ಬೆಂಗಳೂರು: ಕೆಐಎಯಲ್ಲಿ ವಶಪಡಿಸಿಕೊಂಡಿದ್ದ 1.46 ಕೋಟಿ ರೂ. ಮೌಲ್ಯದ ಸಿಗರೇಟ್ ನಾಶ!

ಪಶ್ಚಿಮ ಏಷ್ಯಾ ಮತ್ತು ಥಾಯ್ಲೆಂಡ್‌ನಿಂದ ಪ್ರಯಾಣಿಕರು ಬೆಂಗಳೂರಿಗೆ ಕಳ್ಳಸಾಗಣೆ ಮಾಡುತ್ತಿದ್ದ 1.46 ಕೋಟಿ ರೂಪಾಯಿ ಮೌಲ್ಯದ ಒಟ್ಟು 7.3 ಲಕ್ಷ ಸಿಗರೇಟ್‌ಗಳನ್ನು ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ನಾಶಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪಶ್ಚಿಮ ಏಷ್ಯಾ ಮತ್ತು ಥಾಯ್ಲೆಂಡ್‌ನಿಂದ ಪ್ರಯಾಣಿಕರು ಬೆಂಗಳೂರಿಗೆ ಕಳ್ಳಸಾಗಣೆ ಮಾಡುತ್ತಿದ್ದ 1.46 ಕೋಟಿ ರೂಪಾಯಿ ಮೌಲ್ಯದ ಒಟ್ಟು 7.3 ಲಕ್ಷ ಸಿಗರೇಟ್‌ಗಳನ್ನು ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ನಾಶಪಡಿಸಿದ್ದಾರೆ.

ನೆಲಮಂಗಲದ ಬೆಂಗಳೂರು ಇಕೋ ಪಾರ್ಕ್ ಪ್ರೈವೇಟ್ ಲಿಮಿಟೆಡ್‌ನಲ್ಲಿರುವ ಇನ್ಸಿನರೇಟರ್‌ನಲ್ಲಿ ಇಡೀ ದಿನ ನಾಶ ಮಾಡುವ ಪ್ರಕ್ರಿಯೆ ನಡೆಯಿತು. ಇಕೋ ಪಾರ್ಕ್ ಪ್ರೈವೇಟ್ ಲಿಮಿಟೆಡ್‌ನಲ್ಲಿರುವ ಇನ್ಸಿನರೇಟರ್‌ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ರಮಾಣೀಕರಿಸಲ್ಪಟ್ಟಿದೆ.

ಪ್ರಸ್ತುತ ನಾಶಪಡಿಸಲಾದ "ಸಿಗರೇಟ್‌ಗಳನ್ನು ತಮ್ಮ ಸಾಮಾನು ಸರಂಜಾಮುಗಳಲ್ಲಿ ಮರೆಮಾಚುವ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲು ಪ್ರಯತ್ನಿಸಿದ ನೂರಾರು ಅಂತರಾಷ್ಟ್ರೀಯ ಪ್ರಯಾಣಿಕರಿಂದ ಹಲವು ತಿಂಗಳ ಅವಧಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು.

ಪ್ರತಿ ಪ್ರಯಾಣಿಕರಿಗೆ ಗರಿಷ್ಠ 100 ಸಿಗರೇಟ್‌ಗಳನ್ನು ತರಲು ಅನುಮತಿ ನೀಡಲಾಗಿದೆ, ಅನುಮತಿಸಲಾದ ಸಂಖ್ಯೆಗಿಂತ ಹೆಚ್ಚಿನ ಸಿಗರೇಟ್ ಸಿಕ್ಕಾಗ ಕಸ್ಟಮ್ಸ್ ಆಕ್ಟ್, 1962 ರ ಅಡಿಯಲ್ಲಿ ವಶಪಡಿಸಿಕೊಂಡು, ಪ್ರಕರಣ ದಾಖಲಿಸುತ್ತಾರೆಂದು ಹಿರಿಯ ಕಸ್ಟಮ್ಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರತಿಷ್ಠಿತ ಬ್ರಾಂಡೆಡ್ ಕಂಪನಿಗಳ ಹೊರತಾಗಿ, ಸಾಕಷ್ಟು ಸಂಖ್ಯೆಯ ಸಿಗರೇಟ್‌ಗಳು ನಕಲಿಗಳಾಗಿವೆ. "ಈ ನಕಲಿ ಸಿಗರೇಟ್ ಗಳನ್ನು ಪಶ್ಚಿಮ ಏಷ್ಯಾದ ಕೆಲವು ಭಾಗಗಳಲ್ಲಿ ತಯಾರಿಸಲಾಗುತ್ತಿದ್ದು, ನಂತರ ಅದನ್ನು ಭಾರತದಲ್ಲಿ ಮಾರಾಟ ಮಾಡಲಾಗುತ್ತದೆ. ಅವು ಒಂದೇ ರೀತಿ ಕಾಣುವುದರಿಂದ, ಸಾರ್ವಜನಿಕರಿಗೆ ವ್ಯತ್ಯಾಸಗಳನ್ನು ತಿಳಿಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ನಾಶಪಡಿಸಿದ ಒಟ್ಟಾರೆ ಸಿಗರೇಟ್ ಗಳ ಪೈಕಿ ಇತ್ತೀಚೆಗೆ ಬುರ್ಖಾಧಾರಿ ಹಿರಿಯ ಮಹಿಳೆಯೊಬ್ಬರಿಂದ ವಶಪಡಿಸಿಕೊಂಡಿದ್ದ 49,600 ಸಿಗರೇಟ್ ಗಳೂ ಕೂಡ ಇದ್ದವು. ವಯಸ್ಸಿನ ಕಾರಣ, ತಮ್ಮ ಮೇಲೆ ಅನುಮಾನ ಬರುವುದಿಲ್ಲ ಎಂದು ಮಹಿಳೆ ತಿಳಿದಿದ್ದರು. ಆದರೆ, ಸ್ಕ್ಯಾನಿಂಗ್ ಸಮಯದಲ್ಲಿ ಸಿಗರೇಟ್ ಇರುವಿಕೆಯನ್ನು ಪತ್ತೆ ಮಾಡಲಾಗಿತ್ತು.

ನಿಯಮಗಳ ಮೀರಿ ಸಿಗರೇಟ್ ತರುವವರಿಗೆ ಪ್ರಮಾಣಕ್ಕೆ ಅನುಗುಣವಾಗಿ ದಂಡ ವಿಧಿಸಲಾಗುತ್ತದೆ, ರೂ.50 ಲಕ್ಷಕ್ಕೂ ಹೆಚ್ಚಿನ ಮೌಲ್ಯವುಳ್ಳ ಸಿಗರೇಟ್ ಗಳನ್ನು ಸಾಗಿಸುವವರನ್ನು ಬಂಧನಕ್ಕೊಳಪಡಿಸಲಾಗುತ್ತದೆ. ಈವರೆಗೂ ನೂರಾರು ಪ್ರಯಾಣಿಕರು ಅಕ್ರಮವಾಗಿ ಸಾಗಾಟ ಮಾಡಿ, ಸಿಕ್ಕಿಬಿದ್ದಿದ್ದು, ಯಾರನ್ನೂ ಬಂಧನಕ್ಕೊಳಪಡಿಸಲಾಗಿಲ್ಲ ಎಂದು ಹೇಳಿದ್ದಾರೆ.

ಅಕ್ಟೋಬರ್ 2 ರಿಂದ 31 ರವರೆಗೆ ಕಸ್ಟಮ್ಸ್ ಇಲಾಖೆಯು ನಡೆಸುತ್ತಿರುವ ಸ್ವಚ್ಛತಾ ಅಭಿಯಾನದ ಅಂಗವಾಗಿ ಸಿಗರೇಟ್ ಗಳನ್ನು ನಾಶಪಡಿಸಲಾಯಿತು.

ಸಿಗರೇಟ್ ಗಳ ನಾಶಪಡಿಸುವ ವೇಳೆ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಏರ್ ಕಾರ್ಗೋ ಕಮಿಷನರೇಟ್‌ನ ಜಾಗೃತ ಘಟಕದ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com