ಬರ ಸಂಕಷ್ಟ: ಸಕ್ಕರೆ ಉತ್ಪಾದನೆ ಕಡಿಮೆ; ಸಚಿವ ಶಿವಾನಂದ್ ಪಾಟೀಲ್

ರಾಜ್ಯದಲ್ಲಿ ಬರದ ಪರಿಣಾಮ ಈ ವರ್ಷ ಬೆಳೆ ಇಳುವರಿ ಕುಸಿತಗೊಂಡಿದ್ದು, ಸಕ್ಕರೆ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಸಕ್ಕರೆ ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ್ ಅವರು ಹೇಳಿದ್ದಾರೆ.
ಶಿವಾನಂದ್ ಪಾಟೀಲ್
ಶಿವಾನಂದ್ ಪಾಟೀಲ್

ಬೆಂಗಳೂರು: ರಾಜ್ಯದಲ್ಲಿ ಬರದ ಪರಿಣಾಮ ಈ ವರ್ಷ ಬೆಳೆ ಇಳುವರಿ ಕುಸಿತಗೊಂಡಿದ್ದು, ಸಕ್ಕರೆ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಸಕ್ಕರೆ ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ್ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಎದುರಾಗಿದೆ. ರೈತರು ಕಂಗಲಾಗಿದ್ದಾರೆ. ಬಹಳಷ್ಟು ಕಡೆ ಕಬ್ಬು ಒಣಗುತ್ತಿದೆ. ಹಂಗಾಮಿಗೆ ಬೇಗನೆ ಕಬ್ಬು ಅರೆಯುವಿಕೆ ಶುರು ಮಾಡುವಂತೆ ಬೆಳಗಾರರು ಮನವಿ ಮಾಡಿದ್ದಾರೆ. ಹೀಗಾಗಿ ಒಂದು ವಾರ ಮುಂಚಿತವಾಗಿ ಕಬ್ಬು ಅರೆಯುವಿಕೆಯನ್ನು ಆರಂಭಿಸುವಂತೆ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪ್ರತಿ ಬಾರಿ ತಮಗೆ ಇಷ್ಟ ಬಂದಂತೆ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆಯನ್ನು ಶುರು ಮಾಡುತ್ತಿದ್ದವು. ಈ ಬಾರಿ ನ.1 ರಿಂದ ಏಕಕಾಲದಲ್ಲಿ ಕಬ್ಬು ಅರೆಯುವಿಕೆಯನ್ನು ಆರಂಭಿಸುವಂತೆ ನಿರ್ದೇಶಿಸಲಾಗಿತ್ತು. ಸದ್ಯ ಎಲ್ಲೆಡೆ ಬರ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಅ.25ರ ನಂತರ ಶುರು ಮಾಡುವಂತೆ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ ಎಂದು ತಿಳಿಸಿದರು.

ಕಬ್ಬು ಎಂದಿನಂತೆ ಸುಮಾರು 11 ರಿಂದ 12 ತಿಂಗಳಿಗೆ ಕಟಾವಿಗೆ ಬರುತ್ತದೆ. ಮಳೆ ಚೆನ್ನಾಗಿ ಆಗಿ, ನವೆಂಬರ್ ನಲ್ಲಿ ಕಬ್ಬು ಕಟಾವು ಮಾಡಿದ್ದರೆ ಇಳುವರಿಯೂ ಜಾಸ್ತಿ ಇರುತ್ತಿತ್ತು. ಆದರೆ, ಮಳೆ ಕೊರತೆಯಿಂದ ಅಕ್ಟೋಬರ್ ನಲ್ಲೆ ಕಬ್ಬು ಕಟಾವು ಮಾಡುವುದರಿಂದ ಸ್ವಲ್ಪ ಇಳುವರಿ ಕಡಿಮೆಯಾಗಲಿದೆ ಎಂದು ಪಾಟೀಲ್ ಮಾಹಿತಿ ನೀಡಿದರು.

