ಸೇನಾ ನೇಮಕಾತಿ ಹೆಸರಲ್ಲಿ 150 ಯುವಕರಿಗೆ 1 ಕೋಟಿ ರೂ. ವಂಚಿಸಿದ್ದ ದಂಪತಿ ಬಂಧನ
ಬೆಂಗಳೂರು: ಭಾರತೀಯ ಸಶಸ್ತ್ರ ಪಡೆಗಳಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ 150 ಯುವಕರಿಗೆ ಒಂದು ಕೋಟಿ ರೂಪಾಯಿ ವಂಚಿಸಿರುವ ಅತಿದೊಡ್ಡ ಹಗರಣವನ್ನು ಪೊಲೀಸರು ಮತ್ತು ಮಿಲಿಟರಿ ಗುಪ್ತಚರ ಜಂಟಿಯಾಗಿ ಬಯಲಿಗೆಳಿದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ಸೇನೆ ತೊರೆದು ಬಂದಿರುವ ಹುಬ್ಬಳ್ಳಿ ನಿವಾಸಿ 40 ವರ್ಷದ ಶಿವರಾಜ್ ವಟಗಲ್ ಮತ್ತು ಆತನ ಹೆಂಡತಿ ಭೀಮವ್ವ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಅವರಿಂದ ನಕಲಿ ಗುರುತಿನ ಚೀಟಿಗಳು ಮತ್ತು ಸೇನಾ ನೇಮಕಾತಿಗೆ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾ ಮಾಹಿತಿ ಬ್ಯೂರೋದ ರಕ್ಷಣಾ ವಿಭಾಗ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.
'ಅಕ್ಟೋಬರ್ 20 ರಂದು ಚಿತ್ರದುರ್ಗದಲ್ಲಿ ವಂಚಕ ಮತ್ತು ಆತನ ಹೆಂಡತಿಯನ್ನು ಸೆರೆಹಿಡಿಯಲು ಮಿಲಿಟರಿ ಇಂಟೆಲಿಜೆನ್ಸ್, ಬೆಂಗಳೂರು ಮತ್ತು ಚಿತ್ರದುರ್ಗ ಜಿಲ್ಲೆಯ ಶ್ರೀರಾಂಪುರ ಪೊಲೀಸರ ತಂಡವು ಜಂಟಿ ಕಾರ್ಯಾಚರಣೆ ನಡೆಸಿತು. ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ 150 ಯುವಕರಿಗೆ 1 ಕೋಟಿ ರೂ. ವಂಚಿಸಿದ್ದಾರೆ' ಎಂದು ಅದು ಹೇಳಿದೆ.
ದಾವಣಗೆರೆ ಜಿಲ್ಲೆಯ ಪ್ರಕಾಶ್ (31) ಎಂಬುವವರು ಶಿವರಾಜ್ ವಟಗಲ್ ವಿರುದ್ಧ ದೂರು ದಾಖಲಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