ಹುಲಿ ಉಗುರಿನ ಪೆಂಡೆಂಟ್ ಪ್ರಕರಣ: ಬಳ್ಳಾರಿಯಲ್ಲಿ ಇಬ್ಬರಿಗೆ ಅರಣ್ಯ ಇಲಾಖೆಯಿಂದ ಸರ್ಚ್ ವಾರಂಟ್

ಹುಲಿ ಉಗುರು, ಹಲ್ಲು ಸೇರಿದಂತೆ ವನ್ಯಜೀವಿಗಳ ದೇಹದ ಭಾಗಗಳನ್ನು ಬಳಸಿ ತಯಾರಿಸಿದ ಆಭರಣಗಳನ್ನು ಧರಿಸುವವರ ಮೇಲೆ ಬಳ್ಳಾರಿಯಲ್ಲಿ ಅರಣ್ಯ ಇಲಾಖೆ ಕಣ್ಣಿಟ್ಟಿದೆ. ಸಾಮಾಜಿಕ ಮಾಧ್ಯಮ ಖಾತೆಗಳು, ಫ್ಲೆಕ್ಸ್‌ಗಳು ಮತ್ತು ಬ್ಯಾನರ್‌ಗಳಲ್ಲಿನ ಚಿತ್ರಗಳು, ರಾಜಕೀಯ ಕಟೌಟ್‌ಗಳು ಮತ್ತು ಇತರವುಗಳಲ್ಲಿನ ಸುಳಿವುಗಳಿಗಾಗಿ ಅರಣ್ಯಾಧಿಕಾರಿಗಳು ಹುಡುಕುತ್ತಿದ್ದಾರೆ. 
ಕರ್ನಾಟಕ ಅರಣ್ಯ ಇಲಾಖೆ
ಕರ್ನಾಟಕ ಅರಣ್ಯ ಇಲಾಖೆ

ಬಳ್ಳಾರಿ: ಹುಲಿ ಉಗುರು, ಹಲ್ಲು ಸೇರಿದಂತೆ ವನ್ಯಜೀವಿಗಳ ದೇಹದ ಭಾಗಗಳನ್ನು ಬಳಸಿ ತಯಾರಿಸಿದ ಆಭರಣಗಳನ್ನು ಧರಿಸುವವರ ಮೇಲೆ ಬಳ್ಳಾರಿಯಲ್ಲಿ ಅರಣ್ಯ ಇಲಾಖೆ ಕಣ್ಣಿಟ್ಟಿದೆ.

ಸಾಮಾಜಿಕ ಮಾಧ್ಯಮ ಖಾತೆಗಳು, ಫ್ಲೆಕ್ಸ್‌ಗಳು ಮತ್ತು ಬ್ಯಾನರ್‌ಗಳಲ್ಲಿನ ಚಿತ್ರಗಳು, ರಾಜಕೀಯ ಕಟೌಟ್‌ಗಳು ಮತ್ತು ಇತರವುಗಳಲ್ಲಿನ ಸುಳಿವುಗಳಿಗಾಗಿ ಅರಣ್ಯಾಧಿಕಾರಿಗಳು ಹುಡುಕುತ್ತಿದ್ದಾರೆ. 

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಬ್ಯಾನರ್‌ಗಳಲ್ಲಿ ವನ್ಯಜೀವಿಗಳ ವಸ್ತುಗಳಿಂದ ತಯಾರಿಸಿದ ಆಭರಣ ಧರಿಸಿರುವ 120ಕ್ಕೂ ಹೆಚ್ಚು ಉಲ್ಲಂಘನೆಗಳನ್ನು ಇಲಾಖೆ ಈಗ ಪತ್ತೆ ಮಾಡಿದೆ. ಇಬ್ಬರು ವ್ಯಕ್ತಿಗಳಿಗೆ ಈಗಾಗಲೇ ಸರ್ಚ್ ವಾರಂಟ್ ಕಳುಹಿಸಲಾಗಿದೆ. ಆದರೆ, ಓರ್ವ ಆರೋಪಿ ತನ್ನ ಆಭರಣದಿಂದ ಉಗುರನ್ನು ತೆಗೆದು ಇಲಾಖೆಗೆ ಒಪ್ಪಿಸಿದ್ದಾನೆ. ಅದನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಾದ್ಯಂತ ವನ್ಯಜೀವಿಗಳ ದೇಹದ ಭಾಗಗಳನ್ನು ಅದರಲ್ಲೂ ಹುಲಿ ಉಗುರುಗಳನ್ನು ಧರಿಸಿದ ಪ್ರಕರಣಗಳಲ್ಲಿ ಅರಣ್ಯ ಇಲಾಖೆಯು ಸರಣಿ ದಾಳಿಗಳು ಮತ್ತು ಕೆಲವರನ್ನು ಬಂಧಿಸಿದೆ. ಇದೀಗ, ಬಳ್ಳಾರಿ ಅರಣ್ಯ ಇಲಾಖೆಯು ಎಚ್ಚೆತ್ತುಕೊಂಡಿದೆ.

