ಒಬ್ಬ ರೈತನ ಸಾವನ್ನೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ: ಕೃಷಿ ಸಚಿವ ಚಲುವರಾಯಸ್ವಾಮಿ (ಸಂದರ್ಶನ)

ರಾಜ್ಯದ ಪ್ರಸ್ತುತದ ಪರಿಸ್ಥಿತಿ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿಯವರು ಸಂದರ್ಶನದಲ್ಲಿ ಮಾತನಾಡಿದ್ದು, ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ವಿವರಿಸಿದ್ದಾರೆ.
ಕೃಷಿ ಸಚಿವ ಚಲುವರಾಯಸ್ವಾಮಿ
ಕೃಷಿ ಸಚಿವ ಚಲುವರಾಯಸ್ವಾಮಿ

ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಬರಗಾಲದ ಪರಿಸ್ಥಿತಿ ಎದುರಾಗಿದ್ದು, ಸೆಪ್ಟೆಂಬರ್ 4ರಂದು ನಡೆಯಲಿರುವ ಸಂಪುಟ ಉಪಸಮಿತಿ ಸಭೆಯಲ್ಲಿ 100ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಸರ್ಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾಗುವ ಆಶಾಭಾವವನ್ನು ಸರ್ಕಾರ ಹೊಂದಿದ್ದು, ಇದರಿಂದ ಜೋಳ, ರಾಗಿ ಹಾಗೂ ಅಣೆಕಟ್ಟುಗಳ ಜಲಾನಯನ ಪ್ರದೇಶಗಳಲ್ಲಿನ ಭತ್ತದ ಬೆಳೆಗಳ ರಕ್ಷಣೆಗೆ ಸ್ವಲ್ಪ ಮಟ್ಟಿದೆ ಸಹಾಯಕವಾಗಬಹುದು ಎಂಬ ನಿರೀಕ್ಷೆಗಳಿವೆ. ಈ ನಡುವಲ್ಲೇ ರಾಜ್ಯದ ಪ್ರಸ್ತುತದ ಪರಿಸ್ಥಿತಿ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿಯವರು ಸಂದರ್ಶನದಲ್ಲಿ ಮಾತನಾಡಿದ್ದು, ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ವಿವರಿಸಿದ್ದಾರೆ.

ಸರ್ಕಾರ 100 ದಿನಗಳನ್ನು ಪೂರೈಸಿದ್ದು, ಮುಂದಿನ ನಡೆ ಹೇಗಿರುತ್ತದೆ?
ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ. ಈ ಪೈಕಿ ಆಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಆರಂಭದಲ್ಲಿ, ಪ್ರತಿಪಕ್ಷಗಳು ಮತ್ತು ಮಾಧ್ಯಮಗಳು ಗ್ಯಾರಂಟಿ ಯೋಜನೆಯ ಅನುಷ್ಠಾನದ ಬಗ್ಗೆ, ಸಂಪನ್ಮೂಲಗಳ ಕ್ರೋಢೀಕರಣ ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸಿದ್ದವು. ನಮ್ಮ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಇದು ಜನರಲ್ಲಿ ಗೊಂದಲಗಳನ್ನು ಸೃಷ್ಟಿಸಿತ್ತು. ಸಾಂಕ್ರಾಮಿಕ ಸಮಯದಲ್ಲಿ ‘ಅನ್ನ ಭಾಗ್ಯ’ ಯೋಜನೆ ಎಷ್ಟು ಸಹಾಯಕವಾಯಿತು ಎಂಬುದನ್ನು ಜನರು, ವಿಶೇಷವಾಗಿ ಗ್ರಾಮೀಣ ಜನರು ಅರಿತುಕೊಂಡರು. ಬೆಲೆ ಏರಿಕೆಯಿಂದ ಜನರು ಬೇಸತ್ತಿದ್ದರು. ಇಂಧನ ಅಥವಾ ಇತರ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಲು ನಮಗೆ ಅಧಿಕಾರವಿಲ್ಲದ ಕಾರಣ, ನಾವು ಕೆಲವು ಆರ್ಥಿಕ ಪರಿಹಾರಗಳನ್ನು ನೀಡುವ ಮೂಲಕ ಜನರಿಗೆ ಸಹಾಯ ಮಾಡಲು ನಿರ್ಧರಿಸಿದ್ದೆವು. ಅದರಂತೆಯೇ ಗ್ಯಾರಂಟಿ ಯೋಜನೆಗಳ ಇಟ್ಟುಕೊಂಡು ಜನರ ಮುಂದೆ ಬಂದೆವು. ಇದೀಗ ಗ್ರಾಮೀಣ ಪ್ರದೇಶದ ಬಹುತೇಕ ಪ್ರತಿ ಮನೆಗಳಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಪ್ರತಿ ಮನೆಗೆ ಸುಮಾರು 5,000-6,000 ರೂ. ಸಿಗುತ್ತಿದೆ. ಇದು ಬಡ ಕುಟುಂಬಗಳಿಗೆ, ವಿಶೇಷವಾಗಿ ರೈತರಿಗೆ ನೀಡಿದ ದೊಡ್ಡ ಪರಿಹಾರವಾಗಿದೆ. ಇತ್ತೀಚೆಗಷ್ಟೇ ‘ಗೃಹ ಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಲಾಗಿದ್ದು, 1.11 ಕೋಟಿ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ ಏಕಕಾಲಕ್ಕೆ 2 ಸಾವಿರ ರೂ.ಗಳನ್ನು ಪಡೆದಿದ್ದಾರೆ. ಇದು ಐತಿಹಾಸಿಕವಾಗಿದೆ.

