ಐತಿಹಾಸಿಕ ಬಾಲಬ್ರೂಯಿ ಅತಿಥಿ ಗೃಹ ಮನೋರಂಜನಾ ಕ್ಲಬ್ ಆಗಿ ಪರಿವರ್ತನೆಗೆ ಎಎಪಿ ವಿರೋಧ!

ನಗರದಲ್ಲಿನ ಐತಿಹಾಸಿಕ ಬಾಲಬ್ರೂಯಿ ಅತಿಥಿ ಗೃಹವನ್ನು ಕಾಂಗ್ರೆಸ್ ಸರ್ಕಾರ ಮನೋರಂಜನಾ ಕ್ಲಬ್ ಆಗಿ ಪರಿವರ್ತಿಸುವ ಪ್ರಯತ್ನ ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿದೆ.
ಬಾಲಬ್ರೂಯಿ ಅತಿಥಿ ಗೃಹ, ಬ್ರಿಜೇಶ್ ಕಾಳಪ್ಪ
ಬಾಲಬ್ರೂಯಿ ಅತಿಥಿ ಗೃಹ, ಬ್ರಿಜೇಶ್ ಕಾಳಪ್ಪ

ಬೆಂಗಳೂರು: ನಗರದಲ್ಲಿನ ಐತಿಹಾಸಿಕ ಬಾಲಬ್ರೂಯಿ ಅತಿಥಿ ಗೃಹವನ್ನು ಕಾಂಗ್ರೆಸ್ ಸರ್ಕಾರ ಮನೋರಂಜನಾ ಕ್ಲಬ್ ಆಗಿ ಪರಿವರ್ತಿಸುವ ಪ್ರಯತ್ನ ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಎಪಿಯ ಸಂವಹನ ವಿಭಾಗದ ಮುಖ್ಯಸ್ಥ ಬ್ರಿಜೇಶ್ ಕಾಳಪ್ಪ, ನಗರದ ಹೃದಯ ಭಾಗದಲ್ಲಿರುವ ಬಾಲಬ್ರೂಯಿ ಅತಿಥಿ ಗೃಹವನ್ನು ‘ಸಾಂವಿಧಾನಿಕ ಕ್ಲಬ್’ ಆಗಿ ಪರಿವರ್ತಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿದರು. ಒಂದು ಕಾಲದಲ್ಲಿ ನಾಡಿನ ಮಹಾತ್ಮ ಗಾಂಧೀಜಿ ನೆಲೆಸಿದ್ದ ಐತಿಹಾಸಿಕ ಅತಿಥಿ ಗೃಹವನ್ನು ಮೋಜು ಮಸ್ತಿಗಾಗಿ ಕ್ಲಬ್ ಆಗಿ ಬಳಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ಮಹಾತ್ಮ ಗಾಂಧಿ, ರಾಷ್ಟ್ರಗೀತೆ ಬರೆದ ರವೀಂದ್ರನಾಥ ಠಾಗೋರ್, ಮೊದಲ ಪ್ರಧಾನಿ ಮತ್ತು ಕಾಂಗ್ರೆಸ್ ಐಕಾನ್ ಜವಾಹರಲಾಲ್ ನೆಹರು ತಂಗಿದ್ದ ಐತಿಹಾಸಿಕ ಕಟ್ಟಡವಾಗಿದೆ. ಇದು ಮಾರ್ಕ್ ಕಬ್ಬನ್ ತಂಗಿದ್ದ ಅತಿಥಿ ಗೃಹ. ದಿವಂಗತ ಸಿಎಂ ದೇವರಾಜ್ ಅರಸು ಅವರು ಹಲವು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದರು. ಇಂತಹ ಪ್ರಮುಖರು ಆಗಮಿಸಿ ತಂಗಿರುವ ಮಹತ್ವದ ಇತಿಹಾಸವಿರುವ ಅತಿಥಿ ಗೃಹವನ್ನು ಮೋಜು ಮಸ್ತಿಗೆ ಬಳಸಿಕೊಳ್ಳುವುದು ಸರಿಯಲ್ಲ. ಐತಿಹಾಸಿಕ ಪಾರಂಪರಿಕ ಕಟ್ಟಡವನ್ನು ಮನರಂಜನಾ ಕ್ಲಬ್ ಆಗಿ ಪರಿವರ್ತಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೂಡಲೇ ಕೈಬಿಡಬೇಕು. ಬಾಲಬ್ರೂಯಿ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಬ್ರಿಜೇಶ್ ಕಾಳಪ್ಪ ಆಗ್ರಹಿಸಿದರು.