ಬ್ಯಾನರ್‌ಗಳಲ್ಲಿ ಮುದ್ರಿಸಲಾದ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ಫೋಟೊಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಅಕ್ರಮವಾಗಿ ಧರಿಸಿರುವವರ ವಿರುದ್ಧ ಅರಣ್ಯ ಇಲಾಖೆಯು ಹೆಚ್ಚಿನ ಸರ್ಚ್ ವಾರಂಟ್‌ಗಳನ್ನು ನೀಡಲು ಮುಂದಾಗಿದೆ.

ಬಳ್ಳಾರಿ ಜಿಲ್ಲೆಯು ಉತ್ತಮ ಪ್ರಮಾಣದ ವನ್ಯಜೀವಿಗಳನ್ನು ಹೊಂದಿದೆ. ಇದು ದೇಶದ ಕರಡಿ ಅಭಯಾರಣ್ಯಕ್ಕೆ ನೆಲೆಯಾಗಿದೆ. ಕರಡಿಗಳಲ್ಲದೆ, ಚಿರತೆಗಳು, ತೋಳಗಳು ಮತ್ತು ಹೈನಾಗಳು ಇಲ್ಲಿ ಕಂಡುಬರುವ ಪ್ರಮುಖ ಪ್ರಾಣಿಗಳಾಗಿವೆ.

ಬಳ್ಳಾರಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಮಾತನಾಡಿ, ಜಿಲ್ಲೆಯಲ್ಲಿ ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಆಧರಿಸಿ ಇಬ್ಬರಿಗೆ ಸರ್ಚ್ ವಾರಂಟ್ ನೀಡಲಾಗಿದೆ. 'ಓರ್ವ ವ್ಯಕ್ತಿ ಅರಣ್ಯ ಇಲಾಖೆ ಮುಂದೆ ಶರಣಾಗಿದ್ದು, ಆತ ನೀಡಿರುವ ಉಗುರನ್ನು ನಾವು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಮತ್ತೊಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

'ದೂರುಗಳ ಆಧಾರದ ಮೇಲೆ, ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ಬ್ಯಾನರ್‌ಗಳಲ್ಲಿ ಪೋಸ್ಟ್ ಮಾಡಿದ ಚಿತ್ರಗಳಲ್ಲಿನ ವ್ಯಕ್ತಿಗಳನ್ನು ಹುಡುಕುತ್ತಿದ್ದೇವೆ ಮತ್ತು ಅವರ ಮನೆಗಳಿಗೆ ಸರ್ಚ್ ವಾರಂಟ್ ಕಳುಹಿಸಿದ್ದೇವೆ. ಅರಣ್ಯ ಇಲಾಖೆ ಕಚೇರಿಗೆ ಬಂದು ಅಂತವರು ಸಹಕರಿಸಬೇಕು' ಎಂದು ಮನವಿ ಮಾಡಿದರು.

ಕಳೆದ ಎರಡು ದಿನಗಳಲ್ಲಿ, ಸುಮಾರು 120 ಪೋಸ್ಟ್‌ಗಳು ಮತ್ತು ಬ್ಯಾನರ್‌ಗಳಲ್ಲಿ ವಿವಿಧ ಜನರು ವನ್ಯಜೀವಿಗಳ ಉಗುರುಗಳು ಮತ್ತು ಹಲ್ಲುಗಳನ್ನು ಹೊಂದಿರುವ ಆಭರಣಗಳೊಂದಿಗೆ ಪೋಸ್ ನೀಡುತ್ತಿರುವ ಫೋಟೊಗಳನ್ನು ಪತ್ತೆ ಮಾಡಿದ್ದೇವೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com