀಲ್ ಕುಮಾರ್ ಕಾರ್ಕಳ ಮತ್ತು ಸಿಟಿ ರವಿ ಹೆಸರುಗಳನ್ನು ಆರೋಪಿಗಳೇ ಹೇಳಿದ್ದಾರೆ. ಇವರೆಲ್ಲರೂ ಸೇರಿ ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಗುತ್ತಿಗೆದಾರರೊಬ್ಬರನ್ನು ಹಣಕ್ಕಾಗಿ ಪೀಡಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದ ಮಾಜಿ ಸಚಿವ ಕೆಎಸ್ ಈಶ್ವರಪ್ಪನವರು ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿ ಬಂದಿರುವ ಬಿಎಸ್ ಯಡಿಯೂರಪ್ಪನವರು ಮತ್ತು ಅವರ ಮಗ ಕೂಡಾ ಸತ್ಯಹರಿಶ್ಚಂದ್ರನಂತೆ ಮಾತನಾಡುತ್ತಿರುವುದು ತಮಾಷೆಯಾಗಿ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.

ಕಾರ್ಪೊರೇಟ್‌ ಭ್ರಷ್ಟಾಚಾರದ ಮೂಲಕ ಲಕ್ಷಾಂತರ ಕೋಟಿ ರೂಪಾಯಿ ಲೂಟಿ ಹೊಡೆದು ದೇಶವನ್ನೇ ಅದಾನಿ ಕೈಗೆ ಒತ್ತೆಯಿಟ್ಟಿರುವ ಈ ಬಿಜೆಪಿಗರು ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ದೊಡ್ಡ ಕುಚೋದ್ಯ! ಅದಾನಿ ಎನ್ನುವ ಉದ್ಯಮಿಯ ಒಂದೊಂದು ಹಗರಣಗಳು ಲಕ್ಷ ಕೋಟಿಗಳನ್ನು ದಾಟುತ್ತಿವೆ! ಸಾವಿರ ಕೋಟಿಗಳ ಅವ್ಯವಹಾರಕ್ಕೆ ಲೆಕ್ಕವೇ ಇಲ್ಲವಾಗಿದೆ. ಈ ಬಗ್ಗೆ ಕಾಂಗ್ರೆಸ್‌ ಪಕ್ಷ ಕೇಳಿರುವ ನೂರು ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರ ಹೇಳಲು ಬಿಜೆಪಿಯ ನಾಯಕರಿಗೆ, ವಿಶೇಷವಾಗಿ ಮೋದಿಯವರಿಗೆ ಈವರೆಗೆ ಸಾಧ್ಯವಾಗಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com