ಕೃಷಿ ಸಚಿವರಾದ ನಂತರ ನೀವು ಕೈಗೊಂಡ ಉಪಕ್ರಮಗಳೇನು?
ಕೃಷಿಯನ್ನು ಉದ್ಯಮವಾಗಿ ನೋಡಬೇಕು ಎಂದಾಗ ಮಾತ್ರ ರೈತರ ಏಳಿಗೆ ಸಾಧ್ಯ. ಪ್ರಸ್ತುತ, ನಾವು ರಾಗಿಗೆ ಸಬ್ಸಿಡಿ ನೀಡುವುದರ ಜೊತೆಗೆ ಇತರೆ ಉತ್ಪನ್ನಗಳಿಗೆ ಮತ್ತು ನೈಸರ್ಗಿಕ ಕೃಷಿ ಕೈಗೊಳ್ಳಲು ರೈತರನ್ನು ಪ್ರೋತ್ಸಾಹಿಸುತ್ತಿದ್ದೇವೆ. ಅಲ್ಲದೆ, ಹಿಂದಿನ ಸರ್ಕಾರ ಕೈಬಿಟ್ಟಿದ್ದ ‘ಕೃಷಿ ಭಾಗ್ಯ’ವನ್ನು ಮತ್ತೆ ಪರಿಚಯಿಸಿದ್ದೇವೆ. ರೈತರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರಿಗೆ ಮಾರ್ಗದರ್ಶನ ನೀಡಲು, ನಾವು ಕಾಲ್ ಸೆಂಟರ್ ಅನ್ನು ಅಪ್‌ಗ್ರೇಡ್ ಮಾಡಿದ್ದೇವೆ ಮತ್ತು ಕೇಂದ್ರೀಕೃತ ಕಾಲ್ ಸೆಂಟರ್ ಅನ್ನು ಸ್ಥಾಪಿಸಿದ್ದೇವೆ (ಟೋಲ್-ಫ್ರೀ - 18004 253553), ಇದರಿಂದ ಏಕಕಾಲದಲ್ಲಿ 30 ಕರೆಗಳನ್ನು ಸ್ವೀಕರಿಸಬಹುದಾಗಿದೆ. ಉನ್ನತ ಅಧಿಕಾರಿಗಳು ಕರೆಗಳನ್ನು ಪರಿಶೀಲಿಸುತ್ತಾರೆ. ‘ಉತ್ತರ ಕರ್ನಾಟಕದ 4-5 ಜಿಲ್ಲೆಗಳ ಬೆಳೆಗಳು ಒಣಗಿ ನಷ್ಟ ಅನುಭವಿಸಿದ ರೈತರಿಗೆ ರೂ.223 ಕೋಟಿ ಬಿಡುಗಡೆ ಮಾಡಲು ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದಿದ್ದೇವೆ. ಸುಮಾರು 16 ಲಕ್ಷ ರೈತರು (ಒಟ್ಟು 75 ಲಕ್ಷ ಮಂದಿ) ಬೆಳೆ ವಿಮೆಗೆ ಒಳಪಟ್ಟಿದ್ದಾರೆ, ಇದಕ್ಕಾಗಿ ರೈತರು ಕೇವಲ 2 ಪ್ರತಿಶತವನ್ನು ಪಾವತಿಸಬೇಕಾಗುತ್ತದೆ ಮತ್ತು ಉಳಿದ ಹಣವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಭರಿಸುತ್ತವೆ. ಇದರಡಿ ಬೆಳೆ ನಷ್ಟ ಅನುಭವಿಸಿರುವ ಎಂಟು ಜಿಲ್ಲೆಗಳ 52 ಸಾವಿರ ರೈತರಿಗೆ ಶೀಘ್ರವೇ 47 ಕೋಟಿ ರೂ ಸಿಗಲಿದೆ. ಚಿತ್ರದುರ್ಗದಲ್ಲಿ ಸಂಕಷ್ಟದಲ್ಲಿರುವ ಶೇಂಗಾ ರೈತರಿಗೆ ಮಧ್ಯಂತರ ಕ್ರಮವಾಗಿ ಶೇ.25 ರಷ್ಟು ಪರಿಹಾರ ನೀಡಲಾಗುತ್ತಿದೆ.