ರಾಜ್ಯದಲ್ಲಿ ಈ ಬಾರಿ 3.50 ರಿಂದ 4.50 ಲಕ್ಷ ಹೆಕ್ಟೇರ್ ನಲ್ಲಿ 11-12 ತಿಂಗಳು ತುಂಬಿದ ಕಬ್ಬು ಇದೆ. ಶೇ.9.5ರಷ್ಟು ಇಳುವರಿ ಇರುತ್ತಿತ್ತು. ಈ ಬಾರಿ ಸುಮಾರು 1 ಲಕ್ಷ ಹೆಕ್ಟೇರ್‍ನಲ್ಲಿ ಕಬ್ಬು ಕಟಾವಿಗೆ ಬಂದಿಲ್ಲ. ಕಳೆದ ಬಾರಿ 74 ಕಾರ್ಖಾನೆಗಳಲ್ಲಿ ಕಬ್ಬು ಅರೆಯುವಿಕೆಯನ್ನು ಮಾಡಲಾಗಿತ್ತು. ಈ ಬಾರಿ 75 ರಿಂದ 78 ಕಾರ್ಖಾನೆಯಲ್ಲಿ ಕಬ್ಬನ್ನು ಅರೆಯಬಹುದು. ಇದರಿಂದ 1800 ಮೆಗಾವ್ಯಾಟ್ ಕೋಜನ್(ವಿದ್ಯುತ್) ಉತ್ಪಾದನೆಯಾಗಲಿದೆ.

ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಎಫ್‍ಆರ್‍ಪಿಗಿಂತ ಜಾಸ್ತಿ ಹಣವನ್ನೆ ಕೊಡಿಸಲಾಗಿದೆ. ಈ ಮೊದಲು 19.74 ಸಾವಿರ ಕೋಟಿ ರೂಪಾಯಿ ಇದ್ದು, ಈಗ 20 ಸಾವಿರ ಕೋಟಿ ರೂಪಾಯಿ ರೈತರಿಗೆ ಕೊಡಿಸಲಾಗಿದೆ. ಬುಳವಾಡ ಬಸವೇಶ್ವರ ಸಕ್ಕರೆ ಕಾರ್ಖಾನೆಯಿಂದ 28 ಕೋಟಿ ರೂ.ಬಾಕಿ ಇತ್ತು. ಕಾರ್ಖಾನೆಯ ಉಪಕರಣ ಜಪ್ತಿ ಮಾಡಿ ಹಣವನ್ನು ರೈತರಿಗೆ ಕೊಡಿಸಲಾಗಿದೆ. ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಒಂದು ರೂಪಾಯಿ ಬಾಕಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಎಥೆನಾಲ್ ಲಾಭಾಂಶವನ್ನು ರೈತರಿಗೆ ಕೊಡುವ ಬಗ್ಗೆ ಸಕ್ಕರೆ ನಿಯಂತ್ರಣ ಮಂಡಳಿ ಮುಂದೆ ತಂದು ನಿರ್ಧಾರ ಮಾಡಲಾಗುವುದು. ಕಳೆದ ಬಾರಿ ಎಥೆನಾಲ್ 35 ಸಾವಿರ ಕೋಟಿ ಲೀಟರ್ ಗೆ ಹೋಗಿತ್ತು. ಈ ಬಾರಿ ಸಕ್ಕರೆ ಉತ್ಪಾದನೆಯೂ ಕಡಿಮೆ ಆಗಬಹುದು, ಮಾರುಕಟ್ಟೆಯಲ್ಲಿ ಬೇಡಿಕೆಯಷ್ಟು ಸಕ್ಕರೆ ಬಾರದೆ ಇರಬಹುದು. ರಾಜ್ಯದಲ್ಲಿ ಎಥೆನಾಲ್ ಲಾಭವನ್ನು ಈ ವರ್ಷವೆ ರೈತರಿಗೆ ಕೊಡಿಸಲಾಗುವುದು.

ಹಿಂದಿನ ಸರಕಾರ ಸಕ್ಕರೆ ಕಾರ್ಖಾನೆಗಳ ನಡುವೆ 15 ಕಿ.ಮೀ ಅಂತರವನ್ನು ಮಾಡಿದ್ದರು. ನಾವೀಗ 25 ಕಿ.ಮೀ ಅಂತರ ಇರಬೇಕೆಂದು ಹೇಳುತ್ತವೆ. ನೆರೆಯ ಮಹಾರಾಷ್ಟ್ರದಲ್ಲಿ ಈಗ 25 ಕಿ.ಮೀ ಅಂತರ ಇದೆ. ಕಬ್ಬು ಬೆಳೆ ತುಂಬಾ ಕಡಿಮೆ ಇದೆ. ಮುಖ್ಯವಾಗಿ 125 ದಿನ ಕಬ್ಬು ಅರೆಯುವಿಕೆ ನಡೆಸಿದರೆ ಮಾತ್ರ ಕಾರ್ಖಾನೆಗೆ ಪ್ರಯೋಜನ. ಇದನ್ನು 90 ದಿನಕ್ಕೆ ಸೀಮಿತಗೊಳಿಸಬಹುದು. ಹಾಗಾಗಿ ಅಂತರ ನಿಗದಿಪಡಿಸುವ ವಿಚಾರ ಕೈಬಿಡಲಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com