ಬೆಂಗಳೂರು: ಮಲ್ಟಿಪ್ಲೆಕ್ಸ್ ಗೋಲ್ಡ್ ಕಾರ್ಡ್ ಆಸೆಗೆ ರೂ.1 ಲಕ್ಷ ಕಳೆದುಕೊಂಡ ವ್ಯಕ್ತಿ!

ಖಾಸಗಿ ಬ್ಯಾಂಕ್ ಎಂದು ಹೇಳಿ ಮಲ್ಟಿಪ್ಲೆಕ್ಸ್ ಗೋಲ್ಡ್ ಕಾರ್ಡ್ ಖರೀದಿಸುವಂತೆ ನೀಡಿದ ಆಮಿಷಕ್ಕೆ ಒಳಗಾದ ವ್ಯಕ್ತಿಯೊಬ್ಬ ರೂ.1 ಲಕ್ಷ ಕಳೆದುಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಖಾಸಗಿ ಬ್ಯಾಂಕ್ ಎಂದು ಹೇಳಿ ಮಲ್ಟಿಪ್ಲೆಕ್ಸ್ ಗೋಲ್ಡ್ ಕಾರ್ಡ್ ಖರೀದಿಸುವಂತೆ ನೀಡಿದ ಆಮಿಷಕ್ಕೆ ಒಳಗಾದ ವ್ಯಕ್ತಿಯೊಬ್ಬ ರೂ.1 ಲಕ್ಷ ಕಳೆದುಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ.

ನಾಗರಭಾವಿಯಲ್ಲಿ ಗಾರ್ಮೆಂಟ್ಸ್ ನಡೆಸುತ್ತಿರುವ ಚಂದ್ರಾಲೇಔಟ್ ನಿವಾಸಿ ಅಜಯ್ ಅವರು ಅಕ್ಟೋಬರ್ 14 ರಂದು ಮೈಸೂರು ರಸ್ತೆಯ ಮಾಲ್ ವೊಂದಕ್ಕೆ ಸಿನಿಮಾ ನೋಡಲು ಹೋಗಿದ್ದರು. ಈ ವೇಳೆ ವಾರಾಂತ್ಯದ ವಿಶೇಷ ಕಾಂಪ್ಲಿಮೆಂಟರಿ ಎಂದು ಹೇಳಿ ವ್ಯಕ್ತಿಯೊಬ್ಬ ಮಲ್ಟಿಪ್ಲೆಕ್ಸ್ ಗೋಲ್ಡ್ ಕಾರ್ಡ್ ಕುರಿತು ಮಾಹಿತಿ ನೀಡಿದ್ದಾನೆ. ಅಲ್ಲದೆ, ಖರೀದಿ ಮಾಡಿದರೆ ಸಿಗುವ ಲಾಭಗಳನ್ನು ವಿವರಿಸಿದ್ದಾನೆ. ಬಳಿಕ ಅಜಯ್ ಅವರನ್ನು ಕಾರ್ಡ್ ಖರೀದಿಗೆ ಒಪ್ಪಿಸಿರುವ ವಂಚಕ, ಕಾರ್ಡ್ ಮನೆಗೆ ತಲುಪಿಸುವ ಸಲುವಾಗಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ನೀಡುವಂತೆ ತಿಳಿಸಿದ್ದಾನೆ. ಅಲ್ಲದೆ, ಒಟಿಪಿಯನ್ನೂ ಪಡೆದುಕೊಂಡಿದ್ದಾನೆ.

ವಂಚನೆ ತಿಳಿಯದೆ ಎಲ್ಲಾ ಮಾಹಿತಿಯನ್ನೂ ಹಂಚಿಕೊಂಡಿದ್ದ ಅಜಯ್ ಅವರು, ಅಕ್ಟೋಬರ್ 15ರಂದು ಆನ್ ಲೈನ್ ಬ್ಯಾಂಕ್ ಪೋರ್ಟಲ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ನ್ನು ಚೆಕ್ ಮಾಡಿದ್ದಾರೆ. ಈ ವೇಳೆ ಖಾತೆಯಲ್ಲಿದ್ದ 1,18,200 ರೂ ಪೈಕಿ ರೂ.200 ಇರುವುದನ್ನು ಕಂಡು ಆಘಾತಗೊಂಡಿದ್ದಾರೆ.

ಕೂಡಲೇ ಬ್ಯಾಂಕ್ ಅಧಿಕಾರಿಗಳ ಸಂಪರ್ಕಿಸಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ. ಒಟಿಪಿ ಹಂಚಿಕೊಂಡ ಕಾರಣ ಬ್ಯಾಂಕ್ ಖಾತೆಯಿಂದ ಹಣ ಪಡೆಯಲು ಸಾಧ್ಯವಾಗಿದೆ ಬ್ಯಾಂಕ್ ಅಧಿಕಾರಿಗಳು ಹೇಳಿದರು. ವಂಚಕರು ರೂ.99,999, ರೂ 1, ರೂ.15,000, ರೂ 3,000 ರಂತೆ ಒಟ್ಟು ನಾಲ್ಕು ಬಾರಿ ವಹಿವಾಟು ನಡೆಸಿದ್ದಾರೆ. ಒಟ್ಟು 1,18,000 ರೂ.ಗಳನ್ನು ದೇಬೆಂದು ಮಿಶ್ರಾ ಎಂಬುವವರ ಹೆಸರಿನ ಖಾಸಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದರು ಅಜಯ್ ಅವರು ಹೇಳಿದ್ದಾರೆ.

ಮಲ್ಟಿಪ್ಲೆಕ್ಸ್ ಯಾವುದೇ ಅಧಿಕೃತ ದಾಖಲೆಗಳ ನೀಡುವಂತೆ ವಿನಂತಿಸುವುದಿಲ್ಲ. ಹಲವರು ಪೋರ್ಟಲ್ ಮೂಲಕ ಆಧಾರ್ ಕಾರ್ಡ್ ಕುರಿತ ಮಾಹಿತಿಗಳನ್ನು ಹಂಚಿಕೊಂಡು ಹಣ ಕಳೆದುಕೊಳ್ಳುತ್ತಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಕರಣ ಸಂಬಂಧ ಐಟಿ ಕಾಯ್ದೆಯಡಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com