ರಾಜ್ಯದಲ್ಲಿ ಬಿತ್ತನೆ ಪ್ರಮಾಣ ಎಷ್ಟಿದೆ?
ಶೇ 82 ರಷ್ಟಿದೆ. ಚಿತ್ರದುರ್ಗ ಮತ್ತು ಹಾವೇರಿಯಂತಹ ಜಿಲ್ಲೆಗಳಲ್ಲಿ ಕ್ರಮವಾಗಿ ಶೇ.92 ಮತ್ತು ಶೇ.85 ರಷ್ಟಿದೆ. ಮಂಡ್ಯದಲ್ಲಿ ರಾಗಿ, ಭತ್ತ ಶೇ.100ರಷ್ಟು ಬಿತ್ತನೆಯಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮುಂಗಾರು ಆರಂಭವಾಗಿದ್ದರೂ ಬೀಜ ಮತ್ತು ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಾಗಲೀ ಅಥವಾ ಗುಣಮಟ್ಟವಿಲ್ಲದ ಬೀಜಗಳ ಬಗ್ಗೆಯಾಗಲೀ ಯಾವುದೇ ದೂರುಗಳು ಬಂದಿಲ್ಲ. ಬೀಜಗಳ ಕೊರತೆಯಾಗದಂತೆ ಹಿರಿಯ ಅಧಿಕಾರಿಗಳು ಹಾಗೂ ರೈತ ಸಂಪರ್ಕ ಕೇಂದ್ರಗಳ ಸಿಬ್ಬಂದಿಯೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದೇವೆ. ಗುಣಮಟ್ಟವಿಲ್ಲದ ಬೀಜಗಳು ಮಾರುಕಟ್ಟೆಗೆ ಬರದಂತೆ ಜಾಗರೂಕತೆ ವಹಿಸಲಾಗಿದೆ. ಮುಂಗಾರು ಬಿತ್ತನೆ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಇನ್ನೂ ಒಂದು ವಾರದವರೆಗೆ ಮಳೆ ಸಾಧ್ಯತೆ ಇರುವ ಕಡೆಗಳಲ್ಲಿ ಬಿತ್ತನೆ ಮುಂದುವರಿಸುವಂತೆ ಸೂಚನೆ ನೀಡಲಾಗಿದೆ.

ಎಪಿಎಂಸಿ (ಕೃಷಿ ಉತ್ಪನ್ನ ಮತ್ತು ಮಾರುಕಟ್ಟೆ ಸಮಿತಿ) ಕಾಯ್ದೆಯನ್ನು ಹಿಂಪಡೆಯಲಾಗಿದೆ. ಇದರ ಪರಿಣಾಮವೇನು?
ನಾವು ರೈತರನ್ನು ನಿರ್ಬಂಧಿಸುತ್ತಿಲ್ಲ, ಮಧ್ಯವರ್ತಿಗಳನ್ನು ನಿರ್ಬಂಧಿಸುವ ಪ್ರಯತ್ನ ಮಾಡಲಾಗುತ್ತಿದೆ. ಬೇರೆಡೆಯಿಂದ ರೈತರು ತಮ್ಮ ಉತ್ಪನ್ನಗಳನ್ನು ಬೆಂಗಳೂರಿಗೆ ತಂದು ತಮಗೆ ಬೇಕಾದ ಸ್ಥಳದಲ್ಲಿ ಮಾರಾಟ ಮಾಡುತ್ತಾರೆ. ಆದರೆ ಬೃಹತ್ ಪ್ರಮಾಣದಲ್ಲಿ ತಮ್ಮ ಉತ್ಪನ್ನಗಳನ್ನು ತರುವ ದೊಡ್ಡ ರೈತರು ಸ್ಥಳೀಯವಾಗಿ ಮಾರಾಟ ಮಾಡಲು ಸಾಧ್ಯವಿಲ್ಲ. ಹೊಸ ಕೃಷಿ ಕಾನೂನುಗಳಿಗೆ ರೈತರ ವಿರೋಧವಿದ್ದ ಕಾರಣ, ಅದನ್ನು ಹಿಂಪಡೆಯಲಾಗಿದೆ. ಇದು ರೈತರಿಗೆ ಅನುಕೂಲಕರವಾಗಿದೆ. ಅವರ ಬೇಡಿಕೆಯ ಮೇರೆಗೆ ಎಪಿಎಂಸಿ ಕಾಯ್ದೆಗೆ ತರಲಾಗಿರುವ ತಿದ್ದುಪಡಿಗಳನ್ನು ರದ್ದುಗೊಳಿಸಲಾಗಿದೆ. ಎಪಿಎಂಸಿಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು, ರೈತರಿಗೆ ತೊಂದರೆಯಾಗದಂತೆ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಪರಿಹರಿಸಲಿದ್ದಾರೆ.