ಶ್ಯಾಮ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ ಅವರಂತಹ ಬಿಜೆಪಿಯ ಹಿರಿಯ ನಾಯಕರು ಈ ಅತಿಥಿ ಗೃಹದಲ್ಲಿ ಕೆಲವು ದಿನ ತಂಗಿದ್ದರೆ ಬಿಜೆಪಿಯವರು ಬಾಲಬ್ರೂಯಿಯನ್ನು ದೇವಾಲಯವನ್ನಾಗಿ ಮಾಡುತ್ತಿರಲಿಲ್ಲವೇ?  ಒಂದು ಕಾಲದಲ್ಲಿ ನಿಮ್ಮದೇ ನಾಯಕರು ತಂಗಿದ್ದ ಸ್ಥಳವನ್ನು ಹೇಗೆ ವಿನೋದ ಮತ್ತು ಮನರಂಜನೆಯ ಕೇಂದ್ರವಾಗಿ ಮಾಡಲು ನಿಮಗೆ ಚಿಂತನೆ ಬಂದಿದೆ  ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದರು. ಚಿಕ್ಕ ಜಾಗದಲ್ಲಿ ದೊಡ್ಡ ಕ್ಲಬ್ ನಿರ್ಮಿಸಲು ಯತ್ನಿಸುತ್ತಿರುವುದು ಅವೈಜ್ಞಾನಿಕ. ಇದಕ್ಕಾಗಿ ಸಾಕಷ್ಟು ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯ ಮುಖಂಡ ಹಾಗೂ ಬಿಜೆಪಿ ಮಾಜಿ ಸಂಸದ ಡಾ.ವೆಂಕಟೇಶ್ ಮಾತನಾಡಿ, ಐತಿಹಾಸಿಕ ಸ್ಥಳಗಳನ್ನು ಗೌರವಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಇಂತಹ ಪಾರಂಪರಿಕ ರಚನೆಗಳನ್ನು ಮನರಂಜನಾ ಕ್ಲಬ್ ಗೆ ಬಿಡುವುದು ಸರಿಯಲ್ಲ ಎಂದರು. ಈ ಸಂಬಂಧ ಆ.31ರಂದು ನಡೆದ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಜರಾಗಿರಲಿಲ್ಲ. ಐತಿಹಾಸಿಕ ಅತಿಥಿ ಗೃಹವನ್ನು ಮನರಂಜನಾ ಕ್ಲಬ್ ಆಗಿ ಪರಿವರ್ತಿಸಲು ಅವರ ಆಕ್ಷೇಪವಿದೆ ಎಂದು ತಿಳಿದುಬಂದಿದೆ. ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಕಾಂಗ್ರೆಸ್ ಶಾಸಕರಾದ ರಿಜ್ವಾನ್ ಅರ್ಷದ್, ನಯನಾ ಮೋಟಮ್ಮ, ಎನ್.ಎ.ಹ್ಯಾರಿಸ್ ಸಭೆಯಲ್ಲಿ ಭಾಗವಹಿಸಿದ್ದರು. 

ಸಭೆಯಲ್ಲಿ ಪಾಲ್ಗೊಂಡಿದ್ದ ಎಚ್ ಕೆ ಪಾಟೀಲ್, ಸಭಾಪತಿ ಬಸವರಾಜ ಹೊರಟ್ಟಿ, ಶಿವಲಿಂಗೇಗೌಡ ಸೇರಿದಂತೆ ಹಲವು ಹಿರಿಯ ಸಚಿವರು, ಶಾಸಕರು ಕ್ಲಬ್ ಮಾಡುವ ವಿಚಾರವನ್ನು ಬೆಂಬಲಿಸದಿರುವುದು ಗುಟ್ಟಾಗಿ ಉಳಿದಿಲ್ಲ. ಸಭೆಯಲ್ಲಿ ಒಮ್ಮತವಿಲ್ಲದಿದ್ದರೂ ಮನರಂಜನಾ ಕ್ಲಬ್ ಮಾಡಲು ಏಕೆ ಮುಂದಾಗುತ್ತೀರಿ? ಇದರ ಹಿಂದೆ ಯಾರ ಒತ್ತಡವಿದೆ? ಎಂದು  ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com