ಬರ ಪರಿಸ್ಥಿತಿ ಹೇಗಿದೆ? ಈಗ ಮಳೆಯಾದರೆ ಪರಿಸ್ಥಿತಿ ಎದುರಿಸಲು ಸಾಧ್ಯವಾಗುತ್ತದೆಯೇ?
ಸ್ವಲ್ಪ ಮಟ್ಟಿಗೆ ಇದು ಸಹಾಯ ಮಾಡುತ್ತದೆ, ಕೆಲವು ಜಿಲ್ಲೆಗಳಲ್ಲಿ ಜೋಳ ಮತ್ತು ರಾಗಿ ಬೆಳೆಗಳನ್ನು ರಕ್ಷಣೆ ಮಾಡಬಹುದು. ಮಳೆಯಾದರೆ ಅಣೆಕಟ್ಟುಗಳ ಜಲಾನಯನ ಪ್ರದೇಶಗಳಲ್ಲಿ ಭತ್ತದ ಬೆಳೆಗಳ ರಕ್ಷಣೆಗೆ ಸಹಾಯ ಮಾಡುತ್ತದೆ. ನಮ್ಮಲ್ಲಿ 4 ಲಕ್ಷ ಮೆಟ್ರಿಕ್ ಟನ್ ಭತ್ತದ ಕೊರತೆ ಇರುವುದರಿಂದ ಇದು ನಮಗೆ ಸಹಾಯ ಮಾಡುತ್ತದೆ. ರಾಜ್ಯದಲ್ಲಿ ಸೆಪ್ಟೆಂಬರ್ ಅಂತ್ಯದಲ್ಲಿ ತಡವಾಗಿ ಮುಂಗಾರು ಮಳೆ ಬಿದ್ದ ನಿದರ್ಶನಗಳಿವೆ. ಮಳೆಯಾದರೆ ಸಹಾಯಕವಾಗಲಿದೆ. ಬರ ಸಂಬಂಧಿ ಸಮಸ್ಯೆಗಳ ಕುರಿತು ಸೆ.4ರಂದು ಸಚಿವ ಸಂಪುಟ ಉಪಸಮಿತಿ ಸಭೆ ನಡೆಸುತ್ತಿದ್ದೇವೆ. ಜಿಲ್ಲಾಧಿಕಾರಿಗಳು ರಾಜ್ಯದಾದ್ಯಂತ ಪರಿಸ್ಥಿತಿಯ ಕುರಿತು ವರದಿಗಳನ್ನು ಸಲ್ಲಿಸುತ್ತಾರೆ. ಅದರ ಆಧಾರದ ಮೇಲೆ ಬರಪೀಡಿತ ತಾಲೂಕುಗಳೆಂದು ಘೋಷಮೆ ಮಾಡಲಾಗುತ್ತದೆ.

ಸೆ.4ರ ಸಭೆ ನಂತರ ಸರ್ಕಾರದ ಮುಂದಿನ ನಡೆಯೇನು?
ಬೇರೆ ತಾಲ್ಲೂಕುಗಳಿಂದ ಬೇಡಿಕೆ ಬರುವುದರಿಂದ ವಾರ ಅಥವಾ ಹತ್ತು ದಿನಕ್ಕೊಮ್ಮೆ ಸಭೆ ನಡೆಸುತ್ತೇವೆ. ಬೆಳೆಗಳಿಗೆ ವಿಮೆಯನ್ನು ತೆರವುಗೊಳಿಸಲಾಗುತ್ತಿದೆ. ಪರಿಹಾರವನ್ನು ಬಿಡುಗಡೆ ಮಾಡಲು ಸರಾಸರಿ ಏಳು ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ರೈತರು ವಿಮಾ ವ್ಯಾಪ್ತಿಗೆ ಒಳಪಡದ ಹಲವು ನಿದರ್ಶನಗಳಿವೆ. ಆ ಸಮಸ್ಯೆಗಳನ್ನು ನಿಭಾಯಿಸಬೇಕಾಗಿದೆ. ಚಿತ್ರದುರ್ಗದಲ್ಲಿ ರೈತ ಹಾಗೂ ವಿಧವೆ ಮಹಿಳೆಯೊಬ್ಬರಿಗೆ ವಿಮೆಯ ಹಣ ದೊರೆತಿಲ್ಲ. ಅವರಿಗೆ ನಾನು ಅವರಿಗೆ 25,000 ರೂ. ನೀಡಿದೆ.

ಬರ ಪರಿಹಾರಕ್ಕೆ ಎಷ್ಟು ಹಣ ಮೀಸಲಿಟ್ಟಿದ್ದೀರಿ?
ಬರಗಾಲವನ್ನು ಎದುರಿಸುವ ಪರಿಸ್ಥಿತಿ ಬಂದರೆ ರಾಜ್ಯದ ಮತ್ತು ಕೇಂದ್ರ ಸರ್ಕಾರ ನೀಡುವ ಹಣವನ್ನು ಬಳಕೆ ಮಾಡಲು ಯಾವುದೇ ನಿರ್ಬಂಧಗಳಿಲ್ಲ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹಣದ ಕೊರತೆಯಾಗದಂತೆ ಆರ್‌ಡಿಪಿಆರ್ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್) ಇಲಾಖೆಗೆ ಸಿಎಂ ಸೂಚನೆ ನೀಡಿದ್ದಾರೆ. ಹೊಸ ಬೋರ್ ವೆಲ್ ಕೊರೆಸಿ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾಗುತ್ತದೆ.

ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ) ನಿಯಮಗಳನ್ನು ಸಡಿಲಿಸಲು ನೀವು ಕೇಂದ್ರಕ್ಕೆ ಪತ್ರ ಬರೆದಿದ್ದೀರಿ. ಕೇಂದ್ರದಿಂದ ಪ್ರತಿಕ್ರಿಯೆ ಬಂದಿದೆಯೇ?
ಅವರಿಂದ ಉತ್ತರ ಬಂದಿಲ್ಲ. ಉತ್ತರಿಸುವುದೂ ಇಲ್ಲ ಎಂದು ಭಾವಿಸಬಹುದು. ಉತ್ತರ ಕೊಡುವ ಮನಸ್ಸಿದ್ದರೆ, ಇಷ್ಟೊತ್ತಿಗೆ ಕೊಡುತ್ತಿದ್ದರು. ನಮ್ಮ ಅಧಿಕಾರಿಗಳು ಕೇಂದ್ರದೊಂದಿಗೆ ಸಂಪರ್ಕದಲ್ಲಿದ್ದಾರೆ. ಮಳೆಯಾಶ್ರಿತ ಮತ್ತು ನೀರಾವರಿ ಬೆಳೆಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಪರಿಹಾರ ನೀಡುತ್ತಿದ್ದೇವೆ.

ರಾಜ್ಯ ಮತ್ತು ಕೇಂದ್ರದ ನಡುವೆ ಘರ್ಷಣೆ ಇದೆಯೇ?
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಕೇಂದ್ರ ಸರ್ಕಾರ ಗುಜರಾತ್‌ಗೆ ಬೆಂಬಲ ನೀಡಿದಂತೆ ರಾಜ್ಯಕ್ಕೆ ಸಂಪೂರ್ಣ ಬೆಂಬಲ ನೀಡಲಿಲ್ಲ. ಪ್ರವಾಹದ ಸಂದರ್ಭದಲ್ಲಿ ರಾಜ್ಯವನ್ನು ನಿರ್ಲಕ್ಷಿಸಿದ್ದರು. ನಮಗೆ ಜಿಎಸ್‌ಟಿ ಪರಿಹಾರವನ್ನು ಸಮರ್ಪಕವಾಗಿ ನೀಡಿಲ್ಲ, ರಾಜ್ಯದ ಅರ್ಧದಷ್ಟು ತೆರಿಗೆಯನ್ನು ಕೇಂದ್ರ ಹಿಂತಿರುಗಿಸಿಲ್ಲ. ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ಬೇಡಿಕೆಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ನಾವು ಆ ನಿಟ್ಟಿನಲ್ಲಿ ಹೋರಾಡಬೇಕಿದೆ ಬರ ಸಮಸ್ಯೆಗೆ ಸಂಬಂಧಿಸಿದಂತೆ ಅವರು ನಿಯಮಾವಳಿಗಳನ್ನು ಸಡಿಲಿಸಿಲ್ಲ. ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಕೇಂದ್ರವು ವರ್ಷವಿಡೀ ಅದರ ಸಂಗ್ರಹಣೆಗೆ ಅವಕಾಶ ನೀಡುವ ಮೂಲಕ ನಿಯಮಗಳನ್ನು ಸಡಿಲಿಸಬೇಕು. ಕೊಬ್ಬರಿ ಋತುಮಾನದ ಬೆಳೆಯಲ್ಲ ಸಂಪುಟ ಉಪ ಸಮಿತಿಯಲ್ಲಿ ಈ ವಿಚಾರ ಕುರಿತು ಚರ್ಚೆ ನಡೆಸಿದ್ದೆ. ಕೊಬ್ಬರಿ ಬೆಲೆ ಎಂಎಸ್‌ಪಿಗಿಂತ ಕಡಿಮೆಯಾದಾಗ ವರ್ಷವಿಡೀ ಅವುಗಳ ಖರೀದಿಗೆ ನಿರ್ದೇಶನ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲು ನಿರ್ಧಾರ ಕೈಗೊಳ್ಳಲಾಯಿತು.

ರಾಜ್ಯದಲ್ಲಿ ಸುಮಾರು 50 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ರಕ್ಷಣೆಗೆ ಸರ್ಕಾರ ಧಾವಿಸಬೇಕೆಂದು ಇತ್ತೀಚೆಗೆ ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದರು?
ಆತ್ಮಹತ್ಯೆಯ ಘಟನೆಗಳು ವರದಿಯಾಗಿವೆ, ಆದರೆ, ವಿರೋಧ ಪಕ್ಷಗಳು ಹೇಳುವಷ್ಟು ಅಲ್ಲ. ಆದರೆ, ನಮ್ಮ ಸರ್ಕಾರ ಒಂದು ಸಾವನ್ನೂ ಲಘುವಾಗಿ ಪರಿಗಣಿಸುವುದಿಲ್ಲ. ಅವರು ವಿರೋಧ ಪಕ್ಷದಲ್ಲಿ ಕುಳಿತು ರಾಜಕೀಯ ಮಾಡುತ್ತಾರೆ, ಆದರೆ, ಅವರೂ ಈ ವಿಚಾರದಲ್ಲಿ ನಮ್ಮೊಂದಿಗೆ ಸಹಕರಿಸಬೇಕು. ಸರಕಾರವು ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ 5 ಲಕ್ಷ ರೂ.ವರೆಗಿನ ಕೃಷಿ ಸಾಲವನ್ನು ವಿತರಿಸುತ್ತಿದೆ. ಒಬ್ಬ ರೈತ ಲೇವಾದೇವಿದಾರರ ಬಳಿ ಹೋಗಿ ಸಾಲ ಪಡೆದರೆ, ಅವನು ತಿಂಗಳಿಗೆ ಶೇ.2 ಬಡ್ಡಿಯನ್ನು ಪಾವತಿಸಬೇಕು. ಸೊಸೈಟಿಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆದರೆ ಆ ಹಣವನ್ನು ಉಳಿಸಬಹುದು. ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರೈತರಿಗೆ ಭದ್ರತೆಯನ್ನು ನೀಡುತ್ತಿದ್ದು, ಇದು ಆತ್ಮಹತ್ಯೆ ಪ್ರಕರಣಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

2018 ರಿಂದ 2022 ರವರೆಗೆ 4,257 ರೈತರು ಸಾವನ್ನಪ್ಪಿದ್ದಾರೆ. ಈ ಪೈಕಿ 3,442 ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಉಳಿದವರ ಸ್ಥಿತಿ-ಗತಿ ಏನು?
ಆತ್ಮಹತ್ಯೆ ಘಟನೆಗಳು ವರದಿಯಾದಾಗ ಒಂದು ವಾರದೊಳಗೆ ಪರಿಹಾರ ನೀಡಲು ಪ್ರಯತ್ನಿಸುತ್ತೇವೆ. ಅಂತಹ ಯಾವುದೇ ಪ್ರಕರಣಗಳನ್ನು ಆರು ತಿಂಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿಸಿಕೊಳ್ಳುವುದಿಲ್ಲ. ದಾಖಲೆ-ಸಂಬಂಧಿತ ಸಮಸ್ಯೆಗಳಿಂದ ಒಂದು ಅಥವಾ ಎರಡು ಕುಟುಂಬಗಳು ವಿಳಂಬವನ್ನು ಎದುರಿಸಬಹುದು. ಆ ಪ್ರಕರಣಗಳನ್ನು ಕೂಡ ಶೀಘ್ರಗತಿಯಲ್ಲಿ ತೆರವುಗೊಳಿಸಲಾಗುತ್ತದೆ. ವಿಧಿವಿಜ್ಞಾನ ವರದಿ ಬಾಕಿ ಇದ್ದರೆ ಮಾತ್ರ ವಿಳಂಬವಾಗುತ್ತದೆ.

ಕಾವೇರಿ ವಿವಾದ ಮತ್ತೆ ಬಂದಿದ್ದು, ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. I.N.D.I.A ಬಣದಲ್ಲಿ ಮಿತ್ರ ಪಕ್ಷವಾಗಿರುವ ಡಿಎಂಕೆ ಜೊತೆಗೆ ಕಾಂಗ್ರೆಸ್ ಕೈಜೋಡಿಸಿದೆ. ಹೀಗಾಗಿಯೇ ಸರ್ಕಾರ ಕಾವೇರಿ ವಿಚಾರದಲ್ಲಿ ದೃಢವಾದ ನಿಲುವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ...?
ವಿರೋಧ ಪಕ್ಷದವರು ಏನು ಬೇಕಾದರೂ ಹೇಳುತ್ತಾರೆ. ಭಾರತ ಸರ್ಕಾರ ಸ್ಥಾಪಿಸಿದ ನ್ಯಾಯಮಂಡಳಿಯ ಆದೇಶದಂತೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಸ್ಥಾಪಿಸಲಾಯಿತು. ನೀರು ಹಂಚಿಕೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ನಮಗಿಲ್ಲ. ಪ್ರಾಯೋಗಿಕ ಪರಿಸ್ಥಿತಿಯನ್ನು ವಿವರಿಸಿ ಅಫಿಡವಿಟ್ ಸಲ್ಲಿಸಿದ್ದೇವೆ. 26 ಬಿಜೆಪಿ ಸಂಸದರು ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಸಚಿವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಬೇಕಿತ್ತು. ಆದರೆ, (ಬಿಜೆಪಿ ನಾಯಕರು) ರಾಜಕೀಯ ಮಾಡುತ್ತಿದ್ದಾರೆ. ಎನ್‌ಡಿಎ-2 ಅಧಿಕಾರಕ್ಕೆ ಬಂದು ಸುಮಾರು ಐದು ವರ್ಷಗಳು ಕಳೆದರೂ ಇದುವರೆಗೆ ಕಾವೇರಿ ನೀರು ಹಂಚಿಕೆ ಕುರಿತು ಸಂಕಷ್ಟ ಸೂತ್ರವನ್ನು ರೂಪಿಸಿಲ್ಲ. ಏಪ್ರಿಲ್, ಮೇ, ಜೂನ್, ಆಗಸ್ಟ್ ತಿಂಗಳಿಗೆ ನೀರು ಬಿಡಬೇಕು, ಬಿಡದಿದ್ದರೆ ತಮಿಳುನಾಡು ನ್ಯಾಯಾಲಯದ ಮೊರೆ ಹೋಗುತ್ತದೆ. ಕೇಂದ್ರವು ಸಂಕಷ್ಟ ಸೂತ್ರವನ್ನು ಮುಂದಿಟ್ಟಿದ್ದರೆ ನಾವು ಈ ಪರಿಸ್ಥಿತಿಯನ್ನು ಎದುರಿಸುತ್ತಿರಲಿಲ್ಲ.

ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಇಳಿಯುತ್ತಿದೆ. ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಏನು ಹೇಳುತ್ತೀರಿ?
ರೈತರು ಪ್ರತಿಭಟನೆ ನಡೆಸುವುದು ಸೂಕ್ತವಾಗಿದೆ. ಅವರು ಹೇಳುತ್ತಿರುವುದೂ ಕೂಡ ಪ್ರಾಯೋಗಿಕವಾಗಿದೆ. ನಾವು ಸರ್ವಪಕ್ಷ ನಡೆಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಿತು. ಪ್ರಸ್ತುತ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಸ್ಥಿತಿಯಲ್ಲಿ ಇಲ್ಲ. ಸಂಕಷ್ಟ ಸೂತ್ರ ರಚಿಸುವಂತೆ ಪ್ರಧಾನಿ ಮೋದಿಯವರ ಬಳಿ ನಿಯೋಗ ಕೊಂಡೊಯ್ಯಲು ನಿರ್ಧರಿಸಲಾಗಿದೆ. ಸಂಕಷ್ಟ ಸೂತ್ರವಿಲ್ಲದಿದ್ದರೆ ನೀರು ಬಿಡುವುದು ತುಂಬಾ ಕಷ್ಟವಾಗುತ್ತದೆ.

ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರೊಂದಿಗೆ ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿದ್ದಾರೆ ಎಂಬ ವರದಿಗಳಿದ್ದು, ಈ ನಾಯಕರನ್ನು ಕಾಂಗ್ರೆಸ್‌ಗೆ ಕರೆತರಲು ನೀವು ಕೂಡ ಮುಂಚೂಣಿಯಲ್ಲಿದ್ದೀರಿ ಎಂದು ಹೇಳಲಾಗುತ್ತಿದೆ. ಎಷ್ಟು ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರೆ?
ಸರ್ಕಾರವನ್ನು ಸ್ಥಿರವಾಗಿಡಲು ನಮಗೆ ಬೇರೆ ಪಕ್ಷಗಳ ಶಾಸಕರ ಅಗತ್ಯವಿಲ್ಲ. ನಮ್ಮಲ್ಲಿ ಈಗಾಗಲೇ 136 ಶಾಸಕರಿದ್ದು, ಇಬ್ಬರು ಪಕ್ಷೇತರರ ಬೆಂಬಲವಿದೆ. ಬಿಜೆಪಿಯ ಇಂದಿನ ಸ್ಥಿತಿ ಗುಟ್ಟಾಗಿ ಉಳಿದಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕರಿಲ್ಲದೆ ಅಧಿವೇಶನ ನಡೆಯಿತು. ಜೆಡಿಎಸ್‌ನ ಕೆಲ ಮುಖಂಡರು ಬಿಜೆಪಿ ಸೇರುವ ಸಾಧ್ಯತೆ ಇದ್ದು, ನಂತರ ವಿಪಕ್ಷ ನಾಯಕರ ನೇಮಕ ಆಗಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಅದೂ ಆಗಲಿಲ್ಲ. ಪಕ್ಷ ಯಡಿಯೂರಪ್ಪ ಅವರನ್ನು ಪ್ರತ್ಯೇಕಿಸಿದೆ. ಬಿಜೆಪಿಯಲ್ಲಿನ ಅನಿಶ್ಚಿತತೆಯು ಅದರ ನಾಯಕರನ್ನು ಹತಾಶೆಗೊಳಿಸಿದೆ. ಬಿಜೆಪಿಯಲ್ಲಿನ ಮಾಜಿ ಶಾಸಕರು, ಮುಖಂಡರು ಹಾಗೂ ಕೆಲ ಶಾಸಕರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ. ಅದೇ ರೀತಿ ಜೆಡಿಎಸ್'ನಲ್ಲಿನ ಪರಿಸ್ಥಿತಿಯೂ ಇದೆ. ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸುವ ವಿಶ್ವಾಸದಲ್ಲಿತ್ತು. ಆದರೆ. ಅವರ ಸಂಖ್ಯೆ 19 ಕ್ಕೆ ಇಳಿದಿದೆಯ ಅದನ್ನು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಈಗಿನ ಪರಿಸ್ಥಿತಿ ಹಿಂದೆ ಹೇಗಿತ್ತೋ ಹಾಗೆ ಇಲ್ಲ. ಒಂದು ವೇಳೆ ಶಾಸಕರು ಆಡಳಿತ ಪಕ್ಷದವರಲ್ಲದಿದ್ದರೆ ಮುಂದಿನ ಚುನಾವಣೆಯ ಸಂದರ್ಭದಲ್ಲಿ ಸಾಕಷ್ಟು ಹೋರಾಟ ಎದುರಿಸಬೇಕಾಗುತ್ತದೆ. ಭವಿಷ್ಯದಲ್ಲಿ ಪರಿಸ್ಥಿತಿ ಹೇಗೆ ಎಂಬುದು 19 ಶಾಸಕರ ಮೂಡಿದೆ. ಹಲವರು ಈಗಾಗಲೇ ನಮ್ಮ ಸಂಪರ್ಕದಲ್ಲಿದ್ದಾರೆ. ನಮ್ಮೊಂದಿಗೆ ಸೇರಲು ಬಯಸುವವರನ್ನು ಪಕ್ಷ ಸ್ವಾಗತಿಸುತ್ತದೆ.

ಕಳೆದ ಬಾರಿ ಸುಮಲತಾ ಅವರನ್ನು ಮಂಡ್ಯ ಲೋಕಸಭೆಗೆ ಗೆಲ್ಲಿಸಲು ಪರೋಕ್ಷವಾಗಿ ಸಹಕರಿಸಿದ್ದೀರಿ. ಈ ಬಾರಿ ಯಾವ ತಂತ್ರವಿದೆ? ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಬಗ್ಗೆ ಎಷ್ಟು ವಿಶ್ವಾಸವಿದೆ?
ಈ ಬಾರಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಪರಿಸ್ಥಿತಿ ಮತ್ತು ಅಭ್ಯರ್ಥಿಗಳು ಫಲಿತಾಂಶಗಳನ್ನು ನಿರ್ಧರಿಸುತ್ತಾರೆ. ಈ ಬಾರಿ ಮಂಡ್ಯದಲ್ಲಿ